janadhvani

Kannada Online News Paper

ಲಾಕ್‍ಡೌನ್ ವೇಳೆ ಖುರ್ ಆನ್ ಕಂಠಪಾಠ- ಶಮ್ಮಾಸ್ ಸಾಧನೆಗೆ ಭಾರೀ ಪ್ರಶಂಸೆ

ಮಂಗಳೂರು: ಕೋವಿಡ್ 19 ಮಹಾಮಾರಿಯಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಶಾಲಾ-ಕಾಲೇಜುಗಳು, ಮದರಸಾಗಳು ಸೇರಿದಂತೆ ಎಲ್ಲ ಬಗೆಯ ವಿದ್ಯಾಸಂಸ್ಥೆಗಳು ಮುಚ್ಚಲ್ಪಟ್ಟಿವೆ. ಜನರೆಲ್ಲರೂ ತಮ್ಮ ಮನೆಗಳಲ್ಲಿಯೇ ಸ್ವಯಂ ಆಗಿ ಬಂಧಿಯಾಗಿದ್ದಾರೆ. ಉದ್ಯೋಗವಿಲ್ಲದೆ ಜನರು ಕಂಗಾಲಾಗಿದ್ದಾರೆ. ಕೆಲವು ಕಡೆಗಳಲ್ಲಿ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಜನರು ದಿಕ್ಕುತೋಚದಂತಾಗಿದ್ದಾರೆ.

ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗದೆ, ಕಲಿಕೆಯ ಕಡೆಗೆ ಗಮನ ಹರಿಸದೆ ಸೋಮಾರಿಗಳಾಗುತ್ತಿದ್ದಾರೆ ಎಂಬ ಅಪವಾದವೂ ವಿದ್ಯಾರ್ಥಿಗಳ ಪೋಷಕರ ಕಡೆಯಿಂದ ಕೇಳಿ ಬರುತ್ತಿದೆ. ಆದರೆ ಇದೆಲ್ಲಕ್ಕೂ ತದ್ವಿರುದ್ಧವಾಗಿ ಹಲವು ಬಗೆಯ ಪ್ರತಿಭೆಗಳು ನಾನಾ ಕಡೆಗಳಿಂದ ಹೊರಹೊಮ್ಮುತ್ತಿರುವುದು ಲಾಕ್‍ಡೌನ್ ಕಂಟಕಕ್ಕೆ ತುಸು ಆಶ್ವಾಸನೆ ನೀಡಿದೆ.

ತನಗೆ ದೊರೆತ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೆ ಅದನ್ನು ತನ್ನ ಜೀವನದ ಅತ್ಯುನ್ನತ ಗುರಿಯಾದ ಕುರ್‍ಆನ್ ಕಂಠಪಾಠ ಮಾಡಲು ಉಪಯೋಗಿಸಿದ ಆದರ್ಶ ವಿದ್ಯಾರ್ಥಿ ಮುಹಮ್ಮದ್ ಶಮ್ಮಾಸ್ ಸಾಧನೆಗೆ ಎಲ್ಲೆಡೆಯಿಂದಲೂ ಪ್ರಶಂಸೆಗಳ ಸುರಿಮಳೆಯೇ ಹರಿದುಬರುತ್ತಿದೆ. ತನ್ಮೂಲಕ ವಿದ್ಯಾಸಂಸ್ಥೆಗಳು ಮಾತ್ರವೇ ಮುಚ್ಚಲ್ಪಟ್ಟಿವೆ ಹೊರತು ವಿದ್ಯೆಯಲ್ಲ ಎಂಬ ಸತ್ಯವನ್ನು ಅವರು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ.

