janadhvani

Kannada Online News Paper

ರೇಷನ್ ಕಾರ್ಡ್ ಇಲ್ಲದ ಬಡವರಿಗೆ ಪಡಿತರ ನೀಡಲು ಚಿಂತನೆ-ಉಪಮುಖ್ಯ ಮಂತ್ರಿ

ಬೆಂಗಳೂರು:ಮಹಾಮಾರಿ ಕೊರೊನ ವಿರುದ್ಧ ಇಂದು ಜಗತ್ತೇ ಒಂದಾಗಿ ಹೋರಾಡುತ್ತಿದೆ. ಅದೇ ರೀತಿ ನಾವು ಕೂಡ ಜಾತಿ, ಮತವೆಂಬ ಬೇಧವಿಲ್ಲದೆ ಕೋವಿಡ್ 19 (Covid) ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ರಾಜ್ಯದ ಲ್ಲಿ ಶೇ .25ಕೂ ಹೆಚ್ಚು ನಾಗರಿಕರ ಬಳಿ ಇನ್ನೂ ರೇಷನ್ ಕಾರ್ಡ್ ಇಲ್ಲ. ಹೀಗಾಗಿ ಅಂತಹ ಬಡವರಿಗೂ ಪಡಿತರ ಕೊಡುವ ಉದ್ದೇಶ ಇದೆ‌. ಈ ಕುರಿತು ಮುಖ್ಯಮಂತ್ರಿಗಳ ಜತೆ ಮಾತನಾಡಿ ಬಡವರಿಗೂ ಪಡಿತರ ಕೊಡುವ ವ್ಯವಸ್ಥೆ ಮಾಡಲಾಗುವುದು ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ಬತ್ಥನಾರಾಯಣ ಹೇಳಿದ್ದಾರೆ.

ಮಲ್ಲೇಶ್ವರಂ ವಿಧಾನಸಭೆ ಕ್ಷೇತ್ರದಲ್ಲಿ ಕೊರೊನಾದಿಂದ ಕಂಗಾಲಾಗಿರುವ ಬಡ ಬ್ರಾಹ್ಮಣರಿಗೆ ಬುಧವಾರ ಆಹಾರ ಕಿಟ್ ಗಳನ್ನು ವಿತರಿಸಿ ಮಾತನಾಡಿದ ಅವರು, ಆಹಾರ ಪದಾರ್ಥಗಳ ಕೊರತೆಯಾಗದಂತೆ ಸರಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಮುಖ್ಯವಾಗಿ ಪಡಿತರ ವಿತರಣೆಯಲ್ಲಿ ಲೋಪವಾಗದಂತೆ ನಿಗಾ ಇರಿಸಲಾಗಿದೆ ಎಂದಿದ್ದಾರೆ.

ಹಸಿವು ಎನ್ನುವುದು ಯಾರಿಗೂ ಇರಬಾರದು. ಯಾರೂ ಸಹ ಹಸಿವಿನಿಂದ ಸಾಯುವಂಥ ಪರಿಸ್ಥಿತಿ ನಿರ್ಮಾಣವಾಗಬಾರದು. ಸರಕಾರದ್ದು ಇದೇ ಬದ್ಧತೆ. ಈ ನಿಟ್ಟಿನಲ್ಲಿ ಈ ಆಹಾರ ಕಿಟ್ ಗಳ ವಿತರಣೆಗೆ ಕಾರಣರಾಗಿರುವ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಅವರನ್ನು ಮನಸಾರೆ ಅಭಿನಂದಿಸುತ್ತೇನೆ ಎಂದರು.

ಬ್ರಾಹ್ಮಣರಿಗೂ ಸೇರಿದಂತೆ ಪ್ರತಿಯೊಬ್ಬರಿಗೂ ಜೀವನೋಪಾಯ ಇಲ್ಲದಂತೆ ಆಗಿದೆ. ನಿತ್ಯ ಅನ್ನದ ಬವಣೆ ನೀಗಿಸುವುದೇ ಕಷ್ಟವಾಗಿದೆ. ಹೀಗಾಗಿ ಉಳ್ಳವರು ಇಲ್ಲದವರಿಗೆ ಅನ್ನದಾನ ಮಾಡಲು ಇದು ಸರಿಯಾದ ಸಮಯ ಎಂದು ಅಶ್ವತ್ಥ ನಾರಾಯಣ ಅಭಿಪ್ರಾಯಪಟ್ಟಿದ್ದಾರೆ.

ಮಲ್ಲೇಶ್ವರಂ ವಿಧಾನಸಭೆ ಕ್ಷೇತ್ರದಲ್ಲಿ ಒಂದೆಡೆ ಕೊರೊನವನ್ನು ಎದುರಿಸುತ್ತಲೇ ಮತ್ತೊಂದೆಡೆ ಕೊರೊನದಿಂದ ಸಂಕಷ್ಚಕ್ಕೆ ಸಿಲುಕಿದವರ ನೆರವಿಗೆ ಧಾವಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸರಕಾರಕ್ಕೆ ಸಾರ್ವಜನಿಕರಿಂದ ಹೆಚ್ಚಿನ ಸಹಕಾರ ಬೇಕಾಗಿದೆ ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಗೋಪಾಲಯ್ಯ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಮಲ್ಲೇಶ್ವರಂ ಬ್ರಾಹ್ಮಣ ಸಂಘ ಅಧ್ಯಕ್ಷ ಪ್ರಕಾಶ ಅಯ್ಯಂಗಾರ್ ಸೇರಿದಂತೆ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com