janadhvani

Kannada Online News Paper

ಕೋವಿಡ್ -19: ವದಂತಿಗಳನ್ನು ಹರಡಿದ್ದಲ್ಲಿ 30 ಲಕ್ಷ ದಿರ್ಹಮ್ ದಂಡ, 3 ವರ್ಷ ಜೈಲು

ದುಬೈ: ಕೋವಿಡ್ -19 ಹರಡಿರುವ ಹಿನ್ನೆಲೆಯಲ್ಲಿ ಯುಎಇಯಲ್ಲಿ ವದಂತಿಗಳನ್ನು ಹರಡುವವರನ್ನು ಕಠಿಣ ಶಿಕ್ಷೆ ಕಾಯುತ್ತಿದೆ. ಹಾಗೇನಾದರೂ ಒಂದುವೇಳೆ ಊಹಾಪೊಹಗಳನ್ನು ಹರಡಿದರೆ 30 ಲಕ್ಷ ದಿರ್ಹಮ್ ದಂಡ ಮತ್ತು ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಆಂತರಿಕ ಸಚಿವಾಲಯ ಎಚ್ಚರಿಕೆ ನೀಡಿದೆ.

ಶಿಕ್ಷೆಯನ್ನು ಆನ್‌ಲೈನ್ ಕಾನೂನಿನ ಅನುಸಾರವಾಗಿ ವಿಧಿಸಲಾಗುತ್ತದೆ. ಸೋಶಿಯಲ್ ಮೀಡಿಯಾ ಮೂಲಕ ಇಂತಹ ನಕಲಿ ಸಂದೇಶಗಳು ಹರಡುವ ಬಗ್ಗೆ ತಿಳಿದು ಬಂದ ಕಾರಣಕ್ಕಾಗಿ ಅಧಿಕಾರಿಗಳು ಈ ಎಚ್ಚರಿಕೆ ನೀಡಿದ್ದಾರೆ. ದೇಶದಲ್ಲಿ ಕೋವಿಡ್ -19 ಸೋಂಕಿಗೆ ಒಳಗಾದವರ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿ ವದಂತಿಗಳನ್ನು ಹರಡಬೇಡಿ. ಅದು ಸಮಾಜದಲ್ಲಿ ಭಯ ಮತ್ತು ಭೀತಿಯನ್ನು ದ್ವಿಗುಣಗೊಳಿಸುತ್ತದೆ.

ಅದೇ ವೇಳೆ, ರೋಗದ ವಿರುದ್ಧ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಕಳೆದ ದಿವಸ ಸರಕಾರಿ, ಆರೋಗ್ಯ, ವಿದ್ಯಾಭ್ಯಾಸ ಸ್ಥಾಪನೆಗಳಿಗೆ ಸಂಬಂಧಿಸಿದಂತೆ ಅನೇಕ ವದಂತಿಗಳನ್ನು ಹರಡಲಾಗಿತ್ತು. ಅಬುಧಾಬಿ ಝಾಯಿದ್ ವಿಶ್ವವಿದ್ಯಾನಿಲಯದಲ್ಲಿ ವೈರಸ್ ಹರಡಿರುವ ವದಂತಿಗಳು ಹರಡಿದ್ದು, ವಿದ್ಯಾರ್ಥಿಗಳಲ್ಲಿ ಭೀತಿ ಹುಟ್ಟಿಸಿದೆ.

ವೈರಸ್ ಸೋಂಕಿನ ಬಗ್ಗೆ ಆರೋಗ್ಯ ಅಧಿಕಾರಿಗಳು ಒದಗಿಸುವ ಮಾಹಿತಿಯನ್ನು ಮಾತ್ರ ಅನುಸರಿಸಬೇಕು. ಆರೋಗ್ಯ ಮತ್ತು ರಕ್ಷಣಾ ಸಚಿವಾಲಯ ಹೊರಡಿಸಿರುವ ಸಾರ್ವಜನಿಕ ಆರೋಗ್ಯ ಮಾರ್ಗಸೂಚಿಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಇಲಾಖೆ ವಿನಂತಿಸಿದೆ.

ದೃಢೀಕರಿಸದ ಮಾಹಿತಿಯನ್ನು ಪ್ರಸಾರ ಮಾಡಬೇಡಿ. ಇದನ್ನು ಮಾಧ್ಯಮಗಳು ಸೇರಿದಂತೆ ಕಟ್ಟುನಿಟ್ಟಾಗಿ ಪಾಲಿಸಬೇಕು. ನಕಲಿ ಸುದ್ದಿ ಅಥವಾ ಹಾನಿಕಾರಕ ಮಾಹಿತಿಯನ್ನು ಹರಡಿದರೆ ಅವರು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

error: Content is protected !! Not allowed copy content from janadhvani.com