janadhvani

Kannada Online News Paper

ಅನಿವಾಸಿಗಳನ್ನು ಕರೆತರದ ಕೇಂದ್ರ ಸರಕಾರದ ನಿರ್ಧಾರ ಖಂಡನೀಯ

ದಮ್ಮಾಂ: ಕೇರಳ ಸರಕಾರದ ಕೋರಿಕೆಯ ಹೊರತಾಗಿಯೂ ಗಲ್ಫ್ ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ವಲಸೆಗಾರರನ್ನು ಮರಳಿ ತರುವಲ್ಲಿ ಕ್ರಮಕೈಗೊಳ್ಳದ ಕೇಂದ್ರ ಸರಕಾರದ ನಿರ್ಧಾರವನ್ನು “ನವ ಯುಗಂ” ಸಾಂಸ್ಕೃತಿಕ ವೇದಿಕೆಯ ಕೇಂದ್ರ ಸಮಿತಿಯು ತೀವ್ರವಾಗಿ ಖಂಡಿಸಿದೆ. ಕೊಲ್ಲಿನಲ್ಲಿ ಮೃತರಾದವರ ಮೃತದೇಹಗಳನ್ನು ಊರಿಗೆ ತಲುಪಿಸಲು ಅನುಮತಿಸದೆ ಕೇಂದ್ರ ಸರಕಾರವು ವಲಸಿಗರಿಗೆ ದ್ರೋಹ ಬಗೆದಿದೆ ಎಂದು ವೇದಿಕೆ ತಿಳಿಸಿದೆ.

ಮೃತದೇಹಗಳನ್ನು ಕೊಲ್ಲಿ ರಾಷ್ಟ್ರಗಳಿಂದ ವಾಪಸ್ ಕಳುಹಿಸಲು, ಸಂಬಂಧಪಟ್ಟ ಭಾರತೀಯ ರಾಯಭಾರ ಕಚೇರಿಯ ಪ್ರಮಾಣಪತ್ರದ ಅಗತ್ಯವಿದೆ. ಅಂತಹ ಪ್ರಮಾಣಪತ್ರಗಳಿಲ್ಲದೆ, ಕೋವಿಡ್ ಮೂಲಕವಲ್ಲದೆ ಮೃತಪಟ್ಟವರ ಶರೀರವನ್ನು ವಾಪಸ್ ಕಳುಹಿಸಲು ಕೇಂದ್ರವು ಈ ಹಿಂದೆ ಅನುಮತಿ ನೀಡಿತ್ತು. ಅಂತರ್‌ರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಿದ ನಂತರ ಮೃತದೇಹಗಳನ್ನು ಸರಕು ಸಾಗಾಟ ವಿಮಾನಗಳ ಮೂಲಕ ಭಾರತಕ್ಕೆ ತರಲಾಗುತ್ತಿದ್ದವು.

ಆದರೆ, ಭಾರತೀಯ ರಾಯಭಾರ ಕಚೇರಿಯು ಕೇಂದ್ರ ಗೃಹ ಸಚಿವಾಲಯದಿಂದ ಪ್ರಮಾಣ ಪತ್ರ ಪಡೆಯುವಂತೆ ಒತ್ತಾಯಿಸುತ್ತಿದ್ದಂತೆ, ಕೊಲ್ಲಿ ರಾಷ್ಟ್ರಗಳಿಂದ ಭಾರತೀಯರ ಮೃತದೇಹಗಳನ್ನು ವಾಪಸ್ ಕಳುಹಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. “ಇದು ವಲಸಿಗರ ಮೃತದೇಹಕ್ಕೆ ತೋರುವ ಅಗೌರವ” ಎಂದು ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

ಗೃಹ ಸಚಿವಾಲಯದ ಪ್ರಮಾಣಪತ್ರವಿಲ್ಲದೆ ಮೃತದೇಹಗಳನ್ನು ವಾಪಸ್ ಕಳುಹಿಸಲು ಕೇಂದ್ರ ಸರಕಾರವು ತಕ್ಷಣ ಅನುಮತಿ ನೀಡಬೇಕು. ವಲಸಿಗರ ಪೈಕಿ ರೋಗಿಗಳಾದ ವಯಸ್ಸಾದವರು, ಗರ್ಭಿಣಿಯರು ಮತ್ತು ವಿಸಿಟ್ ವೀಸಾದಲ್ಲಿ ಬಂದು ಸಿಕ್ಕಿಬಿದ್ದವರನ್ನು ಕೂಡಲೇ ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳಬೇಕು. ವಿಮಾನಯಾನ ಮೊಟಕುಗೊಂಡ ಕಾರಣ ಯಾತ್ರೆಕೈಗೊಳ್ಳಲಾಗದ ಎಲ್ಲರಿಗೂ ರದ್ದತಿ ಶುಲ್ಕವಿಲ್ಲದೆ ಟಿಕೆಟ್ ರದ್ದುಗೊಳಿಸಿ ಪಾವತಿಸಿದ ಎಲ್ಲ ಹಣವನ್ನೂ ಮರುಪಾವತಿಸುವಂತೆ ನವ ಯುಗದ ಕೇಂದ್ರ ಸಮಿತಿ ವಿನಂತಿಸಿದೆ.

error: Content is protected !! Not allowed copy content from janadhvani.com