janadhvani

Kannada Online News Paper

ಕೊರೋನಾ: ಭಾರತದಲ್ಲಿ ‘ಸಮುದಾಯ ಪ್ರಸರಣ’ ಉದ್ಘವಿಸಿಲ್ಲ- ತಪ್ಪೊಪ್ಪಿಕೊಂಡ WHO

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯು ತಾನು ಬಿಡುಗಡೆ ಮಾಡಿರುವ ಕೊರೊನಾ ವೈರಸ್‌ ಹರಡುವಿಕೆಯ ಯಥಾಸ್ಥಿತಿ ವರದಿಯಲ್ಲಿ ತಪ್ಪು ನುಸುಳಿರುವುದನ್ನು ಒಪ್ಪಿಕೊಂಡಿದೆ. ‘ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಸಮುದಾಯ ಪ್ರಸರಣ ಸ್ಥಿತಿ ಮುಟ್ಟಿದೆ’ ಎಂದು ಈ ಹಿಂದೆ ಹೇಳಿದ್ದ ವಿಶ್ವ ಆರೋಗ್ಯ ಸಂಸ್ಥೆ, ತನ್ನ ಹೇಳಿಕೆಯನ್ನು ಹಿಂಪಡೆದಿದೆ.

‘ಭಾರತದಲ್ಲಿ ಸೋಂಕು ಹರಡುವ ಗುಚ್ಛಗಳು (ಕ್ಲಸ್ಟರ್‌) ಕಾಣಿಸಿಕೊಂಡಿವೆ. ಆದರೆ ಸಮುದಾಯ ಪ್ರಸರಣದ ಸ್ಥಿತಿ ಉದ್ಭವಿಸಿಲ್ಲ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.

ಏನಿದು ಸಮುದಾಯ ಪ್ರಸರಣ?

ದೇಶದ ವಿವಿಧೆಡೆ ಮತ್ತು ಪರಸ್ಪರ ಸಂಬಂಧವಿಲ್ಲದ ಹಾಟ್‌ಸ್ಪಾಟ್‌ಗಳಲ್ಲಿ ದೊಡ್ಡಮಟ್ಟದಲ್ಲಿ ಪ್ರಕರಣಗಳು ವರದಿಯಾಗಲು ಆರಂಭಿಸಿದರೆ, ಸೋಂಕಿನ ಮೂಲವನ್ನು ಗುರುತಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾದರೆ ಅಂಥ ಪರಿಸ್ಥಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಸಮುದಾಯ ಪ್ರಸರಣ ಎಂದು ಕರೆಯುತ್ತದೆ.

ಕೇಂದ್ರ ಆರೋಗ್ಯ ಸಚಿವಾಲಯವೂ ಈ ಕುರಿತು ಸ್ಪಷ್ಟನೆ ನೀಡಿದ್ದು, ‘ಭಾರತದಲ್ಲಿ ಎಲ್ಲಿಯೂ ಸಮುದಾಯ ಪ್ರಸರಣದ ಸ್ಥಿತಿ ನಿರ್ಮಾಣವಾಗಿಲ್ಲ. ಜನರು ಹೆದರುವ ಅಗತ್ಯವಿಲ್ಲ. ಆದರೆ ಜಾಗರೂಕರಾಗಿರಬೇಕು. ಸೂಚನೆಗಳನ್ನು ಪಾಲಿಸಬೇಕು’ ಎಂದು ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್‌ವಾಲ್ ಹೇಳಿದ್ದಾರೆ.

‘ಶೇ 20ರಿಂದ 30ರಷ್ಟು ಸೋಂಕು ಪ್ರಕರಣಗಳ ಮೂಲವನ್ನು ನಮ್ಮಿಂದ ಗುರುತಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾದಾಗ ಮಾತ್ರ ಸಮುದಾಯ ಪ್ರಸರಣದ ಹಂತಕ್ಕೆ ದೇಶ ಬಂದಿದೆ. ಭಾರತದಲ್ಲಿ ಸಮುದಾಯ ಪ್ರಸರಣದ ಸ್ಥಿತಿ ಈವರೆಗೆ ಉದ್ಭವವಾಗಿಲ್ಲ. ಒಂದು ವೇಳೆ ಅಂಥ ಪರಿಸ್ಥಿತಿ ಉದ್ಭವಿಸಿದರೆ ಅದನ್ನು ಜನರಿಂದ ಮುಚ್ಚಿಡುವುದಿಲ್ಲ’ ಎಂದು ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್‌ವಾಲ್ ಪ್ರತಿಕ್ರಿಯಿಸಿದ್ದರು.

