janadhvani

Kannada Online News Paper

ಮಧ್ಯಪ್ರದೇಶ: ಅವಿಶ್ವಾಸ ನಿರ್ಣಯ ಮಂಡನೆಗೆ ಬ್ರೇಕ್- ಸುಪ್ರೀಂ ಮೆಟ್ಟಲೇರಿದ ಬಿಜೆಪಿ

ಮಧ್ಯಪ್ರದೇಶ: ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಯತ್ನಕ್ಕೆ ಬ್ರೇಕ್ ಬಿದ್ದ ಕಾರಣ ಬಿಜೆಪಿ ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದು, ಅತಿಶೀಘ್ರದಲ್ಲಿಯೇ ಅವಿಶ್ವಾಸ ನಿರ್ಣಯ ಮಂಡಿಸುವ ಅವಕಾಶ ಪಡೆಯುವುದಾಗಿ ತಿಳಿಸಿದೆ.

ಕೊರೊನಾ ಸೋಂಕಿನ ಭೀತಿಯ ನಡುವೆಯೂ ಮಧ್ಯಪ್ರದೇಶ ರಾಜಭವನ ಸೋಮವಾರ ಅತ್ಯಂತ ಚಟುವಟಿಕೆಯ ಸ್ಥಳವಾಗಿತ್ತು. ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಬೇಕೆಂದಿದ್ದ ಬಿಜೆಪಿಯ ಪ್ರಯತ್ನವನ್ನು ರಾಜ್ಯಪಾಲರು ಹಾಗೂ ಸ್ಪೀಕರ್ ಜಂಟಿಯಾಗಿ ಅಧಿವೇಶನದಲ್ಲಿ ಪಾಲ್ಗೊಂಡು ವಿಧಾನಸಭೆಯ ಕಲಾಪಗಳನ್ನು ಮಾರ್ಚ್ 26ಕ್ಕೆ ಮುಂದೂಡಿದರು.

ಇದರಿಂದಾಗಿ ಮಹತ್ವದ ರಾಜಕೀಯ ಬೆಳವಣಿಗೆ ನಡೆಯುತ್ತದೆ ಎಂದು ಭಾವಿಸಿದ್ದ ಬಿಜೆಪಿಗೆ ನಿರಾಸೆಯಾಗಿದೆ. ಈ ಕಾರಣಕ್ಕಾಗಿ ಸೋಮವಾರವೇ ಶಾಸಕರ ಜೊತೆ ರಾಜಭವನಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಅಲ್ಲದೆ, ಮುಖ್ಯಮಂತ್ರಿ ಕಮಲ್‌ನಾಥ್ ವಿಶ್ವಾಸ ಮತ ಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್‌‌ನಲ್ಲಿ ಮನವಿ ಸಲ್ಲಿಸಲಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ.

ಈ ಮಧ್ಯೆ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ಮಧ್ಯಪ್ರದೇಶ ರಾಜ್ಯಪಾಲ ಲಾಲ್ ಜಿ ಟಂಡನ್ ಅವರನ್ನು ಭೇಟಿ ಮಾಡಿ ಪ್ರಸ್ತುತ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆ.

ಈ ಸಂಬಂಧ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರೊಂದಿಗೆ ನನಗೆ ಉತ್ತಮ ಬಾಂಧವ್ಯವಿದೆ. ಇದೊಂದು ಸೌಜನ್ಯದ ಭೇಟಿಯಾಗಿತ್ತು. ಅದನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ರಾಜಕೀಯ ಚರ್ಚೆ ಮಾಡಲಿಲ್ಲ ಎಂದು ತಿಳಿಸಿದ್ದಾರೆ.

error: Content is protected !! Not allowed copy content from janadhvani.com