janadhvani

Kannada Online News Paper

ಜುಲೈ 1 ರಿಂದ ಬ್ಯಾಂಕಿಂಗ್‌ ನಿಯಮಗಳು ಬದಲಾವಣೆ- ಸೇವಾ ಶುಲ್ಕ ಹೆಚ್ಚಳ ಸಾಧ್ಯತೆ

ನವದೆಹಲಿ: ಜುಲೈ 1 ರಿಂದ ದೇಶದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಹಲವು ಪ್ರಮುಖ ನಿಯಮಗಳು ಬದಲಾಗಲಿವೆ. ಬ್ಯಾಂಕ್ ವಹಿವಾಟಿನಿಂದ ಹಿಡಿದು ಎಟಿಎಂ ಕಾರ್ಡ್ ವಿಥ್ ಡ್ರಾ ವಲ್ ವರೆಗಿನ ನಿಯಮಗಳು ಬದಲಾಗಲಿವೆ. ನಿಯಮಗಳಲ್ಲಿನ ಬದಲಾವಣೆಗಳನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ. ನಿಯಮಗಳಲ್ಲಿನ ಬದಲಾವಣೆಯ ಜೊತೆಗೆ, ನೀವು ಬ್ಯಾಂಕಿನ ಅನೇಕ ಸೇವೆಗಳಿಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುವ ಸಾಧ್ಯತೆ ಇದೆ. ಈ ನಿಯಮಗಳಲ್ಲಾಗುವ ಬದಲಾವಣೆಗಳನ್ನು ತಿಳಿದುಕೊಳ್ಳುವ ಮೂಲಕ ನೀವು ಆಗುವ ಹಾನಿಯಿಂದ ತಪ್ಪಿಸಿಕೊಳ್ಳಬಹುದು.

  • ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಉಳಿತಾಯ ಖಾತೆಯ ಮೇಲಿನ ಬಡ್ಡಿದರವನ್ನು ಶೇಕಡಾ 0.50 ರಷ್ಟು ಕಡಿತಗೊಳಿಸಿದೆ. ಜುಲೈ 1 ರಿಂದ ಬ್ಯಾಂಕಿನ ಉಳಿತಾಯ ಖಾತೆಗೆ ವಾರ್ಷಿಕ ಗರಿಷ್ಠ 3.25 ರಷ್ಟು ಬಡ್ಡಿ ಸಿಗಲಿದೆ. ಪಿಎನ್‌ಬಿಯ ಉಳಿತಾಯ ಖಾತೆಯಲ್ಲಿ, 50 ಲಕ್ಷ ರೂ.ಗಳ ಇಡಲಾಗುವ ಮೊತ್ತಕ್ಕೆ ವಾರ್ಷಿಕ 3 ಪ್ರತಿಶತ ಮತ್ತು 50 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಮೇಲೆ ವಾರ್ಷಿಕವಾಗಿ 3.25 ಶೇಕಡಾ ಬಡ್ಡಿಯನ್ನು ನೀಡಲಾಗುವುದು. ಈ ಹಿಂದೆ ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ಕೂಡ ಉಳಿತಾಯ ಖಾತೆಯ ಬಡ್ಡಿದರವನ್ನು ಕಡಿತಗೊಳಿಸಿವೆ.
  • ಜುಲೈ 1 ರಿಂದ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಕನಿಷ್ಠ ಬಾಕಿ ಇರುವ ನಿಯಮದಲ್ಲಿ ನೀಡಲಾಗಿದ್ದ ಸಡಿಲಿಕೆ ಕೊನೆಗೊಳ್ಳುತ್ತಿದೆ. ಲಾಕ್ ಡೌನ್ ಸಮಯದಲ್ಲಿ ಜೂನ್ 30 ರವರೆಗೆ ಉಳಿತಾಯ ಖಾತೆಯಲ್ಲಿ ಕನಿಷ್ಠ ಮಾಸಿಕ ಬಾಕಿ ಉಳಿಸಿಕೊಳ್ಳುವ ಅಗತ್ಯವನ್ನು ಸರ್ಕಾರ ಕೊನೆಗೊಳಿಸಿತ್ತು. ಗ್ರಾಹಕರ ಉಳಿತಾಯ ಖಾತೆಯಲ್ಲಿ ಕನಿಷ್ಠ ಬಾಕಿ ಇಲ್ಲದಿದ್ದರೆ, ಬ್ಯಾಂಕುಗಳು ಅದಕ್ಕೆ ದಂಡ ವಿಧಿಸುವ ಹಾಗಿಲ್ಲ ಎಂದು ಸರ್ಕಾರ ಹೇಳಿತ್ತು. ಆದರೆ ಇದೀಗ ಮೆಟ್ರೋ ನಗರ, ನಗರ, ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳ ಪ್ರಕಾರ, ವಿವಿಧ ಬ್ಯಾಂಕುಗಳಲ್ಲಿ ಉಳಿತಾಯ ಖಾತೆಯಲ್ಲಿ ಕನಿಷ್ಠ ಸಮತೋಲನವನ್ನು ಇಟ್ಟುಕೊಳ್ಳುವ ಮಿತಿ ಭಿನ್ನವಾಗಿದ್ದು, ಪುನಃ ಈ ನಿಯಮ ಜಾರಿಗೆ ಬರುತ್ತಿದೆ.
  • ದೇಶಾದ್ಯಂತ ಎಟಿಎಂಗಳಲ್ಲಿ ಹಣ ಹಿಂಪಡೆಯುವಿಕೆಯ ಮೇಲೆ ನೀಡಲಾಗಿದ್ದ ವಿನಾಯಿತಿ ಜುಲೈ 1 ರಿಂದ ಕೊನೆಗೊಳ್ಳುತ್ತಿದೆ. ಪ್ರಸ್ತುತ, ಎಟಿಎಂನಿಂದ 10 ಸಾವಿರ ರೂಪಾಯಿಗಳನ್ನು ಹಿಂಪಡೆಯಲು ವಿನಾಯಿತಿ ಇದೆ. ಇದೇ ವೇಳೆ, ಲಾಕ್ ಡೌನ್ ಸಮಯದಲ್ಲಿ, ಹಿಂಪಡೆಯುವಿಕೆಯ ಮೇಲೆ ಮೂರು ತಿಂಗಳವರೆಗೆ ವಿನಾಯಿತಿ ನೀಡಲಾಗಿತ್ತು. ಈ ಅವಧಿಯಲ್ಲಿ ಎಟಿಎಂಗಳಿಂದ ಹಣವನ್ನು ಹಿಂಪಡೆಯುವಿಕೆಯಾ ಮೇಲೆ ಯಾವುದೇ ಶುಲ್ಕ ವಿಧಿಸಲಾಗುತ್ತಿರಲಿಲ್ಲ. ಈ ವಿನಾಯಿತಿ ಜೂನ್ 30 ರವರೆಗೆ ಮಾತ್ರ ನೀಡಲಾಗಿದೆ. ಲಾಕ್‌ಡೌನ್‌ನಿಂದ ಜನರಿಗೆ ಪರಿಹಾರ ನೀಡಲು ಈ ವಿನಾಯಿತಿ ನೀಡಲಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರನ್ ಹೇಳಿದ್ದರು.
  • ಬ್ಯಾಂಕ್ ಆಫ್ ಬರೋಡಾ ಈ ಹಿಂದೆ ತನ್ನ ಗ್ರಾಹಕರಿಗೆ ಎಸ್‌ಎಂಎಸ್ ಕಳುಹಿಸಿ ತಮ್ಮ ಬ್ಯಾಂಕ್ ಖಾತೆಯನ್ನು ಆದಷ್ಟು ಬೇಗ ನವೀಕರಿಸುವಂತೆ ಹೇಳಿತ್ತು ಹಾಗೂ ನವೀಕರಿಸದ ಖಾತೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಿತ್ತು. ಇತ್ತೀಚೆಗಷ್ಟೇ ಈ ಬ್ಯಾಂಕ್ ನಲ್ಲಿ ವಿಜಯ ಮತ್ತು ದೇನಾ ಬ್ಯಾಂಕ್ ಗಳು ವಿಲೀನಗೊಂಡಿವೆ. ಬ್ಯಾಂಕ್ ನವೀಕರಣಕ್ಕಾಗಿ, ಆಧಾರ್, ಪ್ಯಾನ್ ಮತ್ತು ಪಡಿತರ ಚೀಟಿ ಅಥವಾ ಜನನ ತಿಥಿ ಹೊಂದಿರುವ ಯಾವುದೇ ದಾಖಲಾತಿ ಸಲ್ಲಿಸಬೇಕು. ಒಂದು ವೇಳೆ ಸಲ್ಲಿಸದೆ ಹೋದಲ್ಲಿ ಖಾತೆ ಸ್ಥಗಿತಗೊಳ್ಳಲಿದೆ.

error: Content is protected !! Not allowed copy content from janadhvani.com