janadhvani

Kannada Online News Paper

ಜಾತ್ಯಾತೀತ ರಾಷ್ಟ್ರದಲ್ಲಿ ಪರ ಧರ್ಮೀಯರ ಸಹಕಾರವಿಲ್ಲದ ಜೀವನ- ಮೂರ್ಖತನ

ವಿಶ್ವದ ಬಹುತೇಕ ರಾಷ್ಟ್ರಗಳನ್ನು ಕಾಡುತ್ತಿರುವ ಸಾಂಕ್ರಾಮಿಕ ರೋಗ ಕೊರೋನಾ ವೈರಸ್ ಕಾಯಿಲೆ (ಕೋವಿಡ್-19) ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದಲ್ಲದೇ, ಸಾಮಾನ್ಯ ಜೀವನದ ಬದಲಾವಣೆಗೂ ಕಾರಣವಾಗಿದೆ. ಶ್ರೀಮಂತರು, ಬಡವರು, ಮಧ್ಯಮ ವರ್ಗ ಎಂಬಂತೆ ಎಲ್ಲರಿಗೂ ಆರ್ಥಿಕವಾದ ಹಿನ್ನಡೆಗೆ ಕಾರಣವಾಗಿದೆ.

ಅದಕ್ಕಿಂತಲೂ ಮಿಗಿಲಾಗಿ ಚೀನಾದಲ್ಲಿ ಆರಂಭಗೊಂಡ ಸೋಂಕು ಯಾವುದೇ ಧರ್ಮಾಧಾರಿತವಾಗಿ ವಿಶ್ವ ವ್ಯಾಪಿಯಾಗಿಲ್ಲ ಅನ್ನುವುದು ಸತ್ಯವಾದ ವಿಚಾರ. ಭಾರತಕ್ಕೆ ಸೋಂಕು ಕಾಲಿಟ್ಟಾಗಿಂದ ಧರ್ಮದ ಬಣ್ಣವನ್ನು ಕೊರೋನಾ ವೈರಸ್‌ಗೆ ನೀಡುವ ಚಾಳಿ ಆರಂಭವಾಯಿತು. ಅದಾಗಲೇ ಕೋಮುವಾದದಿಂದ, ಧರ್ಮಾಧಾರಿತ ರಾಜಕೀಯದಿಂದ ನಲುಗಿ ಹೋಗಿದ್ದ ಭಾರತಕ್ಕೆ ಕೋರೋನಾ ತಕ್ಕ ಪಾಠವನ್ನು ಕಲಿಸಿದೆ ಅಂತ ಊಹಿಸಿದರು ಕೂಡಾ ನಮ್ಮ ವ್ಯವಸ್ಥೆ ಅದನ್ನು ಅಲ್ಲಗಳೆಯುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಚರ್ಚೆಗಳೇ ಇದಕ್ಕೆ ಸಾಕ್ಷಿ.

NRC ಮತ್ತು CAA ಮೂಲಕ ಧರ್ಮಾಧಾರಿತವಾದ ಪೌರ ವಿಭಜನೆಗೆ ಭಾರತ ಕಾಲಿಟ್ಟಾಗಲೇ ಈ ಜಗತ್ತಿಗೆ ಮಹಾ ವಿಪತ್ತೊಂದು ಬಂದೆರಗಲಿದೆ ಎಂದು ಭಾರತದ ಸೌಹಾರ್ಧತೆಯ ಚರಿತ್ರೆ ಬಲ್ಲವರು ಭಾವಿಸಿದ್ದರು. ಅದೇನೇ ಇರಲಿ, ಸರಕಾರವನ್ನು ಮುನ್ನಡೆಸುತ್ತಿರುವ ಪ್ರಧಾನ ಮಂತ್ರಿ ಸಹಿತವಿರುವ ರಾಜಕಾರಣಿಗಳು ಭಾರತದಲ್ಲಿ ಈ ಕೊರೋನಾ ವೈರಸ್ ಹರಡದಂತೆ ತಡೆಯಲು ಲಾಕ್ ಡೌನ್ ಮಾಡುವ ಮೂಲಕ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿರುವ ಪರಿಸ್ಥಿತಿಯಲ್ಲೂ ಮುಂದೆ ಬಂದರು ಅನ್ನುವುದು ಬಹಳ ಸಂತಸದ ಮತ್ತು ಅಷ್ಟೇ ಆಶಂಕೆಯ ವಿಚಾರ. ಕಾರಣ, ಮೊದಲೇ ಹದಗೆಟ್ಟಿರುವ ಆರ್ಥಿಕತೆಯನ್ನು ಕೊರೋನಾ ಹೆಸರಿನಲ್ಲಿ ಬರೆದು ಕೈತೊಳೆಯಬಹುದೆನ್ನುವುದು ಇಲ್ಲಿನ ಖೇದಕರ ವಿಚಾರ.

