janadhvani

Kannada Online News Paper

ಶಾದಿ ಭಾಗ್ಯ ಯೋಜನೆಯನ್ನು ರದ್ದು ಪಡಿಸಿದ ಬಿಜೆಪಿ ಸರ್ಕಾರ- ಸಿದ್ದರಾಮಯ್ಯ, ಎಚ್ಡಿಕೆ ಕಿಡಿ

ದಾವಣಗೆರೆ, ಮಾ 8- ತಾವು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಶಾದಿ ಭಾಗ್ಯ ಯೋಜನೆಯನ್ನು ಬಿಜೆಪಿ ಸರ್ಕಾರ ರದ್ದುಪಡಿಸಿರುವ ಕ್ರಮಕ್ಕೆ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾದಿ ಭಾಗ್ಯ ಯೋಜನೆಯನ್ನು ರದ್ದು ಪಡಿಸುವ ಮೂಲಕ ಬಿಜೆಪಿ ಅಲ್ಪ ಸಂಖ್ಯಾತರ ವಿರೋಧಿಗಳೆಂದು ಸಾಬೀತು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂದು ಪ್ರಧಾನಿ ಅವರು ಪ್ರತಿ ಭಾಷಣದಲ್ಲೂ ಹೇಳುತ್ತಾರೆ. ಆದರೆ ಅದನ್ನು ಆಚರಣೆಗೆ ತರುವುದಿಲ್ಲ. ಹೀಗಾಗಿ ಬಿಜೆಪಿಯವರು ಸಂವಿಧಾನ ವಿರೋಧಿಗಳು.

ಬೀದರ್‌ನ ಶಾಹೀನಾ ಶಾಲೆಯ ದೇಶ ದ್ರೋಹಿ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು 124 (0) ಪ್ರಕಾರ ದೇಶದ್ರೋಹವಾಗಿಲ್ಲ. ಈ ಅಂಶವನ್ನೇ ನ್ಯಾಯಾಲಯ ಎತ್ತಿ ಹಿಡಿದಿದೆ. ಸಿಎಎ ವಿರೋಧಿಸುವವರ ವಿರುದ್ಧ ಇಂತಹ ಪ್ರಕರಣಗಳನ್ನು ಹೂಡಬಾರದು ಎಂದು ಕೋರ್ಟ್ ಹೇಳಿದೆ. ಆದರೆ ಬಿಜೆಪಿ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ ಎಂದು ದೂರಿದರು.

ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ

ಮೈಸೂರು: ಬಿಜೆಪಿ ಸರ್ಕಾರ ಶಾದಿ ಭಾಗ್ಯ ಒಂದೆ ಅಲ್ಲ. ರಾಜ್ಯದ ಎಲ್ಲ ಅಭಿವೃದ್ಧಿ ಕಾರ್ಯ ಸ್ಥಗಿತ ಮಾಡಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಯೋಜನೆಗಳಲ್ಲಿ ಒಂದಾದ ಶಾದಿ ಭಾಗ್ಯ ಯೋಜನೆಗೆ ತಿಲಾಂಜಲಿ ವಿಚಾರವಾಗಿ ಇಂದು ಹೆಚ್​ಡಿಕೆ ಮಾತನಾಡಿದ್ದಾರೆ.

ಇನ್ನು ಬೆಳಗಾವಿಯಲ್ಲಿ ಬಿಜೆಪಿ ಶಾಸಕರೆ ತಮ್ಮ ಕ್ಷೇತ್ರಕ್ಕೆ ಅನುದಾನ ಕೊಟ್ಟಿಲ್ಲ ಎಂದು ಗಲಾಟೆ ಮಾಡಿದ್ದಾರೆ. ಅಲ್ಲಿಯ ಮಂತ್ರಿಯನ್ನ ಕೂರಿಸಿಕೊಂಡು ತಮಗೆ ಅನುದಾನ ಕೊಡಿ ಎಂದಿದ್ದಾರೆ. ಸಿಎಂ ಬಿಎಸ್​ವೈ ಅವರು ನೆರೆ ಹಾವಳಿಯ ಜನರಿಗೆ ಹಣ ಬಿಡುಗಡೆ ಮಾಡಿ ಎಂದು ಹೇಳಿದ್ದಾರೆ. ಆದರೂ ಸಹ ಅಧಿಕಾರಿಗಳು ಹಣ ಬಿಡುಗಡೆ ಮಾಡಿಲ್ಲ. ಇದನ್ನ ಬಿಜೆಪಿ ಶಾಸಕರೇ ಆರೋಪಿಸಿದ್ದಾರೆ. ಇದು ಸದ್ಯದ ಬಿಜೆಪಿ ಸರ್ಕಾರದ ಸ್ಥಿತಿಯಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿದರು.

error: Content is protected !! Not allowed copy content from janadhvani.com