janadhvani

Kannada Online News Paper

ಕೊರೋನಾ ನಿಯಂತ್ರಣ ವಿಫಲ- ದೆಹಲಿ ಸರ್ಕಾರಕ್ಕೆ ಸುಪ್ರೀಂ ತರಾಟೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೋಗಿಗಳನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ನೋಡಲಾಗುತ್ತಿದೆ ಎಂದು ಆಸ್ಪತ್ರೆಗಳ ಅವ್ಯವಸ್ಥೆ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸರ್ಕಾರದ ವಿರುದ್ಧ ಸರ್ವೋಚ್ಛ ನ್ಯಾಯಾಲಯ ಶುಕ್ರವಾರ ತೀವ್ರವಾಗಿ ಕಿಡಿಕಾರಿದೆ.

ದೆಹಲಿಯಲ್ಲಿ ಕೊರೋನಾ ಪರಿಸ್ಥಿತಿ ಕುರಿತು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ದೆಹಲಿ ಸರ್ಕಾರದ ವಿರುದ್ಧ ತೀವ್ರವಾಗಿ ಹರಿಹಾಯ್ದಿದೆ.

ಕೊರೋನಾ ಸೋಂಕಿತರನ್ನು ದೆಹಲಿಯಲ್ಲಿ ಪ್ರಾಣಿಗಳಿಗಿಂತಲೂ ಕೀಳಾಗಿ ನೋಡಲಾಗುತ್ತಿದೆ. ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದೆ. ವ್ಯಕ್ತಿ ಸಾವನ್ನಪ್ಪುತ್ತಿದ್ದರೂ ನೋಡಿಕೊಳ್ಳಲು ಯಾವೊಬ್ಬ ಸಿಬ್ಬಂದಿ ಕೂಡ ಆತನ ಬಳಿಯಿಲ್ಲ. ಮೃತ ದೇಹಗಳ ಕುರಿತು ದೆಹಲಿ ಸರ್ಕಾರ ಕಾಳಜಿ ವಹಿಸುತ್ತಿಲ್ಲ. ವ್ಯಕ್ತಿ ಸಾವನ್ನಪ್ಪಿದ್ದರೂ ಕೂಡ ಆ ಕುರಿತು ಅವರ ಕುಟುಂಬಸ್ಥರಿಗೆ ಮಾಹಿತಿ ನೀಡುತ್ತಿಲ್ಲ. ಇನ್ನು ಕೆಲ ಪ್ರಕರಣಗಳಲ್ಲಿ ಕುಟುಂಬಸ್ಥರಿಗೆ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವೇ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ

ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿ 2000ಕ್ಕೂ ಹೆಚ್ಚು ಹಾಸಿಗೆಗಳು ಖಾಲಿ ಇವೆ.‌ ಆದರೆ ಅಲ್ಲಿ ರೋಗಿಗಳ ಆರೈಕೆ ಮಾಡಲು ಮಾತ್ರ ಯಾರೂ ಮುಂದೆ ಬರುತ್ತಿಲ್ಲ. ರೋಗಿಗಳು ಆಸ್ಪತ್ರೆಯಲ್ಲಿ ನೋವಿನಿಂದ ಅಳುತ್ತಿರುವ ವೀಡಿಯೊಗಳು ವೈರಲ್ ಆಗಿವೆ‌. ಅವರಿಗೆ ಸ್ಪಂದಿಸುವುದಕ್ಕೂ ಯಾರೂ ಬಂದಿಲ್ಲ ಎಂದು ದೆಹಲಿ ಸರ್ಕಾರದ ನಡೆಗಳನ್ನು ಸುಪ್ರೀಂ ಕೋರ್ಟ್ ಎಳೆ ಎಳೆಯಾಗಿ ಕಟು ಟೀಕೆಗೊಳಪಡಿಸಿತು.

ಅಲ್ಲದೆ ಕೊರೋನಾ ಸೋಂಕು ಪರೀಕ್ಷೆಯನ್ನು ಕಡಿಮೆ ಮಾಡಿದ್ದೇಕೆ? ಕೃತಕ ಅಂಕಿ ಸಂಖ್ಯೆಗಳನ್ನು ಸೃಷ್ಟಿಸುವ ಪ್ರಯತ್ನಗಳಾಗುತ್ತಿವೆಯೇ? ಪರೀಕ್ಷೆಗಳು ಇದ್ದಕ್ಕಿದ್ದಂತೆ ಕಡಿಮೆ ಆಗಲು ಕಾರಣ ಏನು? ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುವುದು ರಾಜ್ಯದ ಕರ್ತವ್ಯವಲ್ಲವೇ ಎಂದು ದೆಹಲಿ ಸರ್ಕಾರವನ್ನು ಪ್ರಶ್ನೆ ಮಾಡಿತು.

ಇಡೀ ದೇಶದಲ್ಲೇ ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ವ್ಯಾಪಕವಾಗಿ ಕೊರೋನಾ ಹರಡುತ್ತಿದೆ. ಈ ಬಗ್ಗೆ ಈ ನಾಲ್ಕು ರಾಜ್ಯಗಳಿಗೆ ಕಾರಣ ಕೇಳಿ ಸುಪ್ರೀಂ ಕೋರ್ಟ್ ನೊಟೀಸ್ ನೀಡಿದೆ‌.

ಕೊರೋನಾ ರೋಗಿಗಳ ನಿರ್ವಹಣೆಗೆ ಏನೇನು ವ್ಯವಸ್ಥೆ ಮಾಡಲಾಗಿದೆ? ಎಷ್ಟು ಮಂದಿ ಆರೋಗ್ಯ ಸೇವಾ ಸಿಬ್ಬಂದಿ ಇದ್ದಾರೆ? ರೋಗಿಗಳು ಎಷ್ಟು ಜನ ಇದ್ದಾರೆ? ಪರೀಕ್ಷೆ ಯಾವ ರೀತಿ ನಡೆಯುತ್ತಿದೆ ಎಂಬ ಮಾಹಿತಿಗಳನ್ನು ಒಳಗೊಂಡ ಸದ್ಯದ ಸ್ಥಿತಿಗತಿಗಳ ಬಗ್ಗೆ ವರದಿಗಳನ್ನು ಸಲ್ಲಿಸುವಂತೆ ಈ ನಾಲ್ಕ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸುಪ್ರೀಂ ಕೋರ್ಟ್ ನೊಟೀಸ್ ನೀಡಿದೆ.

error: Content is protected !! Not allowed copy content from janadhvani.com