ಅಬುಧಾಬಿ: ರಸ್ತೆ ದಾಟುವಾಗ ಮೊಬೈಲ್ ಉಪಯೋಗಿಸಿದರೆ 400 ದಿರ್ಹಂ ವರೆಗೆ ದಂಡ

ಅಬುಧಾಬಿ(ಜನಧ್ವನಿ ವಾರ್ತೆ): ರಸ್ತೆ ದಾಟುವ ವೇಳೆ ಮೊಬೈಲ್ ಉಪಯೋಗಿಸುವ ವಿರುದ್ದ ಅಬುಧಾಬಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪಾದಾಚಾರಿಗಳು ರಸ್ತೆಯನ್ನು ದಾಟುವಾಗ ಚಾಟಿಂಗ್ ಮಾಡುವುದು, ಮೊಬೈಲ್ ಸಂದೇಶಗಳನ್ನು ರವಾನಿಸುವುದು ಕಾನೂನಿನ ಉಲ್ಲಂಘನೆಯಾಗಿದೆ ಮತ್ತು ಅದು ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಟ್ರಾಫಿಕ್ ಆ್ಯಂಡ್ ಪಟ್ರೋಲ್ ಡೈರಕ್ಟರೇಟ್‌ನ ಉನ್ನತ ಅಧಿಕಾರಿ ತಿಳಿಸಿದ್ದಾರೆ.

ಕಾಲ್ನಡಿಗೆ ಯಾತ್ರಿಕರು ಅಪಘಾತಕ್ಕೀಡಾದ ಹೆಚ್ಚಿನ ಪ್ರಕರಣಗಳಲ್ಲಿ ಮೊಬೈಲ್ ಉಪಯೋಗವೇ ಕಾರಣ ಎಂದು ಅಂತರ್ಜಾಲ ಮಾಧ್ಯಮಗಳಾದ ಟ್ವಿಟ್ಟರ್, ಇನ್ಟಾಗ್ರಾಂ ಮುಂತಾದವುಗಳ ಮೂಲಕ ಅಬುಧಾಬಿ ಪೊಲೀಸರು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಬಳಕೆಯು ಹೆಚ್ಚಾಗಿರುವ ಈ ಕಾಲದಲ್ಲಿ ರಸ್ತೆ ದಾಟುವಾಗಲೂ ಮೊಬೈಲ್ ನಲ್ಲೇ ನಿರತರಾಗಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಸಂಚಾರೀ ಪೋಲೀಸ್ ಜಮಾಲ್ ಅಲ್ ಅಮೇರಿ ಹೇಳಿದರು.

2017 ರ ಜುಲೈನಲ್ಲಿ ರೂಪಿಸಲಾದ ಫೆಡರಲ್ ಟ್ರಾಫಿಕ್ ನಿಯಮದ ಹೊಸ ತಿದ್ದುಪಡಿಯಲ್ಲಿ ರಸ್ತೆ ದಾಟುವಾಗ ಮೊಬೈಲ್ ಬಳಸುವವರಿಗೆ 200 ರಿಂದ 400 ದಿರ್ಹಮ್ ವರೆಗೆ ದಂಡ ವಿಧಿಸಲಾಗುವುದು. ಟ್ರಾಫಿಕ್ ಸಿಗ್ನಲ್ ಗಳಲ್ಲಿ ಹಸಿರು ದೀಪ ಉರಿಯದೆ ರಸ್ತೆ ದಾಟುವವರಿಗೂ 400 ದಿರ್ಹಂ ದಂಡ ವಿಧಿಸಲಾಗುವುದು. ರಸ್ತೆ ಅಪಘಾತಗಳ ಬಗ್ಗೆ ಕಾಲ್ನಡೆ ಯಾತ್ರಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ಭಾಷೆಗಳಲ್ಲಿ ರೂಪುರೇಷೆ ಗಳನ್ನು ವಿತರಿಸಿರುವುದಾಗಿ ಪೊಲೀಸರು ವ್ಯಕ್ತ ಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!