janadhvani

Kannada Online News Paper

ಲಾಕ್​ಡೌನ್​ ಎಫೆಕ್ಟ್: 200 ಕಿ.ಮೀ.ಕಾಲ್ನಡಿಗೆಯಲ್ಲೇ ಕ್ರಮಿಸಿ, ಕುಸಿದು ಬಿದ್ದು ಸಾವು

ಆಗ್ರಾ,ಮಾ.29:ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಭೀತಿ ಹಿನ್ನೆಲೆ ಏಪ್ರಿಲ್​ 14ರವರೆಗೆ ಇಡೀ ದೇಶವನ್ನೇ ಲಾಕ್​ಡೌನ್​ ಮಾಡಲಾಗಿದೆ. ಅಗತ್ಯ ಮತ್ತು ತುರ್ತು ಸೇವೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸೇವೆಯ ಲಭ್ಯವಿಲ್ಲ. ಹೀಗಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬದುಕು ಕಟ್ಟಿಕೊಳ್ಳಲು ಬೇರೆಡೆಗೆ ವಲಸೆ ಹೋಗಿದ್ದ ಅಸಂಖ್ಯಾತ ಜನರು ಕೊರೋನಾ ಭೀತಿಯಿಂದ ತಮ್ಮ ತಮ್ಮ ಊರುಗಳಿಗೆ ಹಿಂತಿರುಗುತ್ತಿದ್ದಾರೆ.

ದೇಶಾದ್ಯಂತ ದಿನಗೂಲಿ ಕಾರ್ಮಿಕರು ಸೇರಿದಂತೆ ಅನೇಕ ಜನರು ಕಾಲ್ನಡಿಗೆಯಲ್ಲೇ ತಮ್ಮ ಮನೆ ಸೇರುವ ಧಾವಂತದಲ್ಲಿದ್ದಾರೆ. ದೆಹಲಿಯ ರೆಸ್ಟೋರೆಂಟ್​​ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಲಾಕ್​ಡೌನ್​​ ಹಿನ್ನೆಲೆ, ತನ್ನ ಹುಟ್ಟೂರಾದ ಮಧ್ಯಪ್ರದೇಶದ ಮೊರೆನಾಗೆ ಕಾಲ್ನಡಿಗೆಯಲ್ಲಿ ತೆರಳುವಾಗ ಮಾರ್ಗಮಧ್ಯೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.ಮೃತ ವ್ಯಕ್ತಿಯನ್ನು ರಣವೀರ್ ಸಿಂಗ್ ಎಂದು ಗುರುತಿಸಲಾಗಿದೆ. ದೆಹಲಿಯಿಂದ ಸುಮಾರು 200 ಕಿ.ಮೀ.ದೂರ ಕಾಲ್ನಡಿಗೆಯಲ್ಲೇ ಕ್ರಮಿಸಿದ್ದಾನೆ. ಆದರೆ ದೆಹಲಿ-ಆಗ್ರಾ ಹೆದ್ದಾರಿಯಲ್ಲಿ ಸುಸ್ತಾಗಿ ಕುಸಿದು ಬಿದ್ದು, ಅಸುನೀಗಿದ್ದಾನೆ.

ಕೇಂದ್ರ ಸರ್ಕಾರವು ದೇಶದಲ್ಲಿ ಏಪ್ರಿಲ್​ 24ರವರೆಗೆ ಲಾಕ್​ಡೌನ್ ಘೋಷಿಸಿದೆ. ಹೀಗಾಗಿ ರೈಲು, ಬಸ್, ವಿಮಾನ ಸಂಚಾರ ಸಾರಿಗೆ ಸೇವೆ, ಹೋಟೆಲ್, ರೆಸ್ಟೋರೆಂಟ್ ಸೇರಿ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು 21 ದಿನಗಳ ಕಾಲ ಬಂದ್ ಮಾಡಲಾಗಿದೆ. ರಣವೀರ್​ ಸಿಂಗ್​ ರಾಷ್ಟ್ರ ರಾಜಧಾನಿ ದೆಹಲಿಯ ರೆಸ್ಟೋರೆಂಟ್​ನಲ್ಲಿ ಡಿಲಿವರಿ ಬಾಯ್​ ಆಗಿ ಕೆಲಸ ಮಾಡಿಕೊಂಡಿದ್ದ. ಲಾಕ್ ಡೌನ್ ಬಳಿಕ ತನ್ನ ಮನೆಗೆ ಹಿಂದಿರುಗಲು ಮುಂದಾಗಿದ್ದ. ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿರುವ ಒಂದು ಪುಟ್ಟ ಗ್ರಾಮದಲ್ಲಿ ಆತನ ಕುಟುಂಬ ವಾಸವಿದೆ. ತನ್ನ ಕುಟುಂಬ ಸೇರಿಕೊಳ್ಳಲು ದೆಹಲಿಯಿಂದ ಕಾಲ್ನಡಿಗೆಯಲ್ಲಿ ಬರುತ್ತಿದ್ದವನಿಗೆ ಮಾರ್ಗಮಧ್ಯೆ ಎದೆನೋವು ಕಾಣಿಸಿಕೊಂಡಿದೆ. ನಿತ್ರಾಣದಿಂದ ಕೆಳಗೆ ಕುಸಿದು ಸಾವನ್ನಪ್ಪಿದ್ದಾನೆ. ಆತ ಸುಮಾರು 200 ಕಿ.ಮೀ.ದೂರ ನಡೆದಿದ್ದ ಎಂದು ತಿಳಿದು ಬಂದಿದೆ.

ಮೃತ ವ್ಯಕ್ತಿ ಶುಕ್ರವಾರ ಬೆಳಗ್ಗೆ ತನ್ನ ಊರಿಗೆ ತೆರಳಲು ಕಾಲ್ನಡಿಗೆ ಆರಂಭಿಸಿದ್ದ. ಮಾರ್ಗಮಧ್ಯೆ ಈ ದುರಂತ ನಡೆದಿದೆ. ರಾಷ್ಟ್ರೀಯ ಹೆದ್ದಾರಿ-2ರಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಆಹಾರ ಪೊಟ್ಟಣಗಳು ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ.ಆದರೆ ರಣವೀರ್ ಸಾವು ದುರಾದೃಷ್ಟಕರ ಎಂದು ಅರವಿಂದ್ ವಿಷಾದ ವ್ಯಕ್ತಪಡಿಸಿದ್ದಾರೆ.

error: Content is protected !! Not allowed copy content from janadhvani.com