ಈ ಮೊದಲು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ್ದ ಯಥಾಸ್ಥಿತಿ ವರದಿಯಲ್ಲಿ ಭಾರತದ ಅಂಕಣದ ಮುಂದೆ ‘ಸಮುದಾಯ ಪ್ರಸರಣ’ (ಕಮ್ಯುನಿಟಿ ಟ್ರಾನ್ಸ್‌ಮಿಷನ್) ಎಂದು ನಮೂದಿಸಲಾಗಿತ್ತು. ಆದರೆ ಚೀನಾದ ಕಾಲಂ ಎದುರು ‘ಪ್ರಕರಣಗಳ ಗುಚ್ಛ’ (ಕ್ಲಸ್ಟರ್ ಆಫ್ ಕೇಸಸ್) ಎಂಬ ನಮೂದು ಇತ್ತು.

ಭಾರತದಲ್ಲಿ ಈವರೆಗೆ 6,412 ಕೊರೊನಾ ವೈರಸ್‌ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 199 ಮಂದಿ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ 33 ಸಾವುಗಳು ವರದಿಯಾಗಿವೆ. ಚೀನಾದಲ್ಲಿ ‘ಕಾರಣ ತಿಳಿಯದ ನ್ಯುಮೊನಿಯಾ ಪ್ರಕರಣಗಳು’ ಚೀನಾದಲ್ಲಿ ವ್ಯಾಪಕವಾಗಿ ವರದಿಯಾಗುತ್ತಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆಯು ಅಧಿಸೂಚಿಸಿ ಇಂದಿಗೆ (ಶುಕ್ರವಾರ) 100 ದಿನಗಳಾದವು.

‘ಭಾರತದಲ್ಲಿ ಕೊರೊನಾ ಸೋಂಕು ಹರಡುವಿಕೆಯು ಸಮುದಾಯ ಪ್ರಸರಣದ ಸ್ಥಿತಿ ತಲುಪಿದೆ’ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ನು ಕೇಂದ್ರ ಸರ್ಕಾರ ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿತ್ತು.

‘ದೇಶದ 600 ಜಿಲ್ಲೆಗಳ ಪೈಕಿ 400 ಜಿಲ್ಲೆಗಳಲ್ಲಿ ಕೋವಿಡ್-19ರ ಬಾಧೆ ಕಾಣಿಸಿಕೊಂಡಿಲ್ಲ. 133 ಜಿಲ್ಲೆಗಳನ್ನು ಹಾಟ್‌ಸ್ಪಾಟ್‌ಳೆಂದು ಗುರುತಿಸಲಾಗಿದೆ’ ಎಂದು ಮಾಹಿತಿ ನೀಡಿದ್ದರು.

ನಾಲ್ಕು ವಿಭಾಗ

ವಿಶ್ವ ಅರೋಗ್ಯ ಸಂಸ್ಥೆಯ ಪ್ರಕಾರ ಸೋಂಕು ಹರಡುವಿಕೆಯನ್ನು ನಾಲ್ಕು ಹಂತಗಳಲ್ಲಿ ಗುರುತಿಸಲಾಗುತ್ತದೆ. 1) ಯಾವುದೇ ಪ್ರಕರಣ ವರದಿಯಾಗಿಲ್ಲ, 2) ಅಲ್ಲಲ್ಲಿ ಪ್ರಕರಣಗಳು ವರದಿಯಾಗಿವೆ, 3) ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೋಗ ವರದಿಯಾಗುತ್ತಿದೆ 4) ಸಮುದಾಯಗಳಿಗೆ ಸೋಂಕು ಹರಡುತ್ತಿದೆ ಎಂಬುದು ಆ ನಾಲ್ಕು ಹಂತಗಳಾಗಿದೆ. ‘

ಈ ಎಲ್ಲ ಹಂತಗಳನ್ನು ಸದಸ್ಯ ರಾಷ್ಟ್ರಗಳು ಸ್ವತಃ ವರದಿ ಮಾಡುತ್ತವೆ. ನಮ್ಮ ಸಂಸ್ಥೆ ಮಧ್ಯ ಪ್ರವೇಶಿಸುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. 16 ಲಕ್ಷ ಜನರಿಗೆ ವಿಶ್ವದ ವಿವಿಧೆಡೆ ಕೋವಿಡ್-19 ಬಂದಿದೆ. ಈವರೆಗೆ 95 ಸಾವಿರ ಮಂದಿ ಮೃತಪಟ್ಟಿದ್ದಾರೆ.

error: Content is protected !! Not allowed copy content from janadhvani.com