janadhvani

Kannada Online News Paper

ಸಾಮಾಜಿಕವಾಗಿ ಅಂತರವನ್ನು ಕಾಯ್ದುಕೊಳ್ಳಿ, ಮಾ. 22 ರಂದು ಪ್ರತಿಯೊಬ್ಬರು “ಜನತಾ ಕರ್ಫ್ಯೂ” ಪಾಲಿಸಿ- ಪ್ರಧಾನಿ

ಮನೆಯಲ್ಲಿ ಇರಬೇಕು ಎಂಬ ಸಲಹೆಯನ್ನು ನಿರ್ಲಕ್ಷಿಸುವವರಿಗೆ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ, “ನೀವು ಸರಿಯಾಗಿದ್ದೀರಿ ಮತ್ತು ನಿಮಗೆ ಏನೂ ಆಗುವುದಿಲ್ಲ ಎಂದು ನೀವು ಭಾವಿಸಿದ್ದರೆ ಅದು ನಿಮ್ಮ ತಪ್ಪು,” ಎಂದು ಹೇಳಿದರು.

ನವದೆಹಲಿ: ಜಗತ್ತು ಮೊದಲನೇ ಮಹಾಯುದ್ಧ ಕಂಡಿದೆ, ಎರಡನೇ ಮಹಾಯುದ್ಧ ಕಂಡಿದೆ. ಈ ವೇಳೆಯೂ ಜನರು ಹೆದರಿಲ್ಲ. ಇದೀಗ ಮೂರನೇ ಮಹಾಯುದ್ಧ ಎದುರಿಸುತ್ತಿದೆ. ಕೊರೋನಾ ವೈರಸ್ ಜಗತ್ತಿಗೆ ಮಾರಕವಾಗಿ ಕಾಡಲಾರಂಭಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಕೊರೋನಾ ವೈರಸ್ ವಿಚಾರವಾಗಿ ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೊರೋನಾ ವೈರಸ್ ಬಗ್ಗೆ ಜನರು ಎರಡು ತಿಂಗಳಿಂದ ಮಾತನಾಡುತ್ತಿದ್ದಾರೆ. ದೇಶದ ಜನರು ಕೊರೋನಾ ವೈರಸ್ ಬಗ್ಗೆ ಆತಂಕಕ್ಕೆ ಈಡಾಗಿದ್ದಾರೆ. ಇಡೀ ಮಾನವ ಸಮೂಹ ಸಂಕಟಕ್ಕೆ ಸಿಲುಕಿದೆ. ಈ ಮಾರಕ ಮಹಾಮಾರಿಗೆ ಯಾವುದೇ ಔಷಧವನ್ನು ಕಂಡು ಹಿಡಿಯಲಾಗಿಲ್ಲ. ಕೊರೋನಾ ವೈರಸ್ನಿಂದ ದೇಶದ ಜನರು ನಿಶ್ಚಿಂತೆಯಿಂದ ಇರಲು ಸಾಧ್ಯವಾಗುತ್ತಿಲ್ಲ. ಆದರೂ ಈ ವೈರಸ್ ಬಗ್ಗೆ ಜನರು ಹೆದರುವ, ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಪ್ರತಿ ಬಾರಿ ನಾನು ನಿಮ್ಮಲ್ಲಿ ಏನನ್ನಾದರೂ ಕೇಳಿದಾಗ ನೀವು ಅದನ್ನು ನನಗೆ ನೀಡಿ ಆಶೀರ್ವದಿಸಿದ್ದೀರಾ. ಇದೀಗ ನಾನು ನಿಮ್ಮಲ್ಲಿ ವಿನಮ್ರವಾಗಿ ಕೇಳಿಕೊಳ್ಳುತ್ತಿದ್ದೇನೆ. ನಿಮ್ಮ ಮುಂದಿನ ಕೆಲವು ದಿನಗಳು ನನಗೆ ಬೇಕಾಗಿದೆ. ಕೊರೋನಾ ವೈರಸ್ಅನ್ನು ನಾವೆಲ್ಲರೂ ಎಚ್ಚರಿಕೆ ಜಾಗರುಕತೆಯಿಂದ ಹೆದರಿಸಬೇಕಿದೆ.ಹೀಗಾಗಿ ದಯವಿಟ್ಟು ಎಲ್ಲರೂ ಪ್ರತ್ಯೇಕವಾಗಿ ಇರೋಣ. ಗುಂಪು ಸೇರುವುದು ಬೇಡ, ಸಾಮಾಜಿಕವಾಗಿ ಸ್ವಲ್ಪ ದಿನ ಅಂತರವನ್ನು ಕಾಯ್ದುಕೊಳ್ಳೋಣ. ನಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ಆರೋಗ್ಯವಾಗಿರಲು ನಮಗೆ ಸಂಯಮ ಕಡ್ಡಾಯವಾಗಿದೆ. ಕೆಲ ವಾರಗಳವರೆಗೆ ಜನರು ಅಗತ್ಯವಿದ್ದರೆ ಮಾತ್ರ ತಮ್ಮ ಮನೆಗಳಿಂದ ಹೊರಗೆ ಹೋಗಬೇಕು ಎಂದು ನಾನು ವಿನಂತಿಸುತ್ತೇನೆ ಎಂದು ಮನವಿ ಮಾಡಿದರು.

