janadhvani

Kannada Online News Paper

ಚಿಕಿತ್ಸೆಗೆ ಒಪ್ಪದ ತಬ್ಲಿಗ್ ರನ್ನು ಗುಂಡಿಕ್ಕಿ ಕೊಲ್ಲಿ ಎಂದ ರೇಣುಕಾಚಾರ್ಯರನ್ನು ಬಂಧಿಸಿ-ಸಿದ್ದರಾಮಯ್ಯ

ಬೆಂಗಳೂರು: “ತಬ್ಲಿಗ್ ಜಮಾತ್ ನಲ್ಲಿ ಪಾಲ್ಗೊಂಡು ವಾಪಸ್ ಬಂದ ಮುಸ್ಲಿಮರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸದವರು ದೇಶ ದ್ರೋಹಿಗಳು. ಚಿಕಿತ್ಸೆಗೆ ಸ್ಪಂದಿಸದೆ ಕದ್ದು ಮುಚ್ಚಿ ಓಡಾಡುವರನ್ನ ಗುಂಡಿಕ್ಕಿ ಕೊಲ್ಲಿ” ಎಂದು ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಅವರನ್ನು ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಶಾಸಕರಾದ ಎಂಪಿ ರೇಣುಕಾಚಾರ್ಯ ಅವರು ದುರುದ್ದೇಶದಿಂದ ಹೇಳಿಕೆಯನ್ನು ಕೊಟ್ಟಿದ್ದಾರೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಕೊರೊನಾ ವೈರಸ್ ಹರಡಲು ಅವರೇ ಕಾರಣ ಎಂದು ಜನರ ಮುಂದೆ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎಂದು ಕಿಡಿಕಾರಿದರು.

ಗುಂಡಿಕ್ಕಿ ಕೊಲ್ಲಿ ಎಂಬುವುದು ಪ್ರಚೋದನಾಕಾರಿ ಹೇಳಿಕೆಯಾಗಿದ್ದು ಇದು ಕಾನೂನು ಪ್ರಕಾರ ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಹಾಗೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಶಾಸಕ ಎಂಪಿ ರೇಣುಕಾಚಾರ್ಯ ಮುಖ್ಯಮಂತ್ರಿ ಬಿ.ಎಸ್‌.ವೈ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ. ರೇಣುಕಾಚಾರ್ಯ ಅವರ ಹೆಳಿಕೆಗಳು ಸಿಎಂ ಹೇಳಿಕೆಯಾಗಿ ಹೊರಹೊಮ್ಮುತ್ತದೆ. ಈ ನಿಟ್ಟಿನಲ್ಲಿ ಅವರನ್ನು ಕೂಡಲೇ ಆ ಹುದ್ದೆಯಿಂದ ವಜಾ ಮಾಡಬೇಕು. ಇದೇ ರೀತಿಯ ಹೇಳಿಕೆಯನ್ನು ಕೊಟ್ಟಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರೇಣುಕಾಚಾರ್ಯ ಶಾಸಕರಾಗಿ ಇರಲು ನಾಲಾಯಕ್ ಎಂದ ಸಿದ್ದರಾಮಯ್ಯ ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.

error: Content is protected !! Not allowed copy content from janadhvani.com