janadhvani

Kannada Online News Paper

ಕತಾರ್‌ನಲ್ಲಿ ಕನ್ನಡಿಗರು ಸಂಕಷ್ಟದಲ್ಲಿ- ಹೆಚ್ಚುವರಿ ವಿಮಾನ ಸೌಲಭ್ಯಕ್ಕೆ ಆಗ್ರಹ

ದೋಹಾ: ವಿಶ್ವಾದ್ಯಂತ ಕೋವಿಡ್ ಹರಡಿರುವ ಕಾರಣ ಹಲವು ವಿದೇಶ ರಾಷ್ಟ್ರಗಳಲ್ಲಿ ಅನಿವಾಸಿಗಳು ಸಂಕಷ್ಟದಲ್ಲಿದ್ದು, ಕೈಯಲ್ಲಿ ಹಣವೂ ಇಲ್ಲ, ಒಪ್ಪೊತ್ತಿಗೆ ಊಟವೂ ಇಲ್ಲ, ಕೆಲವು ಕಂಪನಿಗಳನ್ನು ಮುಚ್ಚಿದ ಕಾರಣ ಕೆಲಸವನ್ನೂ ಕಳಕೊಂಡು ತವರಿಗೆ ಮರಳಲು ಭಾರತ ಸರ್ಕಾರದ ವಿಶೇಷ ವಿಮಾನವನ್ನು ಎದುರು ನೋಡುತ್ತಿದ್ದಾರೆ.

ಯುಎಇ ,ಸೌದಿ, ಕುವೈಟ್, ಬಹರೈನ್ ಮುಂತಾದ ಕಡೆಗಳಿಂದ ಸಾವಿರಾರು ಮಂದಿ ಈಗಾಗಲೇ ತಾಯಿನಾಡು ಸೇರಿದ್ದು, ಇದೀಗ ಕತಾರ್‌ನಲ್ಲೂ ಕನ್ನಡಿಗರು ಸಂಕಷ್ಟದಲ್ಲಿದ್ದು ಬೆಂಗಳೂರು ಹಾಗೂ ಮಂಗಳೂರಿಗೆ ಹೆಚ್ಚುವರಿ ವಿಮಾನ ಯಾನ ಸೌಲಭ್ಯವನ್ನು ಒಗದಿಸಿಕೊಡುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕತಾರಿನಲ್ಲಿರುವ ಐ.ಸಿ.ಬಿ.ಎಫ್ (ಭಾರತೀಯ ಸಮುದಾಯ ಹಿತೈಷಿ ಸಮಿತಿ) ಸಂಸ್ಥೆಯ ವತಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಈ ಕುರಿತಾಗಿ ಮನವಿಯನ್ನು ಸಲ್ಲಿಸಿದ್ದು ಕನ್ನಡಿಗರ ಸಂಕಷ್ಟಕ್ಕೆ ಸ್ಪಂದಿಸುವಂತೆ ಕೋರಲಾಗಿದೆ.

ಕೊರೊನಾ ಕಾರಣದಿಂದ ವಿದೇಶದಲ್ಲಿರುವ ಕನ್ನಡಿಗರಿಗೆ ಸರ್ಕಾರ ಸ್ಪಂದಿಸಿದ್ದು ಅವರನ್ನು ತಾಯ್ನಾಡಿಗೆ ಕರೆತರಲು ವಿಮಾನ ಸೇವೆಯನ್ನು ಕಲ್ಪಿಸಿದೆ. “ಒಂದೇ ಭಾರತ ನಿಯೋಗ”ದ ಅಡಿಯಲ್ಲಿ ದೋಹಾದಿಂದ ಬೆಂಗಳೂರಿಗೆ ಪ್ರತ್ಯೇಕ ವಿಮಾನವನ್ನು ನಿಗದಿಪಡಿಸಿ ಹಾರಲು ವ್ಯವಸ್ಥೆ ಮಾಡಲಾಗಿದೆ. ಆದರೆ ಕತಾರ್‌ನಲ್ಲಿ ಕೊರೊನಾ ತೀವ್ರವಾಗಿ ಹರಡುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಕನ್ನಡಿಗರು ಕೆಲಸ ಕಳೆದುಕೊಂಡು, ಜೀವನ ನಡೆಸಲು ಪರದಾಡುತ್ತಿದ್ದಾರೆ. ಅವರೆಲ್ಲಾ ತಾಯ್ನಾಡಿಗೆ ಹಿಂತಿರುಗಲು ತಯಾರಾಗಿದ್ದಾರೆ.

ಇಂತವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚುವರಿ ವಿಮಾನ ಯಾನ ಸೌಲಭ್ಯವನ್ನು ಒದಗಿಸಿಕೊಡಬೇಕು ಎಂದು ಭಾರತೀಯ ಸಮುದಾಯ ಹಿತೈಷಿ ಸಮಿತಿ ಪ್ರತಿನಿಧಿ ಸುಬ್ರಮಣ್ಯ ಹೆಬ್ಬಾಗಿಲು ವಿನಂತಿಸಿದ್ದಾರೆ. ಈ ಕುರಿತಾಗಿ ಅನಿವಾಸಿ ಕನ್ನಡಿಗರು ಕೇಂದ್ರ ಸಚಿವ ಸದಾನಂದಗೌಡ, ಸುರೇಶ ಅಂಗಡಿ, ಸಿಎಂ ಬಿ.ಎಸ್. ಯಡಿಯೂರಪ್ಪಅವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕನ್ನಡಿಗರನ್ನು ಕತಾರಿನಿಂದ ಮಾತೃಭೂಮಿಗೆ ಹಿಂತಿರುಗಲು ವಿಮಾನದ ವ್ಯವಸ್ಥೆ ಮಾಡುವಂತೆ ವಿನಂತಿ ಮಾಡಿದ್ದಾರೆ.

error: Content is protected !! Not allowed copy content from janadhvani.com