janadhvani

Kannada Online News Paper

ಕೊರೋನಾ: ಔಷಧಿ ರಫ್ತು ಮಾಡದಿದ್ದಲ್ಲಿ ಪ್ರತೀಕಾರ- ಭಾರತಕ್ಕೆ ಟ್ರಂಪ್ ಎಚ್ಚರಿಕೆ

ದೆಹಲಿ, ಏಪ್ರಿಲ್ 7: ಸಾಂಕ್ರಾಮಿಕ ರೋಗ ಕೊರೊನಾ ವೈರಸ್‌ನಿಂದ ಹೊರಬರಲು ವಿಶ್ವದ ಬಹುತೇಕ ರಾಷ್ಟ್ರಗಳು ದೊಡ್ಡ ಹೋರಾಟವನ್ನೇ ಮಾಡುತ್ತಿದೆ. ಅದರಲ್ಲೂ ‘ವಿಶ್ವದ ದೊಡ್ಡಣ್ಣ’ ಎಂದು ಬೀಗುತ್ತಿದ್ದ ಅಮೆರಿಕ ಎಲ್ಲ ಪ್ರಯತ್ನ ಮಾಡಿ, ಪರಿಹಾರ ಸಿಗದೆ ಒದ್ದಾಡುತ್ತಿದೆ.

ಅಮೆರಿಕದಲ್ಲಿ 3.6 ಲಕ್ಷ ಜನರಿಗೆ ಸೋಂಕು ಕಾಣಿಸಿಕೊಂಡಿದೆ. 10 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಏರಿಕೆ ನೋಡುತ್ತಿದ್ದರೆ ಅಮೆರಿಕ ಸ್ಥಿತಿ ಬಹಳ ಗಂಭೀರವಾಗುವ ಎಲ್ಲ ಲಕ್ಷಣಗಳಿವೆ.

ಈ ನಡುವೆ ಭಾರತದಲ್ಲಿ ಕೊರೊನಾ ತಡೆಗೆ ಬಳಸುತ್ತಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ (ಮಲೇರಿಯಾ ತಡೆ ಔಷಧ) ಔಷಧ ನೀಡುವಂತೆ ಭಾರತ ಪ್ರಧಾನಿ ಮೋದಿ ಬಳಿ ದೂರವಾಣಿಯಲ್ಲಿ ಮನವಿ ಮಾಡಿಕೊಂಡ ಡೊನಾಲ್ಡ್ ಟ್ರಂಪ್, ಈಗ ಭಾರತಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ನಮ್ಮ ಮನವಿಯನ್ನು ತಿರಸ್ಕರಿಸಿದರೆ ಪ್ರತಿಕಾರಕ್ಕೆ ಸಿದ್ಧ ಎಂದು ಸವಾಲು ಎಸೆದಿದ್ದಾರೆ.

ಈ ಕುರಿತು ಅಮೆರಿಕದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಟ್ರಂಪ್, ಭಾರತಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ”ನಾನು ಭಾರತದ ಪ್ರಧಾನಿ ಬಳಿ ಭಾನುವಾರ ಮಾತನಾಡಿದ್ದೇನೆ, ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಕ್ಕಾಗಿ ಮನವಿ ಮಾಡಿದ್ದೇನೆ,ನೀಡುವುದಾಗಿ ಒಪ್ಪಿಕೊಂಡಿದ್ದಾರೆ, ಒಂದು ವೇಳೆ ಭಾರತ ಆ ಔಷಧ ನೀಡಿದ್ರೆ ಸಂತೋಷ. ಕೊಡಲು ನಿರಾಕರಿಸಿದರೆ ಪರವಾಗಿಲ್ಲ. ಆದರೆ ಅದಕ್ಕೆ ಪ್ರತಿಕಾರವೂ ಇರಬಹುದು. ಏಕೆ ಇರಬಾರದೇ?” ಎಂಬ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.

error: Content is protected !! Not allowed copy content from janadhvani.com