janadhvani

Kannada Online News Paper

ಶಾಹೀನ್‌ಬಾಗ್‌ ಪ್ರತಿಭಟನೆ: ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಶಾಹೀನ್‌ಬಾಗ್‌ನಲ್ಲಿ ನಡೆಯುತ್ತಿರುವ ನಿರಂತರ ಹೋರಾಟ ತೆರವುಗೊಳಿಸುವ ಬಗ್ಗೆ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮಾರ್ಚ್ 23ಕ್ಕೆ ಮುಂದೂಡಿದೆ. ಈಶಾನ್ಯ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ದೆಹಲಿ ಹೈಕೋರ್ಟ್‌ ವಿಚಾರಣೆ ನಡೆಸುತ್ತಿರುವುದು ಗಮನದಲ್ಲಿದೆ. ಶಾಹೀನ್‌ ಬಾಗ್‌ ಪ್ರತಿಭಟನೆ ಬಗ್ಗೆ ನಾವು ನಡೆಸುತ್ತಿರುವ ವಿಚಾರಣೆಯ ವ್ಯಾಪ್ತಿಯನ್ನು ಹಿಗ್ಗಿಸುವ ಉದ್ದೇಶವಿಲ್ಲ ಎಂದು ನ್ಯಾಯಾಲಯ ಹೇಳಿತು.

ಶಾಹೀನ್‌ಬಾಗ್‌ ಹೋರಾಟಗಳ ಬಗ್ಗೆ ಯಾವುದೇ ಆದೇಶ ನೀಡಲು ಕಾಲ ಪಕ್ವವಾಗಿಲ್ಲ. ಈ ವಿಚಾರವನ್ನು ಹೋಳಿ ಹಬ್ಬದ ನಂತರ ಪರಿಶೀಲಿಸಲಾಗುವುದು. ಮೊದಲು ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿ. ಮಧ್ಯಂತರ ಆದೇಶವನ್ನೂ ಕೊಡುವುದಿಲ್ಲ ಎಂದು ನ್ಯಾಯಮೂರ್ತಿ ಕೌಲ್ ಹೇಳಿದರು.

ಶಾಹೀನ್‌ಬಾಗ್‌ ಪ್ರತಿಭಟನಾಕಾರರೊಂದಿಗೆ ಸಂಧಾನ ನಡೆಸಲು ಫೆ.17ರಂದು ಸುಪ್ರೀಂ ಕೋರ್ಟ್‌ ನೇಮಿಸಿದ್ದ ಸಂಧಾನಕಾರರು ತಮ್ಮ ವರದಿಯನ್ನು ಸೋಮವಾರ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದರು.

‘ಜನರಿಗೆ ಪ್ರತಿಭಟನೆಯ ಹಕ್ಕಿದೆ. ಆದರೆ ಎಲ್ಲಿ ಪ್ರತಿಭಟನೆ ನಡೆಸಬೇಕು ಎನ್ನುವ ಪ್ರಶ್ನೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ರಸ್ತೆಯಲ್ಲಿ ಸಂಚಾರ ನಿರ್ಬಂಧಿಸುವುದು ಸಮಸ್ಯೆ ಉಂಟುಮಾಡುತ್ತದೆ. ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಗತ್ಯ. ಆದರೆ ಅದಕ್ಕೆ ಒಂದು ಚೌಕಟ್ಟು ಇರಬೇಕು’ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಹೇಳಿತ್ತು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ವರ್ಷ ಡಿಸೆಂಬರ್‌ನಿಂದಲೂ ದೆಹಲಿಯ ಶಾಹಿನ್‌ ಬಾಗ್ ಪ್ರದೇಶದಲ್ಲಿ ಹಲವರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

error: Content is protected !! Not allowed copy content from janadhvani.com