janadhvani

Kannada Online News Paper

ಲಾಕ್‍ಡೌನ್‍: ಸಂಕಷ್ಟಕ್ಕೀಡಾದವರಿಗೆ ಮುಖ್ಯ ಮಂತ್ರಿಯಿಂದ ಬಂಪರ್ ಕೊಡೂಗೆ

ಬೆಂಗಳೂರು:- ಮಹಾಮಾರಿ ಕೊರೊನಾ ಹಬ್ಬಿದ ಪರಿಣಾಮ ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ನಾಡಿನ ಅನ್ನದಾತರು, ಆಟೋ ಚಾಲಕರು, ತರಕಾರಿ, ಹೂ-ಹಣ್ಣು ಬೆಳೆಗಾರರು, ನೇಕಾರರು ಸೇರಿದಂತೆ ಶ್ರಮಿಕ ವರ್ಗಕ್ಕೆ ರಾಜ್ಯಸರ್ಕಾರ 1610 ಕೋಟಿಯ ಪರಿಹಾರ ಒದಗಿಸುವ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.

ಘೋಷಣೆಯಾಗಿರುವ ಪರಿಹಾರದ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಒಂದು ವಾರದೊಳಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಕಟಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆ ಮಹತ್ವದ ಪತ್ರಿಕಾ ಗೋಷ್ಠಿ ನಡೆಸಿದ ಯಡಿಯೂರಪ್ಪ ಅವರು ಹೂ-ಹಣ್ಣು, ತರಕಾರಿ ಬೆಳೆಗಾರರು ಆಟೋ, ಕ್ಯಾಬ್ ಚಾಲಕರು, ಮಡಿವಾಳರು, ಕ್ಷೌರಿಕರು, ನೇಕಾರರು, ಕಟ್ಟಡ ಕಾರ್ಮಿಕರು ಸೇರಿದಂತೆ ಸಂಕಷ್ಟದಿಂದ ಬಳಲುತ್ತಿದ್ದ ಮಧ್ಯಮ ವರ್ಗಕ್ಕೆ ಬಂಪರ್ ಕೊಡುಗೆಯನ್ನು ನೀಡಿದ್ದಾರೆ.

ರಾಜ್ಯದ ಒಟ್ಟು 11,687 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆದಿರುವ ಹೂಗಳು ಮಾರಾಟವಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ನೆರವಾಗುವ ಉದ್ದೇಶದಿಂದ ಒಂದು ಹೆಕ್ಟೇರ್‍ಗೆ 25 ಸಾವಿರ ಪರಿಹಾರವನ್ನು ನೀಡುವುದಾಗಿ ಘೋಷಣೆ ಮಾಡಿದರು.

ತರಕಾರಿಯಂತೆ ಹಣ್ಣುಗಳನ್ನು ಸಹ ಯಥೇಚ್ಛವಾಗಿ ಬೆಳೆಯಲಾಗಿದೆ. ಕೋವಿಡ್ -19ನಿಂದಾಗಿ ಬೆಳೆದ ಹಣ್ಣುಗಳು ಮಾರುಕಟ್ಟೆಗೆ ಸಾಗಾಣಿಕೆಯಾಗದೆ ಮಾರಾಟವಾಗಿಲ್ಲ. ಇವರಿಗೂ ಸಹ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗುವುದು.ಹಣ್ಣು ಬೆಳೆಗಾರರಿಗೆ ಎಷ್ಟು ಮೊತ್ತದಲ್ಲಿ ಪರಿಹಾರ ನೀಡಬೇಕು ಎಂಬುದರ ಕುರಿತಂತೆ ಅಧ್ಯಯನ ನಡೆಸಲಾಗುವುದು. ಶೀಘ್ರದಲ್ಲೇ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ವಿಶೇಷ ಪ್ಯಾಕೇಜ್ ನೀಡುವ ಆಶ್ವಾಸನೆ ನೀಡಿದರು

ಕೊರೊನಾದಿಂದಾಗಿ ರೈತರು ಮಾತ್ರವಲ್ಲದೆ ಈ ಬಾರಿ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿರುವ ಮಡಿವಾಳರು ಹಾಗೂ ಕ್ಷೌರಿಕರು ಕಳೆದ ಒಂದೂವರೆ ತಿಂಗಳಿನಿಂದ ಕೆಲಸವಿಲ್ಲದೆ ತೊಂದರೆಗೆ ಸಿಲುಕಿದ್ದಾರೆ. ಇವರಿಗೆ ದೈನಂದಿನ ಆದಾಯವಿಲ್ಲದ ಕಾರಣ ರಾಜ್ಯ ಸರ್ಕಾರ 60 ಸಾವಿರ ಅಗಸರು ಹಾಗೂ 2,30,000 ಕ್ಷೌರಿಕರಿಗೆ ಒಂದೇ ಕಂತಿನಲ್ಲಿ 5 ಸಾವಿರ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಕ್ಷೌರಿಕರು, ಮಡಿವಾಳರಂತೆ, ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಸಹ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಅವರ ಸಂಕಷ್ಟವನ್ನು ಅರಿತು ಸರ್ಕಾರ 7,75,000 ಚಾಲಕರಿಗೆ 5 ಸಾವಿರ ಪರಿಹಾರವನ್ನು ಒಂದೇ ಕಂತಿನಲ್ಲಿ ನೀಡುವ ಮಹತ್ವದ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದೆ.

