janadhvani

Kannada Online News Paper

NPR ಗೆ ದಾಖಲೆ ಬೇಡ,’ಅನುಮಾನಾಸ್ಪದ’ ವ್ಯಕ್ತಿ ಎಂದು ಪರಿಗಣಿಸುವುದಿಲ್ಲ- ಅಮಿತ್ ಶಾ

ಹೊಸದಿಲ್ಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಪರಿಷ್ಕರಣೆ ಪ್ರಕ್ರಿಯೆ ವೇಳೆ ನಾಗರಿಕರಿಂದ ಯಾವುದೇ ದಾಖಲೆ ನೀಡುವಂತೆ ಒತ್ತಾಯಿಸುವುದಿಲ್ಲ. ಜತೆಗೆ ದಾಖಲೆ ಇಲ್ಲದವರನ್ನು ‘ಅನುಮಾನಾಸ್ಪದ’ ವ್ಯಕ್ತಿಗಳು ಎಂದು ಪರಿಗಣಿಸುವುದಿಲ್ಲಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭರವಸೆ ನೀಡಿದ್ದಾರೆ.

ಹೊಸದಿಲ್ಲಿ ಹಿಂಸಾಚಾರ ಕುರಿತ ಚರ್ಚೆಗೆ ಗುರುವಾರ ರಾಜ್ಯಸಭೆಯಲ್ಲಿ ಉತ್ತರ ನೀಡಿದ ಅವರು, ಮಾಹಿತಿ ಸಂಗ್ರಹಕಾರರು ಕೇಳುವ ಪ್ರಶ್ನೆಗಳಿಗೆ ಜನರು ಉತ್ತರಿಸಿದರೆ ಸಾಕು ಎಂದು ಸ್ಪಷ್ಟಪಡಿಸಿದರು.

”ಸಿಎಎ ಮತ್ತು ಎನ್‌ಪಿಆರ್‌ ಪ್ರಕ್ರಿಯೆ ಬಗ್ಗೆ ಈಗಲೂ ಪ್ರತಿಪಕ್ಷಗಳ ನಾಯಕರಿಗೆ ಅನುಮಾನಗಳಿದ್ದಲ್ಲಿ ಸ್ಪಷ್ಟನೆಗಾಗಿ ಅವರು ಸಮಯ ಕೇಳಿದಲ್ಲಿ ವಿವರಿಸಲು ಸಿದ್ಧನಿದ್ದೇನೆ. ನನಗೆ ಸಕಾರಾತ್ಮಕ ಚರ್ಚೆ ಬೇಕು. ಅನುಮಾನಗಳು ಹಾಗೆಯೇ ಉಳಿಯಬಾರದು,” ಎಂದು ಹೇಳಿದರು.

ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಅವರ ನೇತೃತ್ವದಲ್ಲಿ ಸದಸ್ಯರು ತಮ್ಮನ್ನು ಭೇಟಿಯಾದರೆ ಖಂಡಿತವಾಗಿ ಸಮಯ ಮಾಡಿಕೊಂಡು ಸಿಎಎ ಮತ್ತು ಎನ್‌ಪಿಆರ್‌ಗೆ ಬಗ್ಗೆ ವಿವರಿಸುವೆ ಎಂದು ಕೂಡ ಶಾ ಆಹ್ವಾನ ನೀಡಿದರು. ಇದೇ ವೇಳೆ, ”ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ)ಯಲ್ಲಿ ಈ ದೇಶದ ಮುಸ್ಲಿಮರ ಪೌರತ್ವ ಕಿತ್ತುಕೊಳ್ಳುವ ಒಂದೇ ಒಂದು ಉಲ್ಲೇಖವಿದ್ದರೆ ತಿಳಿಸಿ’ ಎಂದು ಸವಾಲು ಹಾಕಿದರು.

error: Content is protected !! Not allowed copy content from janadhvani.com