janadhvani

Kannada Online News Paper

ಮುಖ್ಯಮಂತ್ರಿ ಕಮಲನಾಥ್ ರಾಜೀನಾಮೆ-ಮಧ್ಯಪ್ರದೇಶ ಕಾಂಗ್ರೆಸ್ ಸರಕಾರ ಪತನ

ಭೋಪಾಲ್, ಮಾ.20: ಮಧ್ಯಪ್ರದೇಶ ರಾಜಕೀಯ ಕಳೆದ ಕೆಲ ದಿನಗಳಿಂದ ಹಲವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಸಂಜೆ ಐದು ಗಂಟೆಯೊಳಗೆ ಕಮಲ್​ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹುಮತ ಸಾಬೀತು ಪಡೆಸುವಂತೆ ಸುಪ್ರೀಂಕೋರ್ಟ್ ಗಡುವು ನಿಗದಿ ಮಾಡಿದೆ. ಆದರೆ ಇದಕ್ಕೂ ಮೊದಲೇ ಕಮಲ್​ನಾಥ್​ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ 15 ತಿಂಗಳ ಕಾಂಗ್ರೆಸ್ ಸರ್ಕಾರ ಪತನಗೊಂಡಿದೆ.22 ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದಾಗಿ ಬಹುಮತದ ಕೊರತೆ ಎದುರಿಸುತ್ತಿದ್ದ ಮುಖ್ಯಮಂತ್ರಿ ಕಮಲನಾಥ್ ಬಹುಮತ ಸಾಬೀತಿಗೆ ಮೊದಲೇ ರಾಜೀನಾಮೆ ಸಲ್ಲಿಸಿದ್ದಾರೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಮಲ್​ ನಾಥ್​, “ನನಗೆ ಮಧ್ಯಪ್ರದೇಶದ ಜನತೆ 5 ವರ್ಷ ಆಡಳಿತ ನಡೆಸಲು ಅವಕಾಶ ನೀಡಿತ್ತು. ಕಳೆದ 15 ತಿಂಗಳಲ್ಲಿ ನಾನೇನು ತಪ್ಪು ಮಾಡಿದ್ದೇನೆ ಎಂದು ನಿಮ್ಮಲ್ಲಿ ಕೇಳಬೇಕಿದೆ. ನನಗೆ ಬಿಜೆಪಿ ನಿರಂತರವಾಗಿ ಕಿರುಕುಳ ನೀಡಿದೆ. ಬಿಜೆಪಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದೆ,” ನಾವು ಒಂದೂವರೆ ವರ್ಷ ಹಿಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ 15 ವರ್ಷಗಳ ಕಾಲ ರಾಜ್ಯವನ್ನು ಆಳಿದ್ದ ಬಿಜೆಪಿ ನಮ್ಮ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿತ್ತು.

ನಮ್ಮ ಪಕ್ಷದ 22 ಶಾಸಕರನ್ನು ಬೆಂಗಳೂರಿನ ಹೊಟೇಲ್‌ನಲ್ಲಿ ಒತ್ತೆ ಸೆರೆಯಲ್ಲಿ ಇಡಲಾಗಿತ್ತು. ನಾವು ರಾಜ್ಯದಲ್ಲಿ ಮಾಫಿಯಾಗಳ ವಿರುದ್ಧ ಹೋರಾಟ ನಡೆಸಿದ್ದೆವು. ಕಠಿಣ ಕ್ರಮ ಕೈಗೊಂಡಿದ್ದೆವು. ಇದು ಬಿಜೆಪಿಗೆ ಇಷ್ಟವಾಗಲಿಲ್ಲ. ಬಿಜೆಪಿಗೆ ನಮ್ಮ ಸಾಧನೆಯನ್ನು ಅಡಗಿಸಿಡಲು ಸಾಧ್ಯವಿಲ್ಲ. ನಾವು ಕಳೆದ 15 ತಿಂಗಳುಗಳ ಕಾಲ ರಾಜ್ಯದ ಅಭಿವೃದ್ಧಿಗಾಗಿ ಕಠಿಣವಾಗಿ ಶ್ರಮಿಸಿದ್ದೆವು. ನಮ್ಮ ಸರಕಾರ ಸುಳ್ಳು ಭರವಸೆ ನೀಡಿರಲಿಲ್ಲ. ಆದರೆ, ಮಧ್ಯಪ್ರದೇಶದ ಜನತೆಗೆ ಬಿಜೆಪಿ ದ್ರೋಹ ಎಸಗಿದೆ. ಕಾಂಗ್ರೆಸ್ ಸರಕಾರದಲ್ಲಿ ಮಧ್ಯಪ್ರದೇಶ ಅಭಿವೃದ್ಧ್ದಿಯಾಗುತ್ತಿರುವುದನ್ನು ಸಹಿಸಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಬಿಜೆಪಿ ಪ್ರಜಾಪ್ರಭುತ್ವವನ್ನು ಕಗ್ಗೊಲೆಗೈದಿದೆ ಎಂದು ಕಮಲನಾಥ ಆರೋಪಿಸಿದರು.

230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಪ್ರಸ್ತುತ 228 ಶಾಸಕರಿದ್ದಾರೆ. ಬಹುಮತಕ್ಕೆ 115 ಸ್ಥಾನಗಳ ಅವಶ್ಯಕತೆ ಇದೆ. ಬಿಎಸ್​ಪಿಯ ಇಬ್ಬರು ಶಾಸಕರು, ಸಮಾಜವಾದಿ ಪಕ್ಷದ ಓರ್ವ ಶಾಸಕ ಹಾಗೂ ನಾಲ್ವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ 121 ಸದಸ್ಯರ ಬಲದೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆ ಮಾಡಿತ್ತು. ಆದರೆ, ಇದೀಗ ಪಕ್ಷೇತರರು ಸೇರಿದಂತೆ ಕಾಂಗ್ರೆಸ್​ನ 22 ಶಾಸಕರು ರಾಜೀನಾಮೆ ನೀಡಿದ್ದರು. ಹಾಲಿ ಕಾಂಗ್ರೆಸ್​ನಲ್ಲಿ ಕೇವಲ 92 ಶಾಸಕರಿದ್ದಾರೆ. ವಿಶ್ವಾಸಮತ ಸಾಬೀತು ಮಾಡಲು ಸಾಧ್ಯವಿಲ್ಲ ಎನ್ನವ ಕಾರಣಕ್ಕೆ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ಇದೇ ವೇಳೆ, ಮಾಜಿ ಸಿಎಂ ಹಾಗೂ ಬಿಜೆಪಿ ನಾಯಕ ಶಿವರಾಜ್ ಸಿಂಗ್ ಚೌಹಾಣ್ ಅವರು ಸಿಎಂ ಗದ್ದುಗೆ ಏರುವ ಸಾಧ್ಯತೆ ಇದೆ ಎನ್ನುತ್ತಿವೆ ಮೂಲಗಳು.

error: Content is protected !! Not allowed copy content from janadhvani.com