janadhvani

Kannada Online News Paper

ಇಂಜಿನಿಯರಿಂಗ್,ಪಾಲಿಟೆಕ್ನಿಕ್​ ಕಾಲೇಜ್ ಸಿಬ್ಬಂದಿಗಳಿಗೆ ಏ.14ರ ವರೆಗೆ ರಜೆ ಮುಂದುವರಿಕೆ

ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆ ಅಧೀನದ ಎಲ್ಲ ಇಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್​ ಕಾಲೇಜು ಮತ್ತು ಕಿರಿಯ ತಾಂತ್ರಿಕ ಶಾಲೆಗಳಲ್ಲಿನ ಬೋಧಕ, ಬೋಧಕೇತರ ಸಿಬ್ಬಂದಿಗೂ ಏ.14ರವರೆಗೆ ರಜೆ ಮುಂದುವರಿಸಲಾಗಿದೆ.

ಈ ಮೊದಲು ಮಾರ್ಚ್​ 31ರವರೆಗೆ ರಜೆ ನೀಡಿ ಆದೇಶ ಹೊರಡಿಸಲಾಗಿತ್ತು. ಆದರೆ, ಕರೊನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವುದರಿಂದ ದೇಶಾದ್ಯಂತ ಏಪ್ರಿಲ್​ 14ರವರೆಗೆ ಲಾಕ್​ಡೌನ್​ ಮಾಡಿ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ಅಧೀನದ ಶಿಕ್ಷಣ ಸಂಸ್ಥೆಗಳಿಗೂ ರಜೆವಿಸ್ತರಿಸಲಾಗಿದೆ ಎಂದು ಇಲಾಖೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಕೂಡ ಏಪ್ರಿಲ್​ 11ರವರೆಗೆ ರಜೆ ಘೋಷಿಸಿದ್ದು, ಏಪ್ರಿಲ್​ 11ರ ನಂತರ ಬೇಸಿಗೆ ರಜೆ ಮುಂದುವರಿಯಲಿದೆ ಎಂದು ತಿಳಿಸಿದೆ. ಆದರೆ, ಶಿಕ್ಷಕರು ಕೇಂದ್ರ ಸ್ಥಾನ ಬಿಟ್ಟು ತೆರಳದಂತೆ ಸೂಚಿಸಿದೆ.

ಲಾಕ್​ಡೌನ್​ ಹಿನ್ನೆಲೆಯಲ್ಲಿ ನೀಡಲಾಗಿರುವ ರಜೆಯಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿಗಳು ಕೆಲ ಕಾರ್ಯಗಳನ್ನು ನಿರ್ವಹಿಸುವಂತೆ ಇಲಾಖೆ ಈ ಹಿಂದಯೆ ಸ್ಪಷ್ಟವಾಗಿ ನಿರ್ದೇಶನ ನೀಡಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಆನ್​ಲೈನ್​ ಬೋಧನೆಗೆ ಅಗತ್ಯ ಸಾಮಗ್ರಿ ಸಿದ್ಧಪಡಿಸುವುದು, ವಿದ್ಯಾರ್ಥಿಗಳಿಗೆ ಆನ್​ಲೈನ್​ ಬೋಧನೆ ಹಾಗೂ ಕಲಿಕೆಗೆ ನೆರವಾಗುವುದು, ಎಲ್ಲಕ್ಕೂ ಮುಖ್ಯವಾಗಿ ಕರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ತುರ್ತು ಕಾರ್ಯಗಳು ಎದುರಾದರೆ ಸಿದ್ಧವಾಗಿರುವಂತೆ ತಿಳಿಸಿದೆ. ಇದಕ್ಕಾಗಿ ಸಂಸ್ಥೆಯಲ್ಲಿ ಒಬ್ಬರನ್ನು ಕರೊನಾ ಸಮನ್ವಯ ಅಧಿಕಾರಿಯಾಗಿ ನೇಮಿಸುವಂತೆ ಸೂಚಿಸಿದೆ.

error: Content is protected !! Not allowed copy content from janadhvani.com