ಮನೆಯಲ್ಲಿ ಇರಬೇಕು ಎಂಬ ಸಲಹೆಯನ್ನು ನಿರ್ಲಕ್ಷಿಸುವವರಿಗೆ ಪ್ರಧಾನಿ ಮೋದಿ ಇದೇ ವೇಳೆ ಎಚ್ಚರಿಕೆಯನ್ನೂ ನೀಡಿದ್ದಾರೆ. “ನೀವು ಸರಿಯಾಗಿದ್ದೀರಿ ಮತ್ತು ನಿಮಗೆ ಏನೂ ಆಗುವುದಿಲ್ಲ ಎಂದು ನೀವು ಭಾವಿಸಿದ್ದರೆ ಅದು ನಿಮ್ಮ ತಪ್ಪು,” ಎಂದು ಹೇಳಿದರು.

ಇಂತಹ ಸಂಕಷ್ಟಕರ ಸಮಯದಲ್ಲಿ ಜನರು ತಮ್ಮಷ್ಟಕ್ಕೆ ತಾವೇ ಕರ್ಫ್ಯೂ ವಿಧಿಸಿಕೊಳ್ಳಬೇಕು. ಈ ಮೂಲಕ ಮಾರಕ ಸೋಂಕು ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಹೇಳುವ ಮೂಲಕ ಜನತಾ ಕರ್ಫ್ಯೂಗೆ ಕರೆ ನೀಡಿದರು. ಇದೇ ಮಾರ್ಚ್ 22ರ ಭಾನುವಾರದಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ದೇಶದ ಪ್ರತಿಯೊಬ್ಬರು ಜನತಾ ಕರ್ಫ್ಯೂ ಪಾಲಿಸಬೇಕು. ಈ ಸಮಯದಲ್ಲಿ ಯಾರೊಬ್ಬರೂ ಕೂಡ ತಮ್ಮ ಮನೆಯಿಂದ ಹೊರಗೆ ಬರಬಾರದು ಎಂದು ಪ್ರಧಾನಿ ಹೇಳಿದರು.

ಆಸ್ಪತ್ರೆಗಳಿಗೆ ರೋಟಿನ್ ಚೆಕ್ಅಪ್ಗೆ ತೆರಳುವ ರೋಗಿಗಳಿಗೂ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ. ಆಸ್ಪತ್ರೆಗೆ ರೊಟಿನ್ ಚೆಕಪ್ಗೆ ಹೋಗುವುದನ್ನು ನಿಲ್ಲಿಸಿ, ಒಂದು ವೇಳೆ ನಿಮಗೆ ಅತ್ಯಗತ್ಯವಲ್ಲದ ಶಸ್ತ್ರಚಿಕಿತ್ಸೆಗೆ ದಿನಾಂಕ ನಿಗದಿಯಾಗಿದ್ದರೆ ಅದನ್ನು ಒಂದು ತಿಂಗಳುಗಳ ಕಾಲ ಮುಂದೂಡಿ. ಆಸ್ಪತ್ರೆಗಳ ಮೇಲೆ ನಾವು ಒತ್ತಡ ಹಾಕಬಾರದು ಎಂಬುದು ನಮ್ಮ ತಲೆಯಲ್ಲಿ ಇರಲಿ ಎಂದು ಪ್ರಧಾನಿ ಮೋದಿ ಮನವಿ ಮಾಡಿಕೊಂಡರು.

ಅಗತ್ಯ ಸರಕು ಮತ್ತು ಸಾಮಾನುಗಳ ಕೊರತೆ ಎದುರಾಗುತ್ತದೆ ಎಂಬ ಭಯದಿಂದ ಎಲ್ಲರೂ ಅಗತ್ಯ ವಸ್ತು ಖರೀದಿಸಲು ಮಳಿಗೆಗೆ ಹೋಗಬೇಕಾಗಿಲ್ಲ. ಅಗತ್ಯ ವಸ್ತುಗಳ ಅಭಾವ ಉಂಟಾಗದಂತೆ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ದೇಶದ ನಾಗರಿಕರು ಕೇಂದ್ರ, ರಾಜ್ಯ ಸರಕಾರಗಳ ಸೂಚನೆಗಳು ಪಾಲಿಸಬೇಕು ಈ ಮೂಲಕ ಸೋಂಕುಪೀಡಿತರಾಗುವುದರಿಂದ ನಾವು ಪಾರಾಗಬೇಕು. “ಜನರಿಂದ ಜನರಿಗಾಗಿ ಜನರೇ ಹೇರುವ ಕರ್ಫ್ಯೂ ‘ಜನತಾ ಕರ್ಫ್ಯೂ’. ಮಾರ್ಚ್ 22ರಂದು ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಜನರು ಈ ಕರ್ಫ್ಯೂ ವಿಧಿಸಿಕೊಳ್ಳಬೇಕು.

error: Content is protected !! Not allowed copy content from janadhvani.com