janadhvani

Kannada Online News Paper

7,8 ನೇ ವಿದ್ಯಾರ್ಥಿಗಳು ಪರೀಕ್ಷೆ ರಹಿತ ಪಾಸ್, 9ನೇ ತರಗತಿಗೆ ಕ್ಲಾಸ್ ಟೆಸ್ಟ್ ಆಧಾರಿತ ಉತ್ತೀರ್ಣ

ಬೆಂಗಳೂರು:ದೇಶಾದ್ಯಂತ ಕೊರೋನಾ ಹರಡುವ ಭೀತಿಯಲ್ಲಿ ಶಾಲಾ ಕಾಲೇಜ್ ಗೆ ರಜೆ ಸಾರಲಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆಯನ್ನು ಕಾದು ನೋಡುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಶಿಕ್ಷಣ ಸಚಿವರು ಮಹತ್ವದ ತೀರ್ಮಾನವನ್ನು ಪ್ರಕಟಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿಯನ್ನು ಏಪ್ರಿಲ್ 14 ರ ನಂತರ ಸಿದ್ಧಪಡಿಸುವ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಚಿವರಾದ ಎಸ್‌ ಸುರೇಶ್‌ಕುಮಾರ್ ರವರು ತಿಳಿಸಿದ್ದಾರೆ.

ಒಂದರಿಂದ-ಆರನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ಪರೀಕ್ಷೆ ರಹಿತ ಪಾಸ್‌ ಮಾಡಲು ಈ ಹಿಂದೆಯೇ ಆದೇಶ ನೀಡಿತ್ತು. ಇದೀಗ 7 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೂ ಯಾವುದೇ ಪರೀಕ್ಷೆ ನಡೆಸದೇ ಮುಂದಿನ ತರಗತಿಗಳಿಗೆ ಪ್ರಮೋಷನ್ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

7 ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಎಕ್ಸಾಮ್‌ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಕೋವಿಡ್-19 ವೈರಾಣು ರಾಜ್ಯದಲ್ಲಿ ಹಲವು ಸಮಸ್ಯೆಗಳಿಗೆ ತೊಡಕು ಉಂಟುಮಾಡಲಾದ ಕಾರಣ, ಏಳನೇ ತರಗತಿ ವಿದ್ಯಾರ್ಥಿಗಳನ್ನು ಯಾವುದೇ ಪರೀಕ್ಷಾ ಶರತ್ತುಗಳನ್ನು ವಿಧಿಸದೇ ಪಾಸ್‌ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

9 ತರಗತಿ ವಿದ್ಯಾರ್ಥಿಗಳಿಗೆ ಫಾರ್ಮೆಟಿವ್ ಮತ್ತು ಸಮ್ಮೇಟಿವ್ ಟೆಸ್ಟ್‌ಗಳ ಆಧಾರಿತವಾಗಿ ಮುಂದಿನ ತರಗತಿಗೆ ಪಾಸ್‌ ಮಾಡಲು ಉದ್ದೇಶಿಸಲಾಗಿದೆ. ಈ ಪರೀಕ್ಷೆಗಳಲ್ಲಿ ಪಾಸ್‌ ಆಗದ ವಿದ್ಯಾರ್ಥಿಗಳನ್ನು, ರಜೆಯ ಸಮಯದಲ್ಲಿ ಕಲಿಕೆಯಲ್ಲಿ ಉತ್ತಮಗೊಳಿಸಿ, ಅವರಿಗೆ ನಂತರ ಪರೀಕ್ಷೆ ನೀಡಿ ಪಾಸ್‌ ಮಾಡಲು ಶಾಲೆಗಳೇ ನಿರ್ಧಾರ ಕೈಗೊಳ್ಳಲು ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ದ್ವಿತೀಯ ಪಿಯುಸಿಯ ಇಂಗ್ಲಿಷ್ ಪರೀಕ್ಷೆ ಬಾಕಿ ಉಳಿದಿದ್ದು, ಈ ಸಬ್ಜೆಕ್ಟ್‌ಗೆ ಪರೀಕ್ಷೆಯನ್ನು ಯಾವಾಗ ಮಾಡಬೇಕು ಎಂದು ಏಪ್ರಿಲ್ 14 ರ ನಂತರವೇ ನಿರ್ಧಾರ ಕೈಗೊಳ್ಳುವುದಾಗಿ ಶಿಕ್ಷಣ ಸಚಿವರು ಹೇಳಿದ್ದಾರೆ.

ಎಕ್ಸಾಮ್‌ ಇಲ್ಲ ಅಂತ ಮಕ್ಕಳು ಬೀದಿಗೆ ಬರಬಾರದು. ಪೋಷಕರು ಮಕ್ಕಳ ಬಗ್ಗೆ ಜಾಗೃತಿ ವಹಿಸಿ ಅವರು ಹೊರಬರದಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ.

error: Content is protected !! Not allowed copy content from janadhvani.com