janadhvani

Kannada Online News Paper

ರಾಜ್ಯದಲ್ಲಿ ಕೊರೋನಾ ಹರಡುವಿಕೆಯನ್ನು ತಡೆಯಲು ಬಂದ್ ಮುಂದುವರೆಸಲು ಚಿಂತನೆ

ಬೆಂಗಳೂರು ,ಮಾ.18: ಕೊರೋನಾ ಹರಡುವಿಕೆ ತಹಬಂದಿಗೆ ಬರದ ಕಾರಣ ಬಂದ್ ಕಾಲಾವಧಿಯನ್ನು ಮತ್ತೂ ಒಂದು ವಾರ ಮುಂದುವರೆಸಲು ಸಿಎಂ ಬಿಎಸ್​ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ. ಮಾರಣಾಂತಿಕ ಕೊರೋನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಮಾಲ್ ಥಿಯೇಟರ್ ಸೇರಿದಂತೆ ರಾಜ್ಯದಲ್ಲಿ ಬಹುತೇಕ ಸಾರ್ವಜನಿಕ ವಲಯವನ್ನು ಈ ಹಿಂದೆಯೇ ಒಂದು ವಾರಗಳ ಕಾಲ ಬಂದ್ ಮಾಡಿ ಆದೇಶಿಸಲಾಗಿತ್ತು.

ಚೀನಾದಲ್ಲಿ 3,600 ಜನರನ್ನು ಹಾಗೂ ವಿಶ್ವದಾದ್ಯಂತ 7000ಕ್ಕೂ ಅಧಿಕ ಜನರನ್ನು ಬಲಿ ಪಡೆದ ಕೊರೋನಾ ವೈರಸ್ ಭಾರತಕ್ಕೂ ಹರಡಿದ ತಕ್ಷಣ ರಾಜ್ಯದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಹಲವು ಕಾರ್ಯಕ್ರಮ ರೂಪಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಒಂದು ವಾರ ಬಂದ್ ಘೋಷಿಸಲಾಗಿತ್ತು. ಆದರೂ ಕೊರೋನಾ ರಾಜ್ಯದಲ್ಲಿ ಒಂದು ಬಲಿ ಪಡೆದಿದೆ. ಅಲ್ಲದೆ 130ಕ್ಕೂ ಅಧಿಕ ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.

ಹೀಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಬಂದ್ ಅವಧಿಯನ್ನು ಮತ್ತೂ ಒಂದು ವಾರಕ್ಕೆ ಮುಂದುವರೆಸುವ ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಚರ್ಚೆ ನಡೆಸಲು ತುರ್ತು ಸಂಪುಟ ಸಭೆ ಕರೆದಿದೆ. ಈ ಸಭೆಯಲ್ಲಿ ಎಲ್ಲಾ ಸಚಿವರು ಬಂದ್ ಅವಧಿಯನ್ನು ಮುಂದುವರೆಸಲು ಒಪ್ಪಿಗೆ ಸೂಚಿಸಿದರೆ ಬಂದ್​ ಮುಂದುವರಿಸಲಾಗುತ್ತದೆ. ಒಂದೊಮ್ಮೆ ಒಪ್ಪಿಗೆ ಸಿಕ್ಕರೆ ಮುಂದಿನ ಒಂದು ವಾರದ ಕಾಲ ಶಾಲಾ-ಕಾಲೇಜು ಮಾಲ್ ಥಿಯೇಟರ್ ಸೇರಿದಂತೆ ಬಹುತೇಕ ಸಾರ್ವಜನಿಕ ವಲಯ ಬಂದ್ ಆಗಲಿದೆ.

ಅಲ್ಲದೆ, ಜನರ ಎದುರು ಮನವಿ ಮಾಡಿರುವ ಸಚಿವ ಶ್ರೀರಾಮುಲು, “ರಾಜ್ಯದ ಜನತೆ ಭಯ ಬೀಳುವ ಅಗತ್ಯ ಇಲ್ಲ. ಈಗಾಗಲೇ ಒಂದಿಷ್ಟು ಪಾಸಿಟಿವ್ ಇದ್ದವರು ಕೂಡ ಗುಣಮುಖರಾಗಿದ್ದಾರೆ. ಬಂದ್ ಇರುವ ಕಾರಣ ಜನಸಂದಣಿ ಇರೋ ಕಡೆ ಸೇರಬೇಡಿ. ಗುಂಪುಗಳಿಂದ ಅಂತರ ಕಾಯ್ದುಕೊಳ್ಳಿ. ಶುಚಿತ್ವ ಕಾಪಾಡಿಕೊಳ್ಳುವ ಮೂಲಕ ಈ ಖಾಯಿಲೆಯಿಂದ ದೂರ ಇರಿ” ಎಂದು ಕಿವಿಮಾತು ಹೇಳಿದ್ದಾರೆ.

error: Content is protected !! Not allowed copy content from janadhvani.com