ಕೆಲವೊಂದು ಸೆಲೆಬ್ರಿಟಿಗಳು ಅಂದು ಕೊಂಡವರು ನೀಡಿದ ಕೆಲವು ಹೇಳಿಕೆಗಳಲ್ಲಿ, ಸರಕಾರದ ಲಾಕ್ ಡೌನ್ ಆದೇಶವನ್ನು ಪಾಲಿಸಿ ತಾನಿದ್ದಲ್ಲೇ ಇದ್ದೇನೆ ಎಂದು ಹೇಳದೇ, ಮೋದಿಗಾಗಿ ಈ ತ್ಯಾಗ ಮಾಡುತ್ತಿದ್ದೇನೆ ಎಂದು ಹೇಳಿಕೆ ನೀಡುವಷ್ಟರ ಮಟ್ಟಿಗೆ ವ್ಯಕ್ತಿ ಕೇಂದ್ರೀಕೃತವಾಗಿದೆ ನಮ್ಮ ವ್ಯವಸ್ಥೆ ಅನ್ನುವುದು ಭಾರತದ ಬಹು ದೊಡ್ಡ ದುರಂತ ಅನ್ನಬಹುದು. ಇದುವವರೆಗೆ ಭಾರತವನ್ನು ಮುನ್ನಡೆಸಿದ ಸರಕಾರಗಳೆಲ್ಲವೂ ವ್ಯಕ್ತಿ ಕೇಂದ್ರೀಕೃತವಾಗಿರಲಿಲ್ಲ ಅನ್ನುವುದೇ ಇದಕ್ಕೆ ಕಾರಣ. ಎಲ್ಲವನ್ನೂ ಮೋದಿ ಮಾಡುವುದಿದ್ದರೆ, ಇಲ್ಲಿನ ಸಚಿವ ಸಂಪುಟ, ಕಾರ್ಯಾಂಗ, ನ್ಯಾಯಾಂಗಗಳೆಲ್ಲವೂ ಕಾರ್ಯಾಚರಿಸುತ್ತಿರುವುದು ಹೆಸರಿಗೆ ಮಾತ್ರವೇ? ಇತ್ತೀಚಿನ ಅವುಗಳ ಕಾರ್ಯಗಳೆಲ್ಲವೂ ಅದನ್ನು ಪುಷ್ಠೀಕರಿಸುತ್ತವೆಯಲ್ಲವೇ?

ಇನ್ನೂ ಮುಂದುವರೆದ ಕೆಲವು ಸಮಾಜ ಘಾತುಕ ಶಕ್ತಿಗಳು ಬಟ್ಟೆ ಮಾರಾಟ, ಮೀನು ಮಾರಾಟವನ್ನು ಸೀಮೀತ ಧರ್ಮದ ಅನುಯಾಯಿಗಳಿಗೆ ಮೀಸಲಿಡುತ್ತಿರುವುದು. ಅದಕ್ಕೆ ಪರ ಮತ್ತು ವಿರೋಧ ಚರ್ಚೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವುದು ಇಲ್ಲಿನ ಜಾತ್ಯಾತೀತ ವ್ಯವಸ್ಥೆಗೆ ನೀಡುತ್ತಿರುವ ಕೊಡಲಿಯೇಟು ಅನ್ನುವುದು ಬೇಸರದ ಸಂಗತಿ. ಭಾರತದಂತಹ ಜಾತ್ಯಾತೀತ ವ್ಯವಸ್ಥೆಯಲ್ಲಿ ಯಾವುದೇ ಒಂದು ಧರ್ಮದ ವ್ಯಕ್ತಿ ಪರಧರ್ಮದ ಜನರ ಸಹಾಯ ಅಥವಾ ಸಂಪರ್ಕವಿಲ್ಲದೆ ಜೀವನ ನಡೆಸಬೇಕೆಂದು ತೀರ್ಮಾನಿಸಿದರೆ, ಅದು ಆಯಾ ವ್ಯಕ್ತಿಯ ಮೂರ್ಖತನವೆನ್ನದೇ ವಿಧಿಯಿಲ್ಲ.

ಬಟ್ಟೆಯ ತಯಾರಿಯಲ್ಲಿಂದ ಹಿಡಿದು ಮಾರಾಟ ಮತ್ತು ಬಳಸುವವರೆಗೆ ಎಲ್ಲಾ ವಿಭಾಗ ಮತ್ತು ಜನಾಂಗದ ಮನುಷ್ಯರು ಇದ್ದಾರೆನ್ನುವುದು ಎಲ್ಲರೂ ತಿಳಿದ ಸಂಗತಿ. ಮೀನು ವ್ಯಾಪಾರವೂ ಅಷ್ಟೇ, ಮೀನು ಹಿಡಿಯುವಲ್ಲಿಂದ ಅದನ್ನು ಬಳಸುವ ಕಟ್ಟ ಕಡೆಯ ವ್ಯಕ್ತಿವರೆಗಿನವರಲ್ಲಿ ಎಲ್ಲಾ ಧರ್ಮಕ್ಕೂ ಸೇರಿದವರೂ ಇದ್ದಾರೆ. ಹೀಗಿರುವಾಗ, ಅವರಲ್ಲಿಂದ ಬಟ್ಟೆ ಖರೀದಿಸಬೇಡಿ, ಇವರಿಂದ ಮೀನು ಖರೀದಿಸಬೇಡಿ ಅನ್ನುವುದು ನಾವು ನಮಗೇ ಮಾಡುತ್ತಿರುವ ಅನ್ಯಾಯವಲ್ಲವೇ?

