janadhvani

Kannada Online News Paper

ಲಾಕ್‌ಡೌನ್: 3 ಸಾವಿರಕ್ಕೂ ಮಿಕ್ಕ ವಾಹನ ಜಪ್ತಿ- NDMA ಕಾಯ್ದೆ ಪ್ರಕಾರ ಕೇಸ್

ಬೆಂಗಳೂರು,ಮಾರ್ಚ್‌ 31: ಭಾರತದಲ್ಲಿ ಮಾರಣಾಂತಿಕ ಕೊರೋನಾ ವೈರಸ್ ಸಾಮೂದಾಯಿಕವಾಗಿ ಹರಡುವುದನ್ನು ತಡೆಯುವ ಸಲುವಾಗಿ ದೇಶದಲ್ಲಿ 21 ದಿನಗಳ ಕಾಲ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು. ಆದರೆ, ಈ ನಿಯಮವನ್ನು ಸಾರ್ವಜನಿಕರು ಸರಿಯಾಗಿ ಪಾಲಿಸುತ್ತಿಲ್ಲ.

ಲಾಕ್‌ಡೌನ್ ನಡುವೆಯೂ ಬೇಕಾಬಿಟ್ಟಿಯಾಗಿ ನಗರದಲ್ಲಿ ವಾಹನ ಚಲಾವಣೆ ಮಾಡಿದರೆ ಕೇಂದ್ರದ NDMA ಕಾಯ್ದೆಯ ಪ್ರಕಾರ ಕೇಸ್ ದಾಖಲಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ. ಲಾಕ್‌ಡೌನ್ ಉದ್ದೇಶ ಈಡೇರದ ಕಾರಣ ಪೊಲೀಸ್‌ ಇಲಾಖೆ ಇಂತಹ ತೀರ್ಮಾನಕ್ಕೆ ಬಂದಿದೆ ಎನ್ನಲಾಗುತ್ತಿದೆ.

ಲಾಕ್‌ಡೌನ್‌ ನಡುವೆಯೂ ವಾಹನ ಸಂಚಾರ ಮಾಡಿದ ಆರೋಪದ ಅಡಿಯಲ್ಲಿ ನಗರದಲ್ಲಿ ಈವರೆಗೆ ಒಟ್ಟು 3151 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಪೈಕಿ 2883 ಬೈಕ್ ಗಳು, 107 ಆಟೋಗಳು,161 ಕಾರುಗಳು ಸೇರಿವೆ. ಕೆಲ ಐಶಾರಾಮಿ ಕಾರುಗಳನ್ನೂ ಕೂಡ ‌ಜಪ್ತಿ ಮಾಡಲಾಗಿದೆ ಎನ್ನಲಾಗುತ್ತಿದೆ.

ಲಾಕ್‌ಡೌನ್‌ ಪೊಲೀಸ್ ಪಾಸ್ ದುರ್ಬಳಕೆ?:

ಕೊರೋನಾ ಲಾಕ್‌ಡೌನ್ ನಡುವೆಯೂ ನಗರದಲ್ಲಿ ಸಂಚರಿಸಲು ಸರ್ಕಾರಿ ನೌಕರರು ಸೇರಿದಂತೆ ಕೆಲವರಿಗೆ ಮಾತ್ರ ಪೊಲೀಸರು ಪಾಸ್ ನೀಡಲು ಮುಂದಾಗಿದ್ದರು. ಆದರೆ, ಇದರಲ್ಲೂ ಪೊಲೀಸ್ ಇಲಾಖೆ ಅವ್ಯವಹಾರ ನಡೆಸಿದ ಆರೋಪವನ್ನು ಎದುರಿಸುತ್ತಿದೆ.

ಈ ನಡುವೆ ಕೊರೋನಾ ಪೊಲೀಸ್ ಪಾಸ್‌ಗಳು ಸುಮಾರು 10 ಲಕ್ಷದಷ್ಟು ಬೇಡಿಕೆ ಇತ್ತು. ಆದರೆ, ಅಳೆದು-ತೂಗಿ ಕೇವಲ 90 ಸಾವಿರದಿಂದ 1 ಲಕ್ಷದವರೆಗೆ ಮಾತ್ರ ಪಾಸ್ ವಿತರಣೆ ಮಾಡಲಾಗಿದೆ. ಆದರೆ, ಅದರಲ್ಲೂ ಕೆಲವರು ಪೊಲೀಸ್ ಪಾಸ್ ದುರ್ಬಳಕೆ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಈ ಆ ಬಗ್ಗೆ ತನಿಖೆ ನಡೆಸಲು ಎಲ್ಲ ಡಿಸಿಪಿಗಳಿಗೆ‌ ಸೂಚಿಸಿದ್ದೇನೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

error: Content is protected !! Not allowed copy content from janadhvani.com