janadhvani

Kannada Online News Paper

ಲಾಕ್‌ಡೌನ್‌ : ಪ್ರೀಪೇಯ್ಡ್ ಬಳಕೆದಾರರ ವ್ಯಾಲಿಡಿಟಿ ವಿಸ್ತರಿಸಿ- ಟ್ರಾಯ್‌

ನವದೆಹಲಿ: ದೇಶವ್ಯಾಪಿ ಜಾರಿಯಾಗಿರುವ 21 ದಿನಗಳ ಲಾಕ್‌ಡೌನ್‌ ಸಂದರ್ಭದಲ್ಲಿ ಯಾವುದೇ ಬಳಕೆದಾರ ದೂರ ಸಂಪರ್ಕ ಸೇವೆಯಿಂದ ವಂಚಿತರಾಗದಂತೆ ಕ್ರಮವಹಿಸಲು, ಪ್ರೀಪೇಯ್ಡ್ ಬಳಕೆದಾರರ ವ್ಯಾಲಿಡಿಟಿ ಅವಧಿ ವಿಸ್ತರಿಸುವಂತೆ ಟ್ರಾಯ್‌ ಟೆಲಿಕಾಂ ಆಪರೇಟರ್‌ಗಳಿಗೆ ಸೂಚಿಸಿದೆ.

ಪ್ರಿಪೇಯ್ಡ್‌ ಬಳಕೆದಾರರಿಗೆ ಅಡಚಣೆ ರಹಿತ ಸೇವೆ ನೀಡಲು ಟೆಲಿಕಾಂ ಆಪರೇಟರ್‌ಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ನೀಡುವಂತೆ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಕೇಳಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಪ್ರಿಪೇಯ್ಡ್‌ ಬಳಕೆದಾರರಿಗೆ ರಿಚಾರ್ಜ್‌ ವೋಚರ್‌ಗಳು ಹಾಗೂ ಪಾವತಿಸುವ ಸೇವೆಗಳ ಲಭ್ಯತೆ, ವ್ಯಾಲಿಡಿಟಿ ಅವಧಿ ವಿಸ್ತರಿಸುವ ಮೂಲಕ ಅಡವಣೆ ಆಗದಂತೆ ನಿರಂತರ ಸೇವೆ ನೀಡುವ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಟ್ರಾಯ್‌ ತಿಳಿಸಿದೆ. ದೂರ ಸಂಪರ್ಕ ಸೇವೆಯನ್ನು ಅಗತ್ಯ ಸೇವೆಗಳ ಸಾಲಿಗೆ ಸೇರಿಸಿರುವುದರಿಂದ ಲಾಕ್‌ಡೌನ್‌ನಿಂದ ಟೆಲಿಕಾಂ ಸೇವೆಗಳು ಹೊರತಾಗಿವೆ. ಆದರೆ, ಟೆಲಿಕಾಂ ಕಂಪನಿಗಳ ಗ್ರಾಹಕ ಸೇವೆ ಕೇಂದ್ರಗಳು, ಮಾರಾಟ ಕೇಂದ್ರಗಳಲ್ಲಿ ಸಿಬ್ಬಂದಿ ಸೇವೆಗೆ ತೊಂದರೆ ಉಂಟಾಗಿದೆ.

ಆನ್‌ಲೈನ್‌ ಹೊರತಾದ ಮಾರ್ಗಗಳ ಮೂಲಕ ಪ್ರೀಪೇಯ್ಡ್‌ ಗ್ರಾಹಕ ಬಳಕೆ ಮುಂದುವರಿಸಲು ಟಾಪ್‌ ಮಾಡಿಕೊಳ್ಳುವುದು, ಬ್ಯಾಲೆನ್ಸ್‌ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬಹುದು. ಬಹುತೇಕ ಮಳಿಗೆಗಳು ಲಾಕ್‌ಡೌನ್‌ ಆಗಿರುವುದರಿಂದ ರಿಚಾರ್ಜ್‌ ಸೌಲಭ್ಯ ಸಿಗದೇ ತೊಂದರೆಗೆ ಸಿಲುಕುವುದನ್ನು ತಪ್ಪಿಸಲು ಟ್ರಾಯ್‌ ಸೂಚನೆಗಳನ್ನು ನೀಡಿದೆ.

ದೇಶದಲ್ಲಿ ಒಟ್ಟು 1,071 ಜನರಲ್ಲಿ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿದ್ದು, ಈವರೆಗೂ 29 ಜನರನ್ನು ಬಲಿ ಪಡೆದಿದೆ. ಸೋಂಕು ವ್ಯಾಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಮಾರ್ಚ್‌ 24ರಂದು ಪ್ರಧಾನಿ ನರೆಂದ್ರ ಮೋದಿ ದೇಶದಾದ್ಯಂತ 21 ದಿನಗಳ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿದರು. ಬಸ್‌, ರೈಲು ಹಾಗೂ ವಿಮಾನ ಹಾರಾಟ ಸೇವೆಗಳು ಸಹ ಸ್ಥಗಿತಗೊಂಡಿವೆ.

error: Content is protected !! Not allowed copy content from janadhvani.com