ಕೋರೋನಾ ಬಿಕ್ಕಟ್ಟು ಭಾರತದಲ್ಲಿ ಎಲ್ಲಾ ಧರ್ಮೀಯರನ್ನೂ, ಜನರನ್ನೂ ಸಂಕಷ್ಟಕ್ಕೆ ಈಡು ಮಾಡಿದೆ ಎನ್ನುವುದರಲ್ಲಿ ಸಂಶಯವಿಲ್ಲ ತಾನೇ? ಕೇವಲ ಓರ್ವ ವ್ಯಕ್ತಿಯಿಂದ ಲಾಕ್ ಡೌನ್ ಸಾಧ್ಯವಿಲ್ಲ. ಹೀಗಿರುವಾಗ, ವ್ಯಕ್ತಿ ಕೇಂದ್ರೀಕೃತ ರಾಜಕೀಯ ವ್ಯವಸ್ಥೆ ಭಾರತದ ಸ್ವಾಸ್ಥ್ಯಕ್ಕೆ ಮಾರಕ. ಸರಕಾರವನ್ನು, ಸಂವಿಧಾನವನ್ನೂ ಪಾಲಿಸಬೇಕು ಅನುಸರಿಸಬೇಕು. ಈ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದ ವಿದ್ವಾಂಸರು ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳನ್ನು ಗಮನಿಸಿದರೆ, ಸರಕಾರದ ಆದೇಶಗಳನ್ನು ಪಾಲಿಸುವಲ್ಲಿ ಅವು ಬಹುಮುಖ್ಯ ಪಾತ್ರ ವಹಿಸಿದೆ.

ಪವಿತ್ರ ರಂಝಾನಿನಲ್ಲೂ ಮಸೀದಿಗಳೂ ಇನ್ನೂ ಶುಕ್ರವಾರ ಸೇರಿದಂತೆ ಎಲ್ಲಾ ಸಂದರ್ಭದಲ್ಲೂ ಲಾಕ್ ಮಾಡಲ್ಪಟ್ಟಿವೆ ಅನ್ನುವುದು ಭಾರತದಂತ ದೇಶದಲ್ಲಿ ಎಲ್ಲಾ ಧರ್ಮದವರ ಕೊರೋನಾ ವಿರುದ್ಧ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದೆ . ಬೆರಳೆಣಿಕೆಯ ಘಟನೆಗಳು ಇದಕ್ಕೆ ವ್ಯತಿರಿಕ್ತವಾಗಿ ನಡೆದಿದೆ ಅಂದ ಮಾತ್ರಕ್ಕೆ ಕೊರೋನಾ ಇವರಿಂದಾಗಿ ಹರಡಿತು ಅನ್ನುವುದರಲ್ಲಿ ಅರ್ಥವಿಲ್ಲ. ಚೀನಾ, ಇಟಲಿ, ಅಮೇರಿಕಾದಿಂದ ಮತ್ತಿತರ ಮುಸ್ಲಿಮೇತರ ದೇಶಗಳಿಂದ ಕೊರೋನಾ ಭಾರತಕ್ಕೆ ಬಂದಿವೆ. ಅಲ್ಲಿಂದ ಜನರೂ ಬಂದಿದ್ದಾರೆ.

ಅವರವರ ಧರ್ಮವನ್ನು ಕೊರೋನಾ ಸೋಂಕಿಗೆ ಹೆಸರಿಸುತ್ತಿರುವುದು ನಿಲ್ಲಬೇಕು. ರಾಜಕಾರಣಿಗಳು ಈ ಸಂದಿಗ್ಧ ಪರಿಸ್ಥಿತಿಯನ್ನು ರಾಜಕೀಯವನ್ನು ಮಾಡಲು ಬಳಸಿಕೊಳ್ಳದೇ ದೇಶಕ್ಕಾಗಿ, ನಾಡಿನ ಜನತೆಯ ಸ್ವಾಸ್ಥ್ಯಕ್ಕಾಗಿ ಎಂದು ಹೋರಾಟದಲ್ಲಿ ಮುನ್ನುಗ್ಗಿದ್ದರೆ ಕೊರೋನಾ ವಿರುದ್ಧ ನಮ್ಮ ಹೋರಾಟದಲ್ಲಿ ಜಯ ಸಿಗುವುದು ಖಚಿತ.

error: Content is protected !! Not allowed copy content from janadhvani.com