janadhvani

Kannada Online News Paper

ಎಸ್ಸೆಸ್ಸೆಲ್ಸಿ ಪಬ್ಲಿಕ್‌ ಪರೀಕ್ಷೆ ರದ್ದು.?- ಶಿಕ್ಷಣ ಸಚಿವರ ಸ್ಪಷ್ಟೀಕರಣ

ಬೆಂಗಳೂರು: ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ‘ಈ ಸಲದ ಎಸ್ಸೆಸ್ಸೆಲ್ಸಿ ಪಬ್ಲಿಕ್‌ ಪರೀಕ್ಷೆ ರದ್ದಾಗಲಿದೆ”ಎಂಬ ಸಂದೇಶಗಳ ಕುರಿತು ಸ್ಪಷ್ಟನೆ ನೀಡಿರುವ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌, ‘ಇದೆಲ್ಲವೂ ಅಪ್ಪಟ ಸುಳ್ಳು ಸುದ್ದಿ’ ಎಂದು ಹೇಳಿದ್ದಾರೆ.

ಈ ಕುರಿತು ಕೆಲ ನಿಮಿಷಗಳ ಹಿಂದ ಟ್ವೀಟ್‌ ಮಾಡಿರುವ ಸುರೇಶ್‌ ಕುಮಾರ್‌, ‘ ಕೆಲ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದಾಗಿದೆ ಎಂಬ ಒಂದು ಅಪ್ಪಟ ಸುಳ್ಳು ಸುದ್ದಿ ಹರಿದಾಡುತ್ತಿದೆ. ಪರೀಕ್ಷೆ ರದ್ದು ಮಾಡುವ ಯಾವುದೇ ನಿರ್ಧಾರ ಕೈಗೊಂಡಿಲ್ಲ,’ ಎಂದು ಅವರು ಹೇಳಿದ್ದಾರೆ. ಪರೀಕ್ಷೆಗಳ ಕುರಿತು ಚರ್ಚಿಸಲು ಯಾವುದೇ ಸಭೆಯೂ ಆಗಿಲ್ಲ ಎಂದೂ ಅವರು ತಿಳಿಸಿದ್ದಾರೆ. ಇದರೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು ಎಂಬ ಊಹಾಪೋಹಗಳಿಗೆ ಅವರು ಅವರು ತೆರೆ ಎಳೆದಿದ್ದಾರೆ.

ಇದೇ 27ರಿಂದ ಆರಂಭವಾಗಬೇಕಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಮುಂದೂಡಲು ರಾಜ್ಯ ಸರ್ಕಾರ ಮಾರ್ಚ್‌ 22ರಂದು ನಿರ್ಧರಿಸಿತ್ತು. ಈ ವೇಳೆ ಮಾತನಾಡಿದ್ದ ಸುರೇಶ್‌ ಕುಮಾರ್‌, ‘ಎಸ್ಸೆಸ್ಸೆಲ್ಸಿ ಪರೀಕ್ಷೆ ಬೇಗ ಮುಗಿಯಬೇಕೆಂಬ ಆಸೆ ಮಕ್ಕಳಲ್ಲಿದೆ. ಇದೇ ಕಾರಣಕ್ಕೆ ಎಲ್ಲ ಸುರಕ್ಷಿತ ವ್ಯವಸ್ಥೆಗಳನ್ನು ಚರ್ಚಿಸಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಆರೋಗ್ಯ ಇಲಾಖೆಯೂ ಸೇರಿದಂತೆ ಹಲವರ ಅಭಿಪ್ರಾಯದಂತೆ ಪರೀಕ್ಷೆ ಮುಂದೂಡಲಾಗಿದೆ,’ ಎಂದಿದ್ದರು.

‘ಪರೀಕ್ಷೆ ಬರೆದು ಸುಖವಾಗಿರಬೇಕು ಎಂಬುದು ವಿದ್ಯಾರ್ಥಿಗಳ ಆಸೆ. ಅವರ ಆರೋಗ್ಯವನ್ನು ಕಾಪಾಡಬೇಕೆಂಬ ಹಿತ ಸರ್ಕಾರದ್ದು. ಸುಖ, ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಪರೀಕ್ಷೆಯನ್ನು ಬೇರೆ ದಿನಾಂಕದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಹೊಸ ವೇಳಾಪಟ್ಟಿಯನ್ನು ಸದ್ಯದಲ್ಲೇ ಪ್ರಕಟಿಸುತ್ತೇವೆ. ವಿದ್ಯಾರ್ಥಿಗಳು ಮತ್ತಷ್ಟು ಅಧ್ಯಯನ ಮಾಡಬೇಕು. ಯಾರೂ ಹತಾಶರಾಗಬಾರದು. ಈ ವಿಶೇಷ ವಿಸ್ತರಿತ ರಜೆಯಲ್ಲಿ ವಿದ್ಯಾರ್ಥಿಗಳು ಅಧ್ಯಯನ ಕೈಗೊಳ್ಳಬೇಕು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನಾನು ಶುಭ ಕೋರುತ್ತೇನೆ,’ ಎಂದು ಸುರೇಶ್‌ ಕುಮಾರ್ ಆಶಿಸಿದ್ದರು.

error: Content is protected !! Not allowed copy content from janadhvani.com