ಹೌದು. ಮೂಲತಃ ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮಕ್ಕೊಳಪಡುವ ಅಂಚಿನಡ್ಕ ಹಸೈನಾರ್ ಹಾಜಿ ಹಾಗೂ ಝುಹ್ರಾ ದಂಪತಿಯ ಸುಪುತ್ರನೇ ಮುಹಮ್ಮದ್ ಶಮ್ಮಾಸ್. ಕಲಿಕೆಯಲ್ಲಿ ಪ್ರತಿಭಾವಂತರಾಗಿದ್ದ ಇವರು ಭೌತಿಕ ಕಲಿಕೆಯ ಜೊತೆಗೆ ಆಧ್ಯಾತ್ಮಿಕ ಕಲಿಕೆಯತ್ತಲೂ ಬಲು ಆಸಕ್ತಿ ತೋರಿಸಿದ್ದರು. ಇದಕ್ಕಾಗಿ ಅವರು ಆಯ್ದುಕೊಂಡದ್ದು ದ.ಕ.ಜಿಲ್ಲೆಯ ಖ್ಯಾತ ವಿದ್ವಾಂಸರಾಗಿದ್ದ ಮರ್ಹೂಂ ಟಿ.ಎಚ್.ಉಸ್ತಾದರು ಸ್ಥಾಪಿಸಿ ಇದೀಗ ಹಲವು ವಿದ್ವಾಂಸರು,ಸಾದಾತುಗಳ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಬೆಳ್ತಂಗಡಿ ತಾಲೂಕಿನ ಮೂಡಡ್ಕದ ಅಲ್‍ಮದೀನತುಲ್ ಮುನವ್ವರದ ಮದೀನತುಲ್ ಉಲೂಂ ಕಾಲೇಜ್ ಆಫ್ ಶರೀಅದ ಪ್ರಿನ್ಸಿಪಾಲ್ ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು ಇವರ ದರ್ಸ್.

ಇಲ್ಲಿನ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಎರಡು ವರ್ಷಗಳ ಹಿಂದೆ ಏಳನೆ ತರಗತಿಗೆ ಸೇರಿದ ಶಮ್ಮಾಸ್, ಶಾಲಾ ಕಲಿಕೆಯ ಬಳಿಕ ದರ್ಸ್ ಸೇರಿದಂತೆ ಜೀವನಕ್ಕೆ ಅತಿ ಆವಶ್ಯವಾದ ಶಿಕ್ಷಣವನ್ನು ಉಸ್ತಾದರಿಂದ ಕಲಿಯಲು ತೊಡಗುತ್ತಾರೆ. ಕಲಿಯುತ್ತಿರುವ ಸಮಯದಲ್ಲಿಯೇ ತನಗೆ ಕುರ್‍ಆನ್ ಕಂಠಪಾಠ ಮಾಡಬೇಕೆಂಬ ಆಗ್ರಹದೊಂದಿಗೆ ಕುರ್‍ಆನ್ ತರಗತಿಯನ್ನು ಹೇಳಿಕೊಡುವಂತೆ ಉಸ್ತಾದರಲ್ಲಿ ಭಿನ್ನವಿಸಿಕೊಳ್ಳುತ್ತಾರೆ. ವಿದ್ಯಾರ್ಥಿಯ ಮನವಿಗೆ ಸಕಾರಾತ್ಮಕವಾಗಿಯೇ ಸ್ಪಂದಿಸಿದ ಉಸ್ತಾದ್,ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಇವರಿಗೆ ವಿದ್ಯಾರ್ಥಿಗಳಿಗೆ ಅತಿ ಕಠಿಣವಾಗಿ ಪರಿಣಮಿಸುವ ಕುರ್‍ಆನ್ ಕಂಠಪಾಠದ ತರಗತಿ ಆರಂಭಿಸುತ್ತಾರೆ. ಕಲಿಕೆಯು ಯಾವುದೇ ಅಡಚಣೆಯಿಲ್ಲದೆ ನಿರಂತರವಾಗಿ ಸಾಗುತ್ತದೆ.

