janadhvani

Kannada Online News Paper

ಎಸ್ಸೆಸ್ಸೆಲ್ಸಿ: ಶೀಘ್ರದಲ್ಲೇ ದಿನಾಂಕ ಪ್ರಕಟ, ಪರೀಕ್ಷೆಯಿಲ್ಲದೆ ಪಾಸ್ ಇಲ್ಲ- ಶಿಕ್ಷಣ ಸಚಿವ

ಬೆಂಗಳೂರು,ಎ.11: ರಾಜ್ಯದಲ್ಲಿ SSLC ಮತ್ತು ಪಿಯುಸಿಯ ಬಾಕಿ ಉಳಿದ ಒಂದು ಪರೀಕ್ಷೆಯ ಬಗ್ಗೆ ಇದುವರೆಗೆ ಯಾವುದೇ ನಿರ್ಧಾರವಾಗಿಲ್ಲ. ಯಾವುದೇ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಕೊರೋನಾ ವೈರಸ್ ಸಂಕಷ್ಟವಾದ್ದರಿಂದ ಈಗ ಪರೀಕ್ಷೆಗಳನ್ನು ನಡೆಸಲು ಸಾಧ್ಯವಿಲ್ಲ. ಸೋಂಕು ಮುಗಿಯದೇ ಯಾವುದೇ ಕಾರಣಕ್ಕೂ ಪರೀಕ್ಷೆಗಳನ್ನು ನಡೆಸುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿ ನಂಬಬೇಡಿ ಎಂದು ಮಕ್ಕಳಿಗೆ ಹಾಗೂ ಪೋಷಕರಲ್ಲಿ ಮನವಿ ಮಾಡಿದರು.

ಪರೀಕ್ಷೆಗಳ ಮುಂದಿನ ದಿನಾಂಕಗಳ ಬಗ್ಗೆ ನಾನೇ ಖುದ್ದಾಗಿ ತಿಳಿಸುತ್ತೇನೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸುವ ಸಂಬಂಧ ಗಂಭೀರ ಯೋಚನೆ ನಡೆಸಿದ್ದೇವೆ. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರಿಗೆ ಸೂಕ್ತ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದರು.

ರಾಜ್ಯದ ಎಲ್ಲಾ ಡಿಡಿಪಿಐ ಸಭೆಯನ್ನು ಸೋಮವಾರ(13/04/2020) ಕರೆಯಲಾಗಿದೆ. ಈ ಸಭೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನ ನಡೆಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಈ ಸಭೆಯಲ್ಲಿನ ತೀರ್ಮಾನದ ನಂತ್ರ ಪರೀಕ್ಷಾ ದಿನಾಂಕ ಪ್ರಕಟಿಸಲಾಗುತ್ತದೆ ಎಂದು ಹೇಳಿದರು.

SSLC ವಿದ್ಯಾರ್ಥಿಗಳಿಗೆ ಯೂಟ್ಯೂಬ್ ಚಾನಲ್

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಕಾಶವಾಣಿ ಮತ್ತು ದೂರದರ್ಶನದ ಮೂಲಕ ಪುನರ್ ಮನನ ಕಾರ್ಯಕ್ರಮ ನೀಡುವ ಸಂಬಂದ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುತ್ತದೆ‌. ಇದೇ ರೀತಿ ಎಲ್ಲ ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಅನುಕೂಲ ಆಗುವಂತೆ ಮುಂದಿನ ವಾರದಲ್ಲಿ ಯೂಟ್ಯೂಬ್ ಚಾನಲ್ ಆರಂಭಿಸಲಿದ್ದೇವೆ ಎಂದರು.

ಪರೀಕ್ಷೆ ನಡೆಸದೆ ಉತ್ತೀರ್ಣ ಮಾಡುವುದಿಲ್ಲ

ಲಾಕ್‌ಡೌನ್‌ ಮುಗಿದ ಬಳಿಕ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಒಂದು ವಾರ ಕಾಲ ಪುನರ್‌ ಮನನ ತರಗತಿಗಳನ್ನು ನಡೆಸಿ ನಂತರ ಪರೀಕ್ಷೆಗಳನ್ನು ನಡೆಸಲಾಗುವುದು. ಯಾವುದೇ ಕಾರಣಕ್ಕೂ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು 7, 8, 9ನೇ ತರಗತಿ ಮಾದರಿಯಲ್ಲಿ ಉತ್ತೀರ್ಣ ಮಾಡುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಹೇಳಿದ್ದಾರೆ.

ವಿದ್ಯಾರ್ಥಿಗಳು ಪರೀಕ್ಷಾ ಮೂಡ್‌ನಿಂದ ಹೊರಗೆ ಹೋಗಬಾರದು ಎಂಬ ಕಾರಣಕ್ಕಾಗಿ ಪುನರ್‌ ಮನನ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಶಿಕ್ಷಕರ ಮೂಲಕ ವಾಟ್ಸ್‌ಆ್ಯಪ್‌ ಮೂಲಕ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಹೇಳಿದರು.

ಸಾಮಾಜಿಕ ತಾಣಗಳಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಕೂಡ 7,8,9ನೇ ತರಗತಿ ಪರೀಕ್ಷೆಗಳ ರೀತಿಯಲ್ಲಿ ಉತ್ತೀರ್ಣ ಮಾಡುತ್ತಾರೆ ಎಂಬ ಗಾಳಿ ಸುದ್ದಿ ಹರಡುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಆ ರೀತಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

error: Content is protected !! Not allowed copy content from janadhvani.com