janadhvani

Kannada Online News Paper

‘ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’: ಪರಿಸ್ಥಿತಿ ಕೈಮೀರಿದ ಮೇಲೆ ಲಾಕ್‌ಡೌನ್ ಆದೇಶ

ಬಾಗಲಕೋಟೆ: ‘ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಸ್ವರ್ಗವನ್ನೇ ಧರೆ ಗಿಳಿಸುತ್ತೇವೆ ಎಂದು ಬಿಜೆಪಿ ಸ್ನೇಹಿತರು ಹೇಳುತ್ತಿದ್ದರು. ಈಗ ರಾಜ್ಯದ ಪಾಲಿಗೆ ನ್ಯಾಯಯುತವಾಗಿ ಬರಬೇಕಾದ ಅನುದಾನ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಕೋವಿಡ್–19 ವಿರುದ್ಧದ ರಾಜ್ಯದ ಹೋರಾಟಕ್ಕೆ ಹಿನ್ನಡೆಯಾಗಿದೆ‘ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಚುನಾಯಿತ ಸರ್ಕಾರವನ್ನು ಕೆಡವಲು ಬಿಜೆಪಿಯವರು 1,000 ಕೋಟಿ ವ್ಯಯಿಸಿದ್ದರು. ಈಗ ಕೋವಿಡ್–19 ವಿರುದ್ಧದ ಹೋರಾಟಕ್ಕೆ 200 ಕೋಟಿ ಮೀಸಲಿಟ್ಟಿದ್ದಾರೆ. ಇದು ಹಾಸ್ಯಾಸ್ಪದ’ ಎಂದು ಛೇಡಿಸಿದರು.

‘ಜನವರಿ 30ರಂದು ದೇಶದ ಮೊದಲ ಕೋವಿಡ್–19 ಪ್ರಕರಣ ಕೇರಳದಲ್ಲಿ ಪತ್ತೆಯಾಗಿತ್ತು. ಫೆಬ್ರುವರಿ 1 ರಿಂದಲೇ ವಿದೇಶದಿಂದ ಬರುವವರನ್ನು ವಿಮಾನ ನಿಲ್ದಾಣಗಳಲ್ಲಿಯೇ ಕಟ್ಟುನಿಟ್ಟಾಗಿ ತಪಾಸಣೆ ಮಾಡಿ, ಕ್ವಾರೆಂಟೈನ್‌ಗೆ ಒಳಪಡಿಸಿದ್ದರೆ ಇಷ್ಟೊಂದು ಗಂಭೀರ ಸ್ವರೂಪ ಪಡೆಯುತ್ತಿರಲಿಲ್ಲ. ಕೋಟೆ ಕೊಳ್ಳೆ ಹೊಡೆದ ನಂತರ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಕೇಂದ್ರ ಸರ್ಕಾರ ಪರಿಸ್ಥಿತಿ ಕೈಮೀರಿ ಹೋದ ಮೇಲೆ ಲಾಕ್‌ಡೌನ್ ಆದೇಶ ಮಾಡಿದೆ’ ಎಂದು ದೂರಿದರು.

‘ದೆಹಲಿ ಪೊಲೀಸ್ ಇಲಾಖೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇರ ನಿಯಂತ್ರಣದಲ್ಲಿದೆ. ನಿಜಾಮುದ್ದೀನ್ ಪ್ರದೇಶದ ತಬ್ಲೀಗಿ ಜಮಾತ್‌ನ ಧಾರ್ಮಿಕ ಕಾರ್ಯಕ್ರಮಕ್ಕೆ ಅಲ್ಲಿ ಅಷ್ಟೊಂದು ಜನ ಜಮಾಯಿಸಿದ್ದಾರೆ ಎಂಬುದು ಅಮಿತ್‌ ಶಾ ಅವರಿಗೆ ಗೊತ್ತಿರಲಿಲ್ಲವೇ?’ ಎಂದು ಪ್ರಶ್ನಿಸಿದ ಎಸ್.ಆರ್.ಪಾಟೀಲ, ’ವಿದೇಶಿ ಧರ್ಮಗುರುಗಳಿಗೆ ಕಾರ್ಯಕ್ರಮಕ್ಕೆ ಬರಲು ಕೇಂದ್ರ ಸರ್ಕಾರ ವೀಸಾ ಕೊಟ್ಟಿದ್ದೇಕೆ‘ ಎಂದು ಪ್ರಶ್ನಿಸಿದರು.

error: Content is protected !! Not allowed copy content from janadhvani.com