janadhvani

Kannada Online News Paper

ಮಂಗಳೂರು ಖಾಝಿಯವರ ಕೊಲೆಗೆ ಯತ್ನ-ಪೊಲೀಸ್ ಭದ್ರತೆ

ಮಂಗಳೂರು, ಫೆ.28: ಮಂಗಳೂರಿನ ಖಾಝಿಯಾಗಿದ್ದ ಮರ್ಹೂಂ ಚೆಂಬರಿಕ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್ ಅವರ ನಿಗೂಢ ಮರಣಕ್ಕೆ ಸಂಬಂಧಿಸಿ ಕಾಸರಗೋಡು ಭಾಗದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವ, ಮಂಗಳೂರು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ಕೊಲೆಗೆ ದುಷ್ಕರ್ಮಿಗಳು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು‌ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಖಾಝಿಯವರು ದೂರು ನೀಡಿದ್ದಾರೆ.

ಖಾಝಿ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್ ಚೆಂಬರಿಕ ಇವರ ನಿಗೂಢ ಮರಣದ ಹಿಂದಿರುವ ದುಷ್ಟ ಶಕ್ತಿಗಳನ್ನು ಪತ್ತೆ ಹಚ್ಚಿ, ಕಾನೂನು ಕ್ರಮ ಕೈಗೊಳ್ಳುವಂತೆ ಕಾಸರಗೋಡು ಪರಿಸರದಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇದೆ.ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದ ಖಾಝಿಯವರಿಗೆ ಜೀವ ಬೆದರಿಕೆ ಇರುವುದಾಗಿ ಈ ಹಿಂದೆ ಹೇಳಿಕೆ ನೀಡಿದ್ದರು. ಇದೀಗ ಕೊಲೆ ಯತ್ನ ನಡೆದಿರುವುದಾಗಿ ಖಾಝಿಯವರು ಪೋಲೀಸರಿಗೆ ದೂರು ನೀಡಿದ್ದಾರೆ.

ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ ಕಾರಣಕ್ಕೆ ದುಷ್ಕರ್ಮಿಗಳಿಂದ ಕೊಲೆ ಬೆದರಿಕೆಗೆ ಒಳಗಾಗಿದ್ದಾರೆ ಎಂಬುದಾಗಿಯೂ ವರದಿಯಾಗಿದೆ.

ಖಾಝಿ ಅವರ ಕಾರಿನ ಹಿಂಬದಿಯ ಟಯರಿಗೆ ಚೂಪಾದ ಕತ್ತಿ ಅಥವಾ ಆಯುಧ ಮಾದರಿಯ ಕೊಕ್ಕೆಗಳನ್ನು ಸಿಲುಕಿಸಿ ಕಾರು ಚಲಿಸುತ್ತಿರುವಾಗಲೇ ಅಪಘಾತಕ್ಕೀಡಾಗಲು ಪ್ರಯತ್ನ ನಡೆಸಲಾಗಿತ್ತು ಎನ್ನಲಾಗಿದೆ. ಕಾರಿನ ಟಯರಿಗೆ ಹೀಗೆ ಕತ್ತಿ ಮತ್ತಿತರ ಆಯುಧಗಳನ್ನು ಯಾರು, ಯಾವಾಗ ಅಳವಡಿಸಿದ್ದರು ಎಂದು ಪೋಲೀಸ್ ತನಿಖೆಯಿಂದಷ್ಟೇ ಹೊರ ಬೀಳಲಿದೆ.ಒಟ್ಟಿನಲ್ಲಿ ಕಳೆದ ಕೆಲವು ಸಮಯಗಳಿಂದ ತಂಡವೊಂದು ಹಿಂಬಾಲಿಸಿ ಹತ್ಯೆಗೆ ಸಂಚು ಹೂಡಿದೆ ಎಂದು ಖಾಝಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ದೂರು ಸ್ವೀಕರಿಸಿದ ಪೋಲೀಸರು, ತನಿಖೆ ಆರಂಭಿಸಿದ್ದಾರೆ.

ಪೊಲೀಸ್ ಭದ್ರತೆ: ಜೀವ ಬೆದರಿಕೆ ಕುರಿತು ಕದ್ರಿ ಪೊಲೀಸರಿಗೆ ದೂರು ನೀಡಿದ ಬಳಿಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೂ ಪ್ರತ್ಯೇಕ ದೂರು ಸಲ್ಲಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಮಹಾನಿರ್ದೇಶಕರು, ಮಂಗಳೂರು ಖಾಝಿಗೆ ಬಿಗು ಪೊಲೀಸ್ ಭದ್ರತೆ ಕಲ್ಪಿಸುವಂತೆ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದ್ದರು. ಆ ಹಿನ್ನೆಲೆಯಲ್ಲಿ ಬುಧವಾರದಿಂದಲೇ ಖಾಝಿಯವರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ಮುಂದೆ ಪೊಲೀಸ್ ಎಸ್ಕಾರ್ಟ್‌ನಲ್ಲಿ ಖಾಝಿಯವರು ಸಂಚರಿಸಲಿದ್ದಾರೆ. ಅಲ್ಲದೆ ಅವರಿಗೆ ಪ್ರತ್ಯೇಕ ಗನ್‌ಮ್ಯಾನ್ ಕೂಡ ನೀಡಲಾಗಿದೆ.

ಕೇರಳದಲ್ಲೂ ಭದ್ರತೆಗೆ ಮಾಹಿತಿ: ಮಂಗಳೂರು ಖಾಝಿಗೆ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಕೇರಳ ಸರಕಾರಕ್ಕೆ ಮಾಹಿತಿ ನೀಡುವಂತೆ ಪೊಲೀಸ್ ಮಹಾನಿರ್ದೇಶಕರು ಸೂಚನೆ ನೀಡಿದ್ದಾರೆ. ಅದರಂತೆ ಈ ಮಾಹಿತಿಯನ್ನು ಕೇರಳ ಪೊಲೀಸ್ ಇಲಾಖೆಯ ಗಮನಕ್ಕೆ ತರಲಾಗುತ್ತಿದೆ. ಖಾಝಿಯ ಕೇರಳ ಪ್ರವಾಸ ವೇಳೆ ಪೊಲೀಸ್ ಎಸ್ಕಾರ್ಟ್ ಹಾಗೂ ಗನ್‌ಮ್ಯಾನ್ ಭದ್ರತೆ ಒದಗಿಸುವಂತೆ ತಿಳಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಡಾ.ಹರ್ಷ ತಿಳಿಸಿದ್ದಾರೆ.

error: Content is protected !! Not allowed copy content from janadhvani.com