janadhvani

Kannada Online News Paper

ವೈರಸ್: ​ಊಹಾಪೋಹಗಳನ್ನು ಹರಡಬೇಡಿ, ಸಲಹೆಗಳನ್ನು ಪಾಲಿಸಿ- ಸಿಎಂ

ಬೆಂಗಳೂರು,ಮಾ.10: ಕೊರೋನಾ ವೈರಸ್​ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೇಶದಲ್ಲಿ ಈಗಾಗಲೇ 44 ಜನರು ಈ ಸೋಂಕಿಗೆ ತುತ್ತಾಗಿದ್ದಾರೆ. ಸಿಲಿಕಾನ್​ ಸಿಟಿಯ ವೈಟ್​ಫೀಲ್ಡ್​ ಮೂಲದ ಟೆಕ್ಕಿಗೂ ಕೊರೋನಾ ಸೋಂಕಿರುವುದು ದೃಢಪಟ್ಟಿದ್ದು, ರಾಜ್ಯದಲ್ಲಿ ಪತ್ತೆಯಾದ ಮೊದಲ ಪ್ರಕರಣ ಇದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಭೀತಿ ವಾತಾವಾರಣ ನಿರ್ಮಾಣವಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ಕುರಿತು ರಾಜ್ಯದ ಜನರಿಗೆ ಧೈರ್ಯ ತುಂಬಿರುವ ಸಿಎಂ ಬಿಎಸ್​ ಯಡಿಯೂರಪ್ಪ, ವೈರಸ್​ ಬಗೆಗಿನ ಊಹಾಪೋಹಾಗಳಿಂದ ದೂರವಿದ್ದು, ಆರೋಗ್ಯ ಇಲಾಖೆ ನೀಡುವ ಸಲಹೆಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್​ ಮೂಲಕ ಸಂದೇಶ ನೀಡಿರುವ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಕೊರೋನಾ ವೈರಸ್ ಕುರಿತು ಸರ್ಕಾರ ತೀವ್ರ ನಿಗಾವಹಿಸಿದೆ. ಅಲ್ಲದೇ ಪರಿಸ್ಥಿತಿ ಎದುರಿಸಲು ಆರೋಗ್ಯ ಇಲಾಖೆ ಸನ್ನದ್ಧವಾಗಿದೆ. ಜನರು ಊಹಾಪೋಹಗಳಿಗೆ ಕಿವಿಗೊಡದೇ, ತಪ್ಪು ಮಾಹಿತಿಯಿಂದ ದೂರವಿರುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಸೋಂಕು ಹೊರಾತಾಗಿ ಯಾವುದೇ ರೋಗದ ಲಕ್ಷಣಗಳು ಕಂಡು ಬಂದರೂ ತಕ್ಷಣಕ್ಕೆ ಸಮೀಪದ ಆಸ್ಪತ್ರೆಗೆ ದಾಖಲಾಗುವುದು ಒಳಿತು ಎಂದಿದ್ದಾರೆ.

ರಾಜ್ಯದಲ್ಲಿ ಮೊದಲ ಪ್ರಕರಣ ಪತ್ತೆಯಾದ ಬೆನ್ನೆಲ್ಲೇ ಆರೋಗ್ಯ ಇಲಾಖೆ ಹೈ ಆಲರ್ಟ್​ ಆಗಿದೆ. ಈ ಕುರಿತು ಮಾತನಾಡಿರುವ ಆರೋಗ್ಯ ಸಚಿವ ಬಿ ಶ್ರೀರಾಮುಲು, ಸರ್ಕಾರ ಈ ಬಗ್ಗೆ ಸಾಕಷ್ಟು ಮುಂಜಾಗೃತ ಕ್ರಮಗಳನ್ನ ಕೈಗೊಂಡಿದ್ದು, ಜನರು ಭಯಭೀತರಾಗುವುದು ಬೇಡ ಎಂದಿದ್ದಾರೆ.

ರಾಜ್ಯದಲ್ಲಿ ಹಣಕಾಸಿನ ಕೊರತೆ ಇಲ್ಲ. ವೈರಸ್ ಹರಡುವಿಕೆ ತಡೆಯಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ನಮ್ಮಲಿನ ಬಿಸಿಲಿನ ತಾಪಕ್ಕೆ ಈ ವೈರಸ್ ಹರಡುವುದಿಲ್ಲ. ಈಗಾಗಲೇ ಎಲ್ಲಾ ಕಡೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದೇವೆ. ಮಾಸ್ಕ್​ಗೆ ಜನರು ಹೆಚ್ಚು ಮೊರೆ ಹೋಗುತ್ತಿರುವ ಹಿನ್ನೆಲೆ ಅಧಿಕ ಮೌಲ್ಯಕ್ಕೆ ಮಾಸ್ಕ್​​ ಮಾರದಂತೆ ಸೂಚನೆ ನೀಡಲಾಗಿದೆ ಎಂದು ಕೂಡ ತಿಳಿಸಿದರು.

error: Content is protected !! Not allowed copy content from janadhvani.com