janadhvani

Kannada Online News Paper

ವಿಸಿಟ್, ರೀ ಎಂಟ್ರಿ ವೀಸಾದಲ್ಲಿ ಆಗಮಿಸುವವರಿಗೆ ನಿರ್ಬಂಧವಿಲ್ಲ- ಕಠಿಣ ತಪಾಸಣೆ

ರಿಯಾದ್: ಕರೋನಾ ವೈರಸ್ ಹರಡುವ ಭೀತಿಯಿಂದಾಗಿ ಉಮ್ರಾ ಯಾತ್ರಾರ್ಥಿಗಳಿಗೆ ತಾತ್ಕಾಲಿಕ ಸೌದಿ ಪ್ರವೇಶವನ್ನು ನಿರ್ಬಂಧಿಸಲಾದ ಬೆನ್ನಲ್ಲೇ ಸೌದಿಯ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವೈದ್ಯಕೀಯ ತಪಾಸಣೆಯನ್ನು ಕಠಿಣ ಗೊಳಿಸಲಾಗಿದೆ.

ಈ ಮಧ್ಯೆ, ಉದ್ಯೋಗ ವೀಸಾ, ವಿಸಿಟ್ ವೀಸಾ, ಬಿಸಿನೆಸ್ ವೀಸಾ ಮತ್ತು ಕುಟುಂಬ ಭೇಟಿ ವೀಸಾ ಹೊಂದಿರುವ ಪ್ರಯಾಣಿಕರಿಗೆ ಗುರುವಾರ ವಿಧಿಸಲಾದ ಪ್ರಯಾಣ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ ಎಂದು ಸೌದಿ ಪಾಸ್‌ಪೋರ್ಟ್ ಇಲಾಖೆ ಮತ್ತೆ ಸ್ಪಷ್ಟಪಡಿಸಿದೆ.

ಅದೇ ಸಮಯ, ಭಾರತದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಸೌದಿಗೆ ವಿಸಿಟ್ ವೀಸಾ ಮತ್ತು ಹೊಸತಾಗಿ ಉದ್ಯೋಗಕ್ಕೆ ತೆರಳುವ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ.

ಕಠಿಣ ತಪಾಸಣೆ, ಪ್ರವೇಶ ವಿಳಂಬ

ನಿನ್ನೆ ಬೆಳಿಗ್ಗೆ ವಿಸಿಟ್ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದವರನ್ನು ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ತೀವ್ರ ತಪಾಸಣೆಗೆ ಒಳಪಡಿಸಲಾಗಿತ್ತು. ಗಂಟೆಗಟ್ಟಲೆ ಕಾದು ಸೌದಿ ಪ್ರವೇಶ ವಿಳಂಬವಾಗಿದೆ. ವಿಸಿಟ್ ವೀಸಾ ಮತ್ತು ಉದ್ಯೊಗಕ್ಕೆ ಪ್ರಥಮವಾಗಿ ಸೌದಿಗೆ ಆಗಮಿಸಿದವರಿಗೆ ಇನ್ನಷ್ಟು ವಿಳಂಬವಾಗಿತ್ತು ಕಾರಣ ರಕ್ತ ಪರೀಕ್ಷೆಗೊಳಪಡಿಸಿದ ಬಳಿಕವಷ್ಟೇ ಅವರಿಗೆ ಸೌದಿ ಪ್ರವೇಶಕ್ಕೆ ಅನುಮತಿ ನೀಡಲಾಯಿತು.

ದಮ್ಮಾಮ್, ರಿಯಾದ್ ಮತ್ತು ಜೆದ್ದಾ ವಿಮಾನ ನಿಲ್ದಾಣಗಳಲ್ಲೂ ಇದೇ ಪರಿಸ್ಥಿತಿ ಎದುರಾಗಿತ್ತು.ರೀ ಎಂಟ್ರಿಯಲ್ಲಿ ಆಗಮಿಸಿದರಿಗೆ ಮಾತ್ರ ಮೊದಲು ಪ್ರವೇಶ ನೀಡಲಾಯಿತು.

ಸಂಪರ್ಕ ವಿಮಾನ ವಾಪಸ್:

ಯುಎಇ, ಬಹ್ರೈನ್ ಮುಂತಾದ ಕಡೆಗಳ ಸಂಪರ್ಕ ವಿಮಾನಗಳನ್ನು ಬೆಳಿಗ್ಗೆ ವಾಪಸ್ ಕಳುಹಿಸಿ, ಗಂಟೆಗಳ ನಂತರ ಸೌದಿಗೆ ಮರಳಲು ಅವಕಾಶ ನೀಡಲಾಯಿತು. ಎಮಿರೇಟ್ಸ್ ಮತ್ತು ಏರ್ ಅರೇಬಿಯಾ ವಾಪಸ್ ಕಳುಹಿಸಿದ ವಿಮಾನಗಳಲ್ಲಿ ಸೇರಿವೆ.

ಕರೋನ ವೈರಸ್ ಸೋಂಕಿರುವ ಯುಎಇ, ಬಹ್ರೈನ್ ಗಳಿಂದ ಸಂಪರ್ಕ ವಿಮಾನ ಸೇವೆಯನ್ನು ಕಡಿತಗೊಳಿಸಲು ವಿಮಾನ ಕಂಪನಿಗಳು ತೀರ್ಮಾನಿಸಿದೆ.

ಏರ್ ಇಂಡಿಯಾ ಮತ್ತು ಎಕ್ಸ್‌ಪ್ರೆಸ್ ನಲ್ಲಿ ಬೋರ್ಡಿಂಗ್ ಪಾಸ್ ನಿರಾಕರಣೆ:

ಕರೋನಾ ಭೀತಿ ಹಿನ್ನಲೆಯಲ್ಲಿ ಭಾರತೀಯರಿಗೆ ಸೌದಿ ಪ್ರವೇಶ ನಿರ್ಬಂಧಿಸಿರುವುದಾಗಿ ಯಾವುದೇ ಅಧಿಕೃತ ಸೂಚನೆಯಿಲ್ಲ, ಆದರೂ ಏರ್ ಇಂಡಿಯಾ ಮತ್ತು ಎಕ್ಸ್‌ಪ್ರೆಸ್ ಪ್ರಸ್ತುತ ಸೌದಿಗೆ ಮರು ಪ್ರವೇಶ (ರೀ ಎಂಟ್ರಿ ) ಗೆ ಮಾತ್ರ ಬೋರ್ಡಿಂಗ್ ನೀಡುತ್ತಿವೆ. ಸಂದರ್ಶಕರಿಗೆ, ಹೊಸ ಉದ್ಯೋಗ ವಿಸಾ ಹೊಂದಿರುವವರಿಗೆ ಬೋರ್ಡಿಂಗ್ ಪಾಸ್ ನಿರಾಕರಿಸಿದೆ.

ಬೆಳಿಗ್ಗೆ ಸೌದಿಗೆ ಆಗಮಿಸಿದ ಏರ್ ಇಂಡಿಯಾ ಮತ್ತು ಎಕ್ಸ್‌ಪ್ರೆಸ್ ವಿಮಾನಗಳು ತಡವಾಗಿ ಸೌದಿಯಿಂದ ಮರಳುತ್ತಿದ್ದವು.ಇದು ಬೋರ್ಡಿಂಗ್ ಪಾಸ್ ನಿರಾಕರಿಸಲು ಕಾರಣವಾಗಿರಬಹುದು.

error: Content is protected !! Not allowed copy content from janadhvani.com