janadhvani

Kannada Online News Paper

ವಾಟ್ಸಾಪ್ ಸ್ಟೇಟಸ್ ನಲ್ಲಿ ತಿರಂಗ ಧ್ವಜ ಅಭಿಯಾನವೇ?

ಮಂಗಳೂರು: ಇದ್ದಕ್ಕಿದ್ದಂತೆ ಎಲ್ಲರ ವಾಟ್ಸಾಪ್ ಸ್ಟೇಟಸ್ಗಳು ತ್ರಿವರ್ಣ ಪತಾಕೆಯಿಂದ ರಂಗೊಳಿಸುತ್ತಿದೆ. ಇಂದು ಆಗಸ್ಟ್ 15 ಅಲ್ಲವಲ್ಲಾ? ಗಣರಾಜ್ಯೋತ್ಸವವೂ ಅಲ್ಲ ಮತ್ತೇನಿರಬಹುದು? ಎಂದು ಆಲೋಚಿಸುತ್ತಿದ್ದಂತೆ ಕೆಲವು ಆರೆಸ್ಸೆಸ್ ನವರ ಸ್ಟೇಟಸ್ ನಲ್ಲಿ ಕೇಸರಿ ಧ್ವಜ ಕಾಣಲು ಸಾಧ್ಯವಾಯಿತು.

ಒಟ್ಟಿನಲ್ಲಿ ನಡೆದಿದ್ದೇನು? ದೇಶ ಪ್ರೇಮಿ ಮತ್ತು ದೇಶ ದ್ರೋಹಿ ಆಂದೋಲನವೇ? ಅದಲ್ಲ ಹಿಂದೂ ಮುಸ್ಲಿಂ ವಾಟ್ಸಪ್ ಸಮರವೇ? ಅಲ್ಲ ಜಾತ್ಯಾತೀತರು ಮತ್ತು ಹಿಂದುತ್ವವಾದಿಗಳ ಪೈಪೋಟಿಯೇ?

ಒಂದಂತೂ ನಿಜ, ದೇಶಾದ್ಯಂತ ಲಾಕ್ಡೌನ್ ಆದ ಕಾರಣ ಮನೆಯಲ್ಲೇ ಉಳಿದು ಉಸಿರುಗಟ್ಟಿದಂತಾಗಿರುವ ಯುವ ಪೀಳಿಗೆಯು, ತಿಳುವಳಿಕೆ ಇಲ್ಲದೆಯೋ, ಟೈಂಪಾಸ್ ಗಾಗಿಯೋ ಇತರರ ಮನಸ್ಸನ್ನು ನೋಯಿಸಿ ವಿಕೃತ ಆನಂದ ಪಡುವುದು ನಿತ್ಯ ರೂಢಿಯಾಗಿ ಬಿಟ್ಟಿದೆ.

ಇತರ ಧರ್ಮೀಯರನ್ನು ಅವರ ಧರ್ಮದ ಹೆಸರಿನಲ್ಲಿ ಹೀಯಾಳಿಸುವುದು,ಅವರ ವಿರುದ್ಧ ಮನಬಂದಂತೆ ಗೀಚುವುದು, ಸರಿಯೋ ತಪ್ಪೋ ಎಂದರಿಯದೆ ಇಲ್ಲ ಸಲ್ಲದ ಆರೋಪಗಳನ್ನು ಸಾಮಾಜಿಕ ತಾಣದಲ್ಲಿ ಹರಿಯಬಿಡುವುದು ಕೆಲಸವಿಲ್ಲದೆ ಕಾಲ ಕಳೆಯುತ್ತಿದ್ದವರ ಚಾಳಿಯಾಗಿತ್ತು, ಆದರೆ ಇಂದು ಎಲ್ಲರೂ ಕೆಲಸವಿಲ್ಲದೆ ಮನೆಯಲ್ಲಿದ್ದಾರೆ ಮತ್ತೆ ಈ ರೀತಿಯ ಸಮಾಜ ದ್ರೋಹಿ ಕೆಲಸಗಳು ಜಾಸ್ತಿಯಾಗಿರುವುದು ಅತಿಷಯೋಕ್ತಿಯಲ್ಲ.

ಜನರು ಮನೆಯಲ್ಲಿದ್ದರೂ, ಸರಕಾರ, ಆಡಳಿತ ವರ್ಗ, ಅಧಿಕಾರಿಗಳು, ಕಾನೂನು ಪಾಲಕರು ಸಕ್ರಿಯವಿದ್ದಾರೆ ಎಂಬುದನ್ನು ಮರೆತಂತೆ ವರ್ತಿಸುತ್ತಿದ್ದಾರೆ ಕೆಲವು ಕಿಡಿಗೇಡಿಗಳು. ಅವರ ವಿರುದ್ಧ ಪ್ರಕರಣ ದಾಖಲಾದಾಗಲೇ ತಮ್ಮ ತಪ್ಪಿನ ಅರಿವಾಗುವುದು.ಆದರೆ ಪ್ರಕರಣ ದಾಖಲಿಸದಂತೆ ಕೆಲವು ಮುಖಂಡರು ಕಾನೂನು ಪಾಲಕರಾದ ಪೋಲೀಸರಿಗೆ ಧಮಕಿ ಹಾಕಿದ ಪ್ರಸಂಗ ನಡೆದದ್ದು ವಿಪರ್ಯಾಸ.

ಇಳಿ ವಯಸ್ಸಿನ, ಬಿಸಿ ರಕ್ತದ ಹುಂಗಿನಲ್ಲಿ ಅನಿಯಂತ್ರಿತವಾಗಿ ಧುಮುಕಿದರೆ ಒಂದಲ್ಲೊಂದು ದಿನ ಅದರ ದುಷ್ಪರಿಣಾಮ ತಮ್ಮ ಜೀವನದಲ್ಲಿ ಬಂದೆರಗಲಿದೆ ಎಂಬುದನ್ನು ಮನೆಯಲ್ಲಿರುವ ಹಿರಿಯರು, ಪೋಷಕರು ಬುದ್ದಿವಾದ ಹೇಳಿ ಮನುಷ್ಯರೆಡೆಯಲ್ಲಿ ಮಾನವೀಯತೆಯಿಂದ ವರ್ತಿಸುವ ಪಾಠ ಕಲಿಸಬೇಕಾಗಿದೆ.

ಈ ಕೊರೋನಾ ವೈರಸ್ ಮಹಾಮಾರಿಯನ್ನು ಎದುರಿಸಲು ಭಾರತೀಯರಾದ ನಾವೆಲ್ಲರೂ ಒಗ್ಗಟ್ಟಿನಲ್ಲೇ ಹೋರಾಡೋಣ, ಜೈ ಹಿಂದ್

#stay home

#stay safe

error: Content is protected !! Not allowed copy content from janadhvani.com