ಬೃಹತ್ ಕೈಗಾರಿಕೆಗಳಿಗೆ ಫಿಕ್ಸ್ ಚಾರ್ಜ್‍ನ ಪಾವತಿಯನ್ನು ಎರಡು ತಿಂಗಳ ಅವಧಿಗೆ ಯಾವುದೇ ಬಡ್ಡಿ ಅಥವಾ ದಂಡ ಇಲ್ಲದೆ ಬಡ್ಡಿ ರಹಿತವಾಗಿ ಮುಂದೂಡಲಾಗುವುದು. ಎಲ್ಲ ಪ್ರವರ್ಗದ ಗ್ರಾಹಕರುಗಳಿಗೆ ವಿದ್ಯುತ್‍ಚ್ಛಕ್ತಿ ಮೊತ್ತವನ್ನು ಪಾವತಿಸಲು ಸರ್ಕಾರ ವಿಶೇಷ ಸವಲತ್ತುಗಳನ್ನು ಪ್ರಕಟಿಸಿದೆ.

ನಿಗದಿತ ಸಮಯದಲ್ಲಿ ವಿದ್ಯುತ್ ಬಿಲ್‍ನ ಮೊತ್ತವನ್ನು ಪಾವತಿಸುವ ಗ್ರಾಹಕರಿಗೆ ಪ್ರೋತ್ಸಾಹ ನೀಡುವುದು, ವಿಳಂಬ ಪಾವತಿ ಮಾಡುವವರಿಗೆ ವಿದ್ಯುತ್ ಬಿಲ್‍ನ ಮೊತ್ತದ ಮೇಲೆ ವಿಧಿಸುವ ಬಡ್ಡಿಯನ್ನು ಕಡಿಮೆಗೊಳಿಸುವುದು, ಗ್ರಾಹಕರಿಗೆ ಪ್ರೋತ್ಸಾಹಧನ , ಕಂದಾಯ ಬಾಕಿ ಮೊತ್ತವನ್ನು ಕಂತುಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಕಂದಾಯ ಬಾಕಿ ಮೊತ್ತವನ್ನು ಪಾವತಿಸದಿರುವ ಗ್ರಾಹಕರಿಗೆ 30-06-2020ರವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸದಿರಲು ತೀರ್ಮಾನಿಸಲಾಗಿದೆ. ಸಣ್ಣ ಮತ್ತು ಅತಿಸಣ್ಣ ಹಾಗೂ ಮಧ್ಯಮ ಉದ್ಯಮಿಗಳು ಸಹ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಮ್ಮ ಉದ್ಯಮವನ್ನು ತೆರೆಯಲಾಗದೆ ಉತ್ಪನ್ನಗಳನ್ನು ಸಾಗಿಸಲು ಸಾಧ್ಯವಾಗದೆ ಮಾರಾಟವಾಗದ ಕಾರಣ ನಷ್ಟವನ್ನು ಅನುಭವಿಸಿದ್ದಾರೆ.

ಉದ್ಯಮಿಗಳು ವಹಿವಾಟು ಆರಂಭಿಸಲು ಇನ್ನು ಕೆಲವು ತಿಂಗಳು ಸಮಯ ಬೇಕಾಗಿರುವುದರಿಂದ ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಉದ್ಯಮಿಗಳ ವಿದ್ಯುತ್ ಬಿಲ್‍ನ ಫಿಕ್ಸ್ ಚಾರ್ಜ್‍ನ್ನು ಎರಡು ತಿಂಗಳು ಮನ್ನಾ ಮಾಡುವುದಾಗಿಯೂ ಬಿಎಸ್‍ವೈ ಘೋಷಣೆ ಮಾಡಿದರು.

ನೇಕಾರರಿಗೂ ಬಂಪರ್ ಕೊಡುಗೆ:
ರಾಜ್ಯ ಸರ್ಕಾರ ಇಂದು ಘೋಷಣೆ ಮಾಡಿರುವ ವಿಶೇಷ ಪ್ಯಾಕೇಜ್‍ನಲ್ಲಿ ನೇಕಾರರಿಗೆ ಬಂಪರ್ ಕೊಡುಗೆ ನೀಡಿದೆ. ರೈತರು ಮತ್ತು ನೇಕಾರರು ನಮ್ಮ ಸರ್ಕಾರದ ಎರಡು ಕಣ್ಣುಗಳು ಎಂದು ಬಣ್ಣಿಸಿರುವ ಯಡಿಯೂರಪ್ಪ, ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ನೌಕರರಿಗೆ ನೆರವಾಗಲು 109 ಕೋಟಿ ವೆಚ್ಚದ ನೇಕಾರರ ಸಾಲ ಮನ್ನಾ ಯೋಜನೆಯನ್ನು ಪ್ರಕಟಿಸಿದರು.