ಅರ್ಧದಷ್ಟು ಕುರ್‍ಆನ್ ಕಂಠಪಾಠ ಮಾಡುವ ವೇಳೆ ಲಾಕ್‍ಡೌನ್ ಘೋಷಣೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಬಾಕಿಯಾದ ಶಮ್ಮಾಸ್, ತಂದೆ ಹಾಗೂ ಉಸ್ತಾದರ ಪ್ರೋತ್ಸಾಹದೊಂದಿಗೆ ನಿರಂತರವಾಗಿ ಅಭ್ಯಾಸ ಮಾಡಿ ತಮ್ಮ ಬಹುಕಾಲದ ಕನಸನ್ನು ಈಡೇರಿಸಿಕೊಂಡು ಇದೀಗ ಹಾಫಿಲ್ ಆಗಿ ಹೊರಹೊಮ್ಮಿ ಎಲ್ಲಾ ವಿದ್ಯಾರ್ಥಿಗಳಿಗೂ ಮಾದರಿಯಾಗಿದ್ದಾರೆ.


ಹಾಫಿಲ್ ಮುಹಮ್ಮದ್ ಶಮ್ಮಾಸ್, ವಿದ್ಯಾರ್ಥಿ
ಖುರ್ ಆನ್ ಕಲಿಕೆಯಲ್ಲಿ ನನಗೆ ಹೆಚ್ಚಿನ ಆಸಕ್ತಿ ಇತ್ತು. ಈ ಸಂಬಂಧ ಉಸ್ತಾದರ ಬಳಿ ಅಭ್ಯಾಸ ನಡೆಸುತ್ತಿದ್ದೆ. ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲಿಯೇ ಬಂಧಿಯಾಗಬೇಕಾಯಿತು. ಆಗ ಉಸ್ತಾದರು, ತಂದೆ-ತಾಯಿಯವರ ನಿರಂತರ ಪ್ರೋತ್ಸಾಹದ ಕಾರಣ ಮನೆಯಲ್ಲಿಯೇ ಕುಳಿತು ಅಭ್ಯಾಸವನ್ನು ಮುಂದುವರಿಸಿದೆ. ಬೆಳಗ್ಗೆ ಸುಬಹ್ ನಮಾಝ್‍ಗಿಂತ ಮುಂಚಿತವಾಗಿಯೇ ಎದ್ದು ಅಭ್ಯಾಸವನ್ನು ನಡೆಸುತ್ತಿದ್ದೆ. ಸುಬುಹ್ ನಮಾಝ್ ಸೇರಿದಂತೆ ಎಲ್ಲಾ ನಮಾಝ್‍ಗಳ ಮೊದಲು ಹಾಗೂ ನಂತರ ಅಭ್ಯಾಸವನ್ನು ಮುಂದುವರಿಸುತ್ತಿದ್ದೆ. ಕಠಿಣ ಪರಿಶ್ರಮ, ತಂದೆ-ತಾಯಿ ಹಾಗೂ ಉಸ್ತಾದರ ಆಶೀರ್ವಾದದಿಂದ ಕುರ್‍ಆನ್ ಕಂಠಪಾಠ ಮಾಡಲು ಸಾಧ್ಯವಾಯಿತು.


