janadhvani

Kannada Online News Paper

ನಮ್ಮ ದೇಶದಲ್ಲಿ ಕೊರೋನಾ ಹರಡಲು ಭಾರತ ಕಾರಣ- ನೇಪಾಳ್ ಪ್ರಧಾನಿ

ಕಾಠ್ಮಂಡು: ಭಾರತದ ವಿರುದ್ಧ ತೀವ್ರ ವಾಗ್ದಾಳಿಯನ್ನು ಬಹಿರಂಗವಾಗಿಯೇ ಸಾರಿರುವ ನೇಪಾಳ ಪ್ರಧಾನಿ ಕೆಪಿ ಒಲಿ, ಭಾರತದ ವೈರಸ್ ಚೀನಾ ಮತ್ತು ಇಟಲಿಗಿಂತಲೂ ಹೆಚ್ಚು ಮಾರಕವಾಗಿದೆ. ಸಂಸತ್ತಿನಲ್ಲಿ ಭಾರತದ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಹರಿಸಿರುವ ಅವರು ತಮ್ಮ ದೇಶದಲ್ಲಿ ಕೊರೋನಾ ವೈರಸ್ ಹರಡಲು ಭಾರತವೇ ಕಾರಣ ಎಂದು ಆರೋಪಿಸಿದ್ದಾರೆ.

ಅತ್ತ ಕೊರೋನಾ ವೈರಸ್ ಹರಡಲು ಚೀನಾವೇ ಕಾರಣ, ಅದರಿಂದಾಗಿಯೇ ತಮ್ಮ ದೇಶಕ್ಕೆ ಇಂದು ಈ ದುಸ್ಥಿತಿ ಬಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ವಿರುದ್ಧ ಕಿಡಿ ಕಾರುತ್ತಿದ್ದರೆ ಇತ್ತ ನೇಪಾಳ ಪ್ರಧಾನಿ ಭಾರತದ ಮೇಲೆ ಬೆರಳು ಮಾಡಿ ತೋರಿಸುತ್ತಿದ್ದಾರೆ.

ಅಕ್ರಮವಾಗಿ ಭಾರತದಿಂದ ನೇಪಾಳದೊಳಗೆ ಪ್ರವೇಶಿಸುವವರು ಇಲ್ಲಿ ಕೊರೋನಾ ವೈರಸ್ ಹಬ್ಬಿಸುತ್ತಿದ್ದು ಇಲ್ಲಿನ ಕೆಲವು ಸ್ಥಳೀಯ ರಾಜಕೀಯ ನಾಯಕರು ಮತ್ತು ಪಕ್ಷಗಳ ಕಾರ್ಯಕರ್ತರ ಕುತಂತ್ರದಿಂದ ಭಾರತದಿಂದ ಇಲ್ಲಿಗೆ ಬರುವವರನ್ನು ಸರಿಯಾಗಿ ಪರೀಕ್ಷೆ ಮಾಡದೆ ಒಳಗೆ ಕರೆಸಿಕೊಳ್ಳಲಾಗುತ್ತಿದೆ ಎಂದು ನಿನ್ನೆ ಸಂಸತ್ತಿನಲ್ಲಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಹೊರಗಿನಿಂದ ಬರುವವರ ಸಂಖ್ಯೆ ಹೆಚ್ಚಾಗಿರುವವರಿಂದಾಗಿ ಕೊರೋನಾ ವೈರಸ್ ನ್ನು ನಿಯಂತ್ರಿಸುವುದು ಬಹಳ ಕಷ್ಟವಾಗುತ್ತಿದೆ.ಭಾರತದ ವೈರಸ್ ಚೀನಾ ಮತ್ತು ಇಟಲಿಗಿಂತಲೂ ಅಪಾಯಕಾರಿ. ಇಲ್ಲಿ ಹೆಚ್ಚಿನವರು ಸೋಂಕಿಗೊಳಗಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಇದು ಸಹಜವಾಗಿಯೇ ಭಾರತದಲ್ಲಿನ ಅಧಿಕಾರಿಗಳು ಮತ್ತು ಕೇಂದ್ರ ಸರ್ಕಾರಕ್ಕೆ ಸಿಟ್ಟು ತರಿಸಿದೆ.

ಭಾರತ ಮತ್ತು ನೇಪಾಳ ನಡುವೆ ಹೊಸ ರಸ್ತೆಯನ್ನು ಆರಂಭಿಸಿದ ನಂತರ ನೇಪಾಳ ಭಾರತದ ಮೇಲೆ ತಗಾದೆಯೆತ್ತಲು ಆರಂಭಿಸಿದೆ. ಭಾರತದ ಪ್ರಾಂತ್ಯದೊಳಗೆ ಸೇರಿಕೊಂಡಿರುವ ಕಲಾಪಣಿ-ಲಿಂಪಿಯಾಡುರಾ-ಲಿಪುಲೆಖ್ ಪ್ರದೇಶವನ್ನು ಮತ್ತೆ ತರುವ ಪ್ರಯತ್ನವನ್ನು ಶತಾಯಗತಾಯ ಮುಂದುವರಿಸುತ್ತೇವೆ ಎಂದು ಕೂಡ ಕೆಪಿ ಒಲಿ ಶಪಥ ಮಾಡಿದ್ದಾರೆ.

ಭಾರತದ ಪ್ರಾಂತ್ಯದೊಳಗೆ ಸೇರಿರುವ ಲಿಂಪಿಯಾಧುರಾ, ಲಿಪುಲೆಖ್, ಮತ್ತು ಕಲಾಪಣಿ ಪ್ರದೇಶಗಳು ನೇಪಾಳದ್ದು ಎಂದು ಸಾರಿ ಹೊಸ ರಾಜಕೀಯ ಭೂನಕ್ಷೆಗೆ ನೇಪಾಳ ಸರ್ಕಾರದ ಸಂಪುಟ ಶಿಫಾರಸು ಮಾಡಿತ್ತು.

ಭಾರತ ಮತ್ತು ನೇಪಾಳ 1,800 ಕಿಮೀ (1,118 ಮೈಲಿ) ಮುಕ್ತ ಗಡಿಯನ್ನು ಹಂಚಿಕೊಂಡಿವೆ. 1,816 ರ ಸುಗಾಲಿ ಒಪ್ಪಂದದ ಆಧಾರದ ಮೇಲೆ ಲಿಪುಲೆಖ್ ಪಾಸ್ ಮೇಲೆ ನೇಪಾಳ ಹಕ್ಕು ಸಾಧಿಸಿದೆ.

error: Content is protected !! Not allowed copy content from janadhvani.com