janadhvani

Kannada Online News Paper

ಸಮಸ್ಯೆಗಳ ಸುಳಿಯಲ್ಲಿ ಅನಿವಾಸಿ ಭಾರತೀಯರು- ಪ್ರಧಾನಿಗೆ ಪತ್ರ ಬರೆದ ಎ.ಪಿ.ಉಸ್ತಾದ್

ಕೋಝಿಕ್ಕೋಡ್: ವಿದೇಶದಲ್ಲಿರುವ ಭಾರತೀಯ ವಲಸಿಗರ ಸಮಸ್ಯೆಗಳನ್ನು ಬಗೆಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಡಾ.ಸುಬ್ರಹ್ಮಣ್ಯ ಜಯಶಂಕರ್ ಅವರಿಗೆ ಭಾರತದ ಗ್ರ್ಯಾಂಡ್ ಮುಫ್ತಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಪತ್ರ ಬರೆದಿದ್ದಾರೆ.

ನಮ್ಮ ದೇಶದ ಅಭಿವೃದ್ಧಿಯಲ್ಲಿ ವಲಸಿಗರು ಮಹತ್ವದ ಪಾತ್ರ ವಹಿಸುತ್ತಾರೆ. ಅವರು ಕಳವಳಕ್ಕೆ ಒಳಗಾಗುವ ಪರಿಸ್ಥಿತಿ ಇದೆ. ಅನೇಕ ವಲಸಿಗರು ಫ್ಲ್ಯಾಟ್‌ಗಳಲ್ಲಿ ಹತ್ತು ಅಥವಾ ಹದಿನೈದು ಮಂದಿ ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದಾರೆ. ಇಂತಹ ಅನೇಕ ಮಂದಿಯಿದ್ದು, ಕೊಲ್ಲಿಯಾದ್ಯಂತದ ಸರಕಾರಗಳು ಅವರನ್ನು ನೋಡಿಕೊಂಡಿದ್ದರೂ, ಕೊರೋನ ಪ್ರಪಂಚದಾದ್ಯಂತ ಹರಡುತ್ತಿರುವಂತೆ ಭಾರತೀಯ ನಾಗರಿಕರು ವಿದೇಶಗಳಲ್ಲಿ ಸುರಕ್ಷಿತ ಪರಿಸ್ಥಿತಿಗಳನ್ನು ಅನುಭವಿಸುತ್ತಿದ್ದಾರೆಯೇ ಎಂಬುದನ್ನು ಸರಕಾರ ಖಚಿತಪಡಿಸಿಕೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಅಗತ್ಯ ಆರೋಗ್ಯ ತಪಾಸಣೆಗಾಗಿ ಭಾರತದಿಂದ ವಿಶೇಷ ವೈದ್ಯಕೀಯ ತಂಡವನ್ನು ಕಳುಹಿಸಲು ಸರಕಾರ ಮುಂದಾಗಬೇಕು. ಲಾಕ್‌ಡೌನ್ ಆದ ಕೂಡಲೇ ಕೊಲ್ಲಿಯಿಂದ ಊರಿಗೆ ಮರಳಲು ಬಯಸುವವರಿಗೆ ತಪಾಸಣೆಯ ನಂತರ ವಿಶೇಷ ವಿಮಾನವನ್ನು ಒದಗಿಸಬೇಕು. ಸರಿಯಾದ ಪರೀಕ್ಷೆ ಮತ್ತು ಸುರಕ್ಷಿತ ಕೊರೆಂಟೈನ್ ಏರ್ಪಡಿಸುವ ಮೂಲಕ ನಮ್ಮ ನಾಗರಿಕರು ಮರಳಿ ಬರುವ ಸನ್ನಿವೇಶ ಒದಗಿಸಬಹುದು ಎಂದು ಕಾಂತಪುರಂ ಉಸ್ತಾದ್ ಸೂಚಿಸಿದರು.

ವಲಸಿಗರಿಗೆ ಆಹಾರ ಪದಾರ್ಥಗಳನ್ನು ತಲುಪಿಸುವುದು, ಅಗತ್ಯ ಔಷಧಿಗಳನ್ನು ಒದಗಿಸುವುದು, ರೋಗ ತಡೆಗಟ್ಟಲು ಹ್ಯಾಂಡ್ ಸ್ಯಾನಿಟೈಜರ್ ಮತ್ತು ಮುಖವಾಡವನ್ನು ತಲುಪಿಸುವ ಕಾರ್ಯದಲ್ಲಿ ಸರಕಾರ ಸಕ್ರಿಯ ಮೇಲ್ವಿಚಾರಣೆ ಮಾಡಬೇಕು ಎಂದು ಕಾಂತಪುರಂ ಉಸ್ತಾದರು ತಮ್ಮ ಪತ್ರದಲ್ಲಿ ವಿನಂತಿಸಿದ್ದಾರೆ.

ಹಲವು ಗಲ್ಫ್ ರಾಷ್ಟ್ರಗಳು ಸ್ವದೇಶಕ್ಕೆ ತೆರಳಲು ಬಯಸುವ ಭಾರತೀಯರು ಸಹಿತವಿರುವ ವಿದೇಶೀಯರಿಗೆ ಪ್ರತ್ಯೇಕ ವಿಮಾನ ಸೇವೆಯನ್ನು ಆರಂಭಿಸಿದೆ. ಆದರೆ ಭಾರತ, ವಿಮಾನಗಳ ಆಗಮನಕ್ಕೆ ಅನುಮತಿ ನಿರಾಕರಿಸಿದ್ದು, ಅನಿವಾಸಿಗಳನ್ನು ಸಂಕಷ್ಟಕ್ಕೀಡುಮಾಡಿದೆ.ಈ ನಿಟ್ಟಿನಲ್ಲಿ ಉಸ್ತಾದರ ಪತ್ರ ಅನಿವಾಸಿಗಳಿಗೆ ಆಶಾಭಾವನೆಯುಂಟು ಮಾಡಿದೆ.

ಕುವೈತ್ ಮತ್ತು ಬಹ್ರೈನ್ ಸಾಮೂಹಿಕ ಕ್ಷಮಾಪಣೆ ಘೋಷಿಸಿದೆ.ವಿಮಾನಯಾನ ಸೇವೆಗೆ ಭಾರತ ಅನುಮತಿ ನಿರಾಕರಿಸಿದ ಕಾರಣ ಇದರ ಸದುಪಯೋಗ ಪಡೆಯಲು ಅಸಾಧ್ಯವಾಗಲಿದೆ.

ಕುವೈತ್ ನಲ್ಲಿ ಕೊರೋನಾ ಪೀಡಿತ ಭಾರತೀಯರ ಸಂಖ್ಯೆ ಏರಿಕೆಯಾಗುತ್ತಿದ್ದು, ಅನಿವಾಸಿಗಳು ಆತಂಕಗೊಂಡಿದ್ದಾರೆ.

error: Content is protected !! Not allowed copy content from janadhvani.com