ಮುಸ್ಲಿಮ್ ಆಗಿಯೇ ಜೀವಿಸಲು ಇಚ್ಛಿಸಿದ್ದೇನೆ- ಸುಪ್ರಿಂಕೋರ್ಟ್ ನಲ್ಲಿ ಹಾದಿಯಾ

ಹೊಸದಿಲ್ಲಿ: “ತಾನು ತನ್ನ ಇಚ್ಛೆಯಂತೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದೇನೆ ಹಾಗು ಮುಸ್ಲಿಮ್ ಆಗಿಯೇ ಜೀವಿಸಲು ಇಚ್ಛಿಸಿದ್ದೇನೆ”ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಬಲವಂತಪಡಿಸಲಾಗಿತ್ತು ಎನ್ನುವ ಆರೋಪಗಳನ್ನು ನಿರಾಕರಿಸಿರುವ ಹಾದಿಯಾ ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ.

ಇಸ್ಲಾಂನ ಬೋಧನೆಗಳಿಂದ ತಾನು ಹೇಗೆ ಪ್ರಭಾವಿತಳಾದೆ ಹಾಗು ಇಸ್ಲಾಂ ಧರ್ಮಕ್ಕೆ ಮತಾಂತರವಾದೆ ಎನ್ನುವ ಬಗ್ಗೆ ಹಾದಿಯಾ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ 26 ಪುಟಗಳ ಅಫಿದಾವಿತ್ ನಲ್ಲಿ ತಿಳಿಸಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ತಾನು ಮತಾಂತರವಾದ ವಿಚಾರದಲ್ಲಿ ಶಫಿನ್ ಜಹಾನ್ ಪಾತ್ರವಿಲ್ಲ. ತಾನು ಇಸ್ಲಾಂ ಧರ್ಮಕ್ಕೆ ಮತಾಂತರವಾದ ನಂತರ ಶಫಿನ್ ತನ್ನ ಜೀವನಕ್ಕೆ ಬಂದರು ಎಂದು ಹಾದಿಯಾ ವಿವರಿಸಿದ್ದಾರೆ ಎನ್ನಲಾಗಿದೆ.

“ಇಸ್ಲಾಂ ಬಗ್ಗೆ ಅಧ್ಯಯನ ಮಾಡಿದ ಮೇಲೆ ನನ್ನ ಆತ್ಮಸಾಕ್ಷಿಯ ಪ್ರಕಾರ ಇಸ್ಲಾಂ ಧರ್ಮವನ್ನು ಸ್ವೀಕರಿಸಿದೆ ಹಾಗು ನಂತರ ಶಫಿನ್ ಜಹಾನ್ ಎಂಬವರನ್ನು ಮದುವೆಯಾದೆ. ಇದೂ ಕೂಡ ನನ್ನ ಸ್ವಂತ ಆಯ್ಕೆಯಾಗಿತ್ತು. ಕೇರಳ ಹೈಕೋರ್ಟ್ ಗೂ ನಾನು ಈ ವಿಚಾರಗಳನ್ನು ಸಲ್ಲಿಸಿದ್ದರೂ ಅದು ಪರಿಗಣಿಸಲಿಲ್ಲ” ಎಂದು ಹಾದಿಯಾ ಹೇಳಿದ್ದಾರೆ.

“ಶಫಿನ್ ಜಹಾನ್ ನನ್ನ ಪತಿಯಾಗಿದ್ದಾರೆ. ನಾನು ಅವರ ಪತ್ನಿಯಾಗಿ ಜೀವಿಸಲು ಇಚ್ಛಿಸುತ್ತೇನೆ. ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದು ಹಾಗು ಶಫಿನ್ ರನ್ನು ಮದುವೆಯಾಗಿರುವುದು ನನ್ನ ಸ್ವತಂತ್ರ ಆಲೋಚನೆಯಿಂದ. ಪೋಷಕರಾಗಿ ನನ್ನ ಪತಿಯನ್ನೇ ನೇಮಿಸಬೇಕು ಎಂದು ನಾನು ನ್ಯಾಯಾಲಯಕ್ಕೆ ಮನವಿ ಮಾಡುತ್ತೇನೆ. ನಾವಿಬ್ಬರೂ ಪತಿ-ಪತ್ನಿಯರಾಗಿ ಜೀವಿಸಲು ನ್ಯಾಯಾಲಯವು ಅನುಮತಿಸಬೇಕು ಎಂದು ನಾನು ಮನವಿ ಮಾಡುತ್ತೇನೆ”

“ನನ್ನ ತಂದೆಯನ್ನು ಕೆಲವರು ಬಳಸಿಕೊಳ್ಳುತ್ತಿದ್ದಾರೆ. ಅವರು ಕೆಲವರ ಪ್ರಭಾವಕ್ಕೊಳಗಾಗಿದ್ದಾರೆ ಎಂದು ನನಗನಿಸುತ್ತದೆ. ಒಬ್ಬ ನಾಸ್ತಿಕನಾಗಿದ್ದುಕೊಂಡು ನಾನು ಬೇರೆ ಧರ್ಮ ಸ್ವೀಕರಿಸಿದ್ದಕ್ಕೆ ಹಾಗು ಬೇರೆ ಧರ್ಮದವರನ್ನು ಮದುವೆಯಾಗಿದ್ದಕ್ಕೆ ಅವರು ವಿರೋಧಿಸುತ್ತಿರುವುದು ಹೇಗೆ?. ನನ್ನ ಮಾನಸಿಕತೆ ಸರಿಯಿಲ್ಲ ಎಂಬ ತನಿಖಾ ಸಂಸ್ಥೆಯ, ನನ್ನ ತಂದೆಯ ಹಿಂದಿರುವ ಕೆಟ್ಟ ಶಕ್ತಿಗಳ ಆಧಾರವಿಲ್ಲದ ಹಾಗು ದುರುದ್ದೇಶಪೂರಿತ ಆರೋಪಗಳು, ಐಸಿಸ್ ಜೊತೆ ಸಂಪರ್ಕವಿದೆಯೆಂಬ ಆರೋಪಗಳು ಹಾಗು ಮಾಧ್ಯಮಗಳು ನೀಡಿದ ತೀರ್ಪು ವೈದ್ಯೆಯಾಗಿ ನನ್ನ ಭವಿಷ್ಯಕ್ಕೆ ವಿಪರೀತ ಕೆಟ್ಟ ಪರಿಣಾಮವನ್ನು ಬೀರುತ್ತದೆ” ಎಂದು ಹಾದಿಯಾ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!