ಹಸೈನಾರ್ ಹಾಜಿ, ವಿದ್ಯಾರ್ಥಿಯ ತಂದೆ

ನನ್ನ ಮಗನನ್ನು ಹಾಫಿಲ್ ಮಾಡಬೇಕೆಂಬ ಕನಸನ್ನು ನಾನು ಬಹುಕಾಲದಿಂದಲೂ ಮನಸ್ಸಿನಲ್ಲಿ ಅದುಮಿಟ್ಟಿದ್ದೆ. ಅದಕ್ಕಾಗಿ ನಾನು ಅವನನ್ನು ನನ್ನ ಶಾಲಾ ಸಹಪಾಠಿ ಸ್ವಲಾಹುದ್ದೀನ್ ಸಖಾಫಿಯವರ ದರ್ಸ್‍ಗೆ ಸೇರಿಸಿದೆ. ಲಾಕ್ ಡೌನ್ ಸಮಯದಲ್ಲಿ ಆತನ ಅಧ್ಯಯನಕ್ಕಾಗಿ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಟ್ಟೆವು. ಕುರ್‍ಆನ್ ಕಲಿಕೆಯಲ್ಲದೆ ಬೇರೆ ಯಾವುದೇ ಕೆಲಸ ಮಾಡುವಂತೆ ಆತನಲ್ಲಿ ನಾವು ಒತ್ತಡ ಹೇರುತ್ತಿರಲಿಲ್ಲ. ರಮಝಾನ್ ಸಮಯದಲ್ಲಿ ಹೆಚ್ಚಿನ ಸಮಯ ಧಕ್ಕುತ್ತಿರುವುದರಿಂದ ಆ ವೇಳೆ ಹೆಚ್ಚಾಗಿ ಅಧ್ಯಯನ ನಡೆಸುತ್ತಿದ್ದನು. ಉಸ್ತಾದ್ ಆಲ್‍ಲೈನ್‍ನಲ್ಲಿ ನಿರಂತರವಾಗಿ ಸಂಪರ್ಕಿಸಿ ಬೇಕಾದ ಸಲಹೆಗಳನ್ನು ನೀಡುತ್ತಿದ್ದರು. ಅಧ್ಯಯನವನ್ನು ಪರಿಶೀಲಿಸುತ್ತಿದ್ದರು.ಆತನ ನಿರಂತರ ಅಧ್ಯಯನ ನೋಡುವಾಗ ನಮಗೂ ಖುಷಿಯಾಗುತ್ತಿತ್ತು. ಸಾಧನೆಯನ್ನು ನೋಡಿ ಹೆಮ್ಮೆಯಾಗುತ್ತಿದೆ.


 

ಎಂ.ಎ.ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು, ಪ್ರಿನ್ಸಿಪಾಲ್
ಮದೀನತುಲ್ ಉಲೂಂ ದರ್ಸ್ ಅಲ್‍ಮದೀನತುಲ್ ಮುನವ್ವರ ಮೂಡಡ್ಕ
ಮುಹಮ್ಮದ್ ಶಮ್ಮಾಸ್ ಪ್ರತಿಭಾವಂತ ವಿದ್ಯಾರ್ಥಿ. ದರ್ಸ್ ಕಲಿಕೆಯ ವೇಳೆಯಲ್ಲಿ ಶಿಸ್ತಿನಿಂದಲೇ ಸಮರ್ಪಕ ರೀತಿಯಲ್ಲಿ ಕಲಿಯುತ್ತಿದ್ದರು. ತನ್ನ ಕಲಿಕೆಯ ವಿಷಯದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದರು. ಲಾಕ್‍ಡೌನ್ ಸಮಯವನ್ನು ವ್ಯರ್ಥ ಮಾಡುವುದು ಬೇಡ ಎಂಬ ಕಾರಣದಿಂದ ನಿರಂತರವಾಗಿ ಅವರ ಜೊತೆ ಸಂಪರ್ಕ ಸಾಧಿಸುತ್ತಿದ್ದೆ. ಆವಶ್ಯಕವಾಗಿ ಬೇಕಾದಂತಹ ಸಲಹೆಗಳನ್ನು ನೀಡುತ್ತಿದ್ದೆ. ತಂದೆಯವರ ಪ್ರೋತ್ಸಾಹವೂ ಆತ ಗುರಿಮುಟ್ಟಲು ಸಾಧ್ಯವಾಯಿತು. ಶಮ್ಮಾಸ್ ಸಾಧನೆ ನೋಡಿ ಅಭಿಮಾನವಾಗುತ್ತಿದೆ.

ವರದಿ: ಸಿರಾಜ್ ಅರಿಯಡ್ಕ

error: Content is protected !! Not allowed copy content from janadhvani.com