janadhvani

Kannada Online News Paper

ಕೆಪಿಸಿಸಿ ಅಧ್ಯಕ್ಷ ಪಟ್ಟ: ಸವಾಲಾಗಿ ಸ್ವೀಕರಿಸಿದ ಡಿ.ಕೆ.ಶಿವಕುಮಾರ್

ಬೆಂಗಳೂರು (ಮಾ.12): ರಾಜ್ಯ ಕಾಂಗ್ರೆಸ್​​ನಲ್ಲಿ ಯಾವುದೇ ಸಮಸ್ಯೆಯಿಲ್ಲ. ಪಕ್ಷದಲ್ಲಿ ಸಮಸ್ಯೆ ಇದೆ ಅಂದುಕೊಂಡರೆ ಇದೆ. ಸಮಸ್ಯೆ ಇಲ್ಲ ಅಂದುಕೊಂಡರೆ ಇಲ್ಲ. ನನಗೆ ಇದೆಲ್ಲವೂ ಕಷ್ಟವಲ್ಲ, ಸಮಸ್ಯೆಯೂ ಅಲ್ಲ. ಹೇಗೆ ಪಕ್ಷ ಕಟ್ಟುತ್ತೇವೆ ಎಂದು ನೀವೇ ನೋಡುತ್ತೀರಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ತಿಳಿಸಿದ್ದಾರೆ.

ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಪಕ್ಷ ತಮ್ಮ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿ ನೀಡಿದೆ. ಪಕ್ಷವನ್ನು ಕಟ್ಟುವ ಸಂಪೂರ್ಣ ಜವಾಬ್ದಾರಿ ತಮ್ಮ ಮೇಲಿದ್ದು, ಅದನ್ನು ಯಶಸ್ವಿಯಾಗಿ ನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ನಿನ್ನೆ ಈ ಕುರಿತು ಮಾತನಾಡಿದ ಅವರು, ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆಯಲ್ಲಿ ನಾನು ನಂಬಿಕೆ ಹೊಂದಿದ್ದೇನೆ. ಅಧಿಕಾರಕ್ಕಾಗಿ ಗುಂಪು ಕಟ್ಟುವವನು ನಾನಲ್ಲ. ಪಕ್ಷದ ಬಲವರ್ಧನೆಗೆ ಎಲ್ಲಾ ನಾಯಕರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ ಎಂದಿದ್ದರು.

ಕೆಪಿಸಿಸಿ ಅಧ್ಯಕ್ಷರಾದ ಹಿನ್ನೆಲೆ ಅವರಿಗೆ ಶುಭಕೋರಲು ನಾಯಕರು ಹಾಗೂ ಅಭಿಮಾನಿಗಳ ದಂಡು ಹರಿದು ಬರುತ್ತಿದೆ. ಈ ಕುರಿತು ಮಾತನಾಡಿದ ಅವರು ದಯವಿಟ್ಟು ಹೂವಿನ ಮಾಲೆ, ಬೊಕ್ಕೆ ತರಬೇಡಿ. ಅನಗತ್ಯವಾಗಿ ಕಾರ್ಯಕರ್ತರು ಹಣವನ್ನು ವ್ಯರ್ಥ ಮಾಡಬೇಡಿ. ಬೂತ್​ಮಟ್ಟದಿಂದ ನಾವು ಪಕ್ಷವನ್ನು ಕಟ್ಟಬೇಕಿದೆ. ನಿಮ್ಮ ಹಣವನ್ನು ಹೂಗಳಿಗೆ ವ್ಯರ್ಥ ಮಾಡಬೇಡಿ ಎಂದರು.

ಡಿಕೆ ಶಿವಕುಮಾರ್​ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಳೆದೊಂದು ದಶಕದಿಂದ ಕಣ್ಣಿಟ್ಟಿದ್ದರು. ಆದರೆ ಪಕ್ಷಕ್ಕೆ ಸಿದ್ದರಾಮಯ್ಯ ಆಗಮಿಸಿದ ನಂತರ, ಡಿಕೆಶಿ ಕನಸು ಕನಸಾಗಿಯೇ ಉಳಿದಿತ್ತು. ಪ್ರತಿ ಬಾರಿ ಕೆಪಿಸಿಸಿ ಅಧ್ಯಕ್ಷರು ಬದಲಾಗುವಾಗಲೂ ಡಿಕೆ ಶಿವಕುಮಾರ್​ ಹೆಸರು ಕೇಳಿ ಬರುತ್ತಿತ್ತು, ಆದರೆ ಅಂತಿಮ ಆದೇಶ ಬಂದಾಗ ಅವರ ಹೆಸರು ಇರುತ್ತಿರಲಿಲ್ಲ. ಹೈಕಮಾಂಡ್​ ಹಲವು ಬಾರಿ ಕಡೆಗಣಿಸಿದರೂ ಡಿಕೆಶಿ ಮಾತ್ರ ಪಕ್ಷ ನಿಷ್ಠೆಯನ್ನು ಬಿಡಲಿಲ್ಲ. ಅದರ ಪರಿಣಾಮ ಇಂದು ಸಿದ್ದರಾಮಯ್ಯ ಅವರ ಶಿಫಾರಸ್ಸನ್ನೂ ಬದಿಗಿಟ್ಟು ಹೈಕಮಾಂಡ್​ ಡಿಕೆಶಿಗೆ ಅಧ್ಯಕ್ಷ ಸ್ಥಾನ ನೀಡಿದೆ.

error: Content is protected !! Not allowed copy content from janadhvani.com