janadhvani

Kannada Online News Paper

ಹಜ್ ಯಾತ್ರೆ ರದ್ದುಪಡಿಸುವವರಿಗೆ ಹಣ ವಾಪಸ್- ಕೇಂದ್ರ ಹಜ್ ಸಮಿತಿ

ನವದೆಹಲಿ: ಕೊರೊನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಈ ವರ್ಷ ಹಜ್ ಯಾತ್ರೆಯನ್ನು ರದ್ದು ಪಡಿಸಲು ಇಚ್ಛಿಸುವವರು ಪಾವತಿಸಿದ ಪೂರ್ಣ ಮೊತ್ತವನ್ನು ಮರು ಪಾವತಿಸಲಾಗುವುದು ಎಂದು ಕೇಂದ್ರ ಹಜ್ ಸಮಿತಿ ವ್ಯಕ್ತಪಡಿಸಿದೆ.

ದೇಶಾದ್ಯಂತ ಕೊರೋನಾ ಹಬ್ಬಿರುವ ಕಾರಣ ಈ ವರ್ಷ ಹಜ್ ಯಾತ್ರೆ ನಡೆಸುವ ಬಗ್ಗೆ ಅನುಮಾನ ಉಂಟಾಗಿದೆ. ಸಾಮಾನ್ಯವಾಗಿ ಹಜ್ ಯಾತ್ರೆ ಪೂರ್ವ ಸಿದ್ಧತೆಗಳು ಈಗಾಗಲೇ ನಡೆಯಬೇಕಿತ್ತು. ಆದ್ರೆ ಇದುವರೆಗೂ ಹಜ್ ಯಾತ್ರೆ ಬಗ್ಗೆ ಸೌದಿ ಅರೇಬಿಯಾ ಸರ್ಕಾರ ಯಾವುದೇ ನಿರ್ಧಾರಗಳನ್ನು ಕೈಗೊಂಡಿಲ್ಲ. ಹೀಗಾಗಿ ಹಜ್ ಯಾತ್ರೆಗೆಂದು ಮುಂಗಡವಾಗಿ ಸಂಗ್ರಹಿಸಿದ್ದ ಹಣವನ್ನು ವಾಪಸ್ ನೀಡಲು ಭಾರತದ ಹಜ್ ಸಮಿತಿ ಮುಂದಾಗಿದೆ.

ಹಜ್ಜ್ ಯಾತ್ರೆ ರದ್ದು ಪಡಿಸುವವರಿಗೆ ಅವರು ಕಟ್ಟಿದ ಪೂರ್ಣ ಹಣವನ್ನು ಮರುಪಾವತಿಸಲಾಗುವುದು ಎಂದು ಕೇಂದ್ರ ಹಜ್ಜ್ ಕಮಿಟಿ ಎಕ್ಸಿಕ್ಯೂಟಿವ್ ಆಫಿಸರ್ ಡಾ. ಮಕ್ಸೂದ್ ಅಹ್ಮದ್ ಖಾನ್ ರವರು ಸೂಚನೆ ನೀಡಿದ್ದಾರೆ.

ಭಾರತದಿಂದ ಹಜ್ಜ್‌ಗೆ ವಿಮಾನ ಯಾನವನ್ನು ಜೂನ್‍ನ ಎರಡನೇ ವಾರದಿಂದ ಆರಂಭಿಸಬೇಕಾಗಿತ್ತು. ಆದರೆ ಕೊರೋನಾ ಪರಿಸ್ಥಿತಿಯಲ್ಲಿ ಬಹಳ ಸಮಯದಿಂದ ಸೌದಿ ಹಜ್ಜ್ ಸಚಿವಾಲಯದಿಂದ ಕೇಂದ್ರ ಹಜ್ಜ್ ಕಮಿಟಿಗೆ ಯಾವುದೇ ವಿವರ ಲಭ್ಯವಾಗುತ್ತಿಲ್ಲ.

ಈ ಬಗ್ಗೆ ಮಾಹಿತಿ ನೀಡಿರುವ ಭಾರತ ಹಜ್ ಸಮಿತಿಯ ಸಿಇಒ ಮಕ್ಸೂದ್ ಅಹಮ್ಮದ್ ಖಾನ್, ಮಾರ್ಚ್ 13 ರಂದು ಸೌದಿ ಸರ್ಕಾರ ಈ ವರ್ಷದ ಹಜ್ ಯಾತ್ರೆಯ ಸಿದ್ಧತೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚಿಸಿತ್ತು. ಸದ್ಯ ಹಜ್ ಯಾತ್ರೆಯ ಪೂರ್ವಸಿದ್ಧತೆಗೆ ಇನ್ನು ಕೆಲವೇ ವಾರಗಳು ಮಾತ್ರ ಬಾಕಿ ಉಳಿದಿವೆ. ಆದ್ರೆ ಇಲ್ಲಿವರೆಗೂ ಸೌದಿ ಸರ್ಕಾರ ಯಾವುದೇ ಸೂಚನೆಗಳನ್ನು ನೀಡಿಲ್ಲ.

ಹೀಗಾಗಿ ಮುಂಗಡವಾಗಿ ಹಣ ಪಾವತಿಸಿದ್ದ ಎಲ್ಲರಿಗೂ ಪೂರ್ಣ ಪ್ರಮಾಣದ ಹಣವನ್ನು ಮರು ಪಾವತಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ, ಮುಂಗಡವಾಗಿ ಹಣ ಪಾವತಿಸಿದ ಹಣವನ್ನು ವಾಪಸ್ ಪಡೆಯಲು ಸಮಿತಿಯ ವೆಬ್ಸೈಟ್ನಲ್ಲಿ ಲಭ್ಯವಿರುವ ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ ಎಂದು ಮಕ್ಸೂದ್ ಅಹಮ್ಮದ್ ಖಾನ್ ಹೇಳಿದ್ದಾರೆ.

http://hajcommittee.gov.in/

error: Content is protected !! Not allowed copy content from janadhvani.com