ಈ ಯೋಜನೆಯಡಿ ಕಳೆದ ವರ್ಷ 29 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಉಳಿದಿರುವ 80 ಕೋಟಿ ಹಣವನ್ನು ಕೂಡಲೇ ಬಿಡುಗಡೆ ಮಾಡಲಾಗುವುದು. ನೇಕಾರರಿಗೆ ಹೊಸ ಸಾಲ ಸಿಗಲು ಅವಕಾಶ ಕಲ್ಪಿಸಲಾಗುವುದು.

ಜನವರಿ 1, 2019ರಿಂದ ಮಾರ್ಚ್ 31, 2019ರೊಳಗೆ ಒಂದು ಲಕ್ಷದವರೆಗೆ ತಮ್ಮ ಸಾಲವನ್ನು ಪಾವತಿಸಿರುವ ನೇಕಾರರಿಗೆ ಸಾಲವನ್ನುಮರುಪಾವತಿ ಮಾಡಲಾಗುವುದು.ನೇಕಾರ್ ಸಮ್ಮಾನ್ ಯೋಜನೆ ಪ್ರಕಟಿಸಿರುವ ಸರ್ಕಾರ ಈ ಯೋಜನೆಯಡಿ ರಾಜ್ಯದ 54 ಸಾವಿರ ಕೈಮಗ್ಗ ನೇಕಾರರಿಗೆ ಪ್ರತಿವರ್ಷ 2000 ರೂ.ಗಳಂತೆ ಪರಿಹಾರವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಿದೆ.

ಲಾಕ್‍ಡೌನ್‍ನಿಂದಾಗಿ ಕಟ್ಟಡ ಕಾರ್ಮಿಕರು ಸಹ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಒಂದೂವರೆ ತಿಂಗಳು ಕೆಲಸವಿಲ್ಲದೆ ದೈನಂದಿನ ಜೀವನ ನಡೆಸಲು ಪರದಾಡುತ್ತಿದ್ದಾರೆ. ಅವರ ಸಂಕಷ್ಟವನ್ನು ಅರಿತಿರುವ ಸರ್ಕಾರ ರಾಜ್ಯದಲ್ಲಿರುವ 15.80 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ 2 ಸಾವಿರ ಪರಿಹಾರವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಿದೆ.

ಈಗಾಗಲೇ 11.80 ಲಕ್ಷ ಕಟ್ಟಡ ಕಾರ್ಮಿಕರಿಗೆ ಈ ಮೊತ್ತವನ್ನು ನೀಡಲಾಗಿದೆ. ಉಳಿದಿರುವ 4 ಲಕ್ಷ ಕಟ್ಟಡ ಕಾರ್ಮಿಕರಿಗೆ ಶೀಘ್ರದಲ್ಲೇ ಪರಿಹಾರದ ಹಣವನ್ನು ನೀಡಲಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.ಈಗಾಗಲೇ ಕಟ್ಟಡ ಕಾರ್ಮಿಕರಿಗೆ ನೀಡಿರುವ 2 ಸಾವಿರ ಪರಿಹಾರದ ಮೊತ್ತದ ಜೊತೆಗೆ ಹೆಚ್ಚುವರಿಯಾಗಿ 3 ಸಾವಿರ ರೂ. ಸೇರಿದಂತೆ ಒಟ್ಟು 5 ಸಾವಿರ ರೂ. ಪರಿಹಾರ ಹಣವನ್ನು ನೀಡಲಿದ್ದೇವೆ. ಆರ್ಥಿಕ ಚಟುವಟಿಕೆಗಳು ಸ್ಥಗಿತವಾಗಿರುವುದರಿಂದ ಅಭಿವೃದ್ದಿ ಕಾರ್ಯಗಳಿಗೆ ಹಿನ್ನಡೆಯಾಗಿದೆ.

ಆದರೂ ನಾಡಿನ ಎಲ್ಲ ವರ್ಗದವರ ಹಿತ ಮುಖ್ಯವಾಗಿರುವುದರಿಂದ ಎಷ್ಟೇ ಸಮಸ್ಯೆಯಾದರೂ ಸರಿ ಅವರ ರಕ್ಷಣೆಗೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಯಡಿಯೂರಪ್ಪ ಆಶ್ವಾಸನೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಮುಖ್ಯಮಂತ್ರಿಗಳಾದ ಅಶ್ವಥ್ ನಾರಾಯಣ, ಗೋವಿಂದ ಕಾರಜೋಳ, ಲಕ್ಷ್ಮಣ್ ಸವದಿ, ಸಚಿವರಾದ ಮಾಧುಸ್ವಾಮಿ, ಆರ್.ಅಶೋಕ್, ನಾರಾಯಣಗೌಡ, ಸಿ.ಟಿ.ರವಿ, ಕೆ.ಗೋಪಾಲಯ್ಯ , ಶ್ರೀಮಂತ್ ಪಾಟಿಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com