janadhvani

Kannada Online News Paper

ಗಲ್ಫ್ ರಾಷ್ಟ್ರಗಳ ನಾಯಕರು ಭಿನ್ನತೆಗಳನ್ನು ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು- ಖತರ್‌ ಮಾಜಿ ಪ್ರಧಾನಿ

ದೋಹಾ: ಕೋವಿಡ್ ರೋಗವು ಅನಿಯಂತ್ರಿತವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳ ನಾಯಕರು ಎಲ್ಲ ಭಿನ್ನತೆಗಳನ್ನು ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಖತರ್‌ನ ಮಾಜಿ ಪ್ರಧಾನ ಮಂತ್ರಿ ಶೈಖ್ ಹಮದ್ ಬಿನ್ ಜಾಸಿಮ್ ಬಿನ್ ಜಾಬರ್ ಅಲ್ತಾನಿ ಕರೆ ನೀಡಿದ್ದಾರೆ.

ಜಿಸಿಸಿ ನಾಯಕರು ಒಟ್ಟಾಗಿ ಕೆಲಸ ಮಾಡಬೇಕು, ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ರೋಗದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆಗಳು ನಡೆಯಬೇಕು ಎಂದರು.

ಈ ವಿಷಯವನ್ನು ಅವರು ಟ್ವಿಟರ್‌ನಲ್ಲಿ ಪ್ರಕಟಿಸಿದ್ದು, ರೋಗವನ್ನು ಯಾವಾಗ ಮತ್ತು ಹೇಗೆ ನಿಯಂತ್ರಿಸಬೇಕೆಂದು ನಮಗೆ ಖಚಿತವಿಲ್ಲ. ಆದರೆ, ಕೋವಿಡ್ ಸೋಂಕು ರಾಜಕೀಯ, ಜಾಗತಿಕ ಆರೋಗ್ಯ ಮತ್ತು ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂಬುದು ಖಚಿತ ಎಂದರು.

ವಿಶ್ವದ ಇತಿಹಾಸಕಾರರು ಕೋವಿಡ್ -19 ರ ಮೊದಲು ಮತ್ತು ನಂತರ ಎಂಬುದಾಗಿ ಮುಂದೆ ಮೌಲ್ಯಮಾಪನ ಮಾಡಲಿದ್ದಾರೆ.

ಆದರೆ, ನನ್ನ ಬೇಡಿಕೆಯನ್ನು ಖತರ್ ವಿರುದ್ಧದ ನಿರ್ಬಂಧಗಳನ್ನು ತೆಗೆದುಹಾಕುವ ತಂತ್ರವೆಂದು ಪರಿಗಣಿಸಬೇಕಾಗಿಲ್ಲ. ಕೊಲ್ಲಿ ದೇಶಗಳ ಉತ್ತಮ ಭವಿಷ್ಯಕ್ಕಾಗಿ ನಾನು ಮಾತನಾಡುತ್ತಿದ್ದೇನೆ ಎಂದು ಶೈಖ್ ಹಮದ್ ಬಿನ್ ಜಾಸಿಮ್ ಬಿನ್ ಜಾಬರ್ ಅಲ್ತಾನಿ ಹೇಳಿದರು.

error: Content is protected !! Not allowed copy content from janadhvani.com