janadhvani

Kannada Online News Paper

ರಾಷ್ಟ್ರ ರಾಜಧಾನಿ ರಕ್ತಸಿಕ್ತ ರಣಭೂಮಿ- 18 ಮಂದಿ ಮೃತ್ಯು ‘ಕಂಡಲ್ಲಿ ಗುಂಡು’ ಆದೇಶ

ನವದೆಹಲಿ,ಫೆ.25: ಎರಡು ದಿನಗಳ ಹಿಂದೆ ದೆಹಲಿಯಲ್ಲಿ , ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧಿ ಗುಂಪುಗಳ ನಡುವೆ ಶುರುವಾದ ಸಂಘರ್ಷ ಮೂರನೇ ದಿನವೂ ಮುಂದುವರಿದಿದ್ದು, ರಾಷ್ಟ್ರ ರಾಜಧಾನಿಯು ಸಂಪೂರ್ಣ ರಣಭೂಮಿಯಾಗಿ ಪರಿಣಮಿಸಿದೆ. ಇದರ ಪರಿಣಾಮ ದೆಹಲಿಯಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೇರಿದೆ. ಇಲ್ಲಿಯವರೆಗೂ ಸುಮಾರು 156 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಇಲ್ಲಿನ ಹಿಂಸಾಚಾರದಲ್ಲಿ ಮಂಗಳವಾರ ರಾತ್ರಿಯವರೆಗೂ ಒಬ್ಬ ಪೊಲೀಸ್ ಕಾನ್ಸ್​​ಟೇಬಲ್​​ ಸೇರಿದಂತೆ 13 ಮಂದಿ ಮೃತಪಟ್ಟಿದ್ದರು. ಇವತ್ತು ಬುಧವಾರ ಲೋಕನಾಯಕ್ ಆಸ್ಪತ್ರೆಯಲ್ಲಿ ದಾಖಲುಗೊಂಡಿದ್ದ ಗಾಯಾಳುಗಳ ಪೈಕಿ ಐದು ಮಂದಿ ಅಸುನೀಗಿದ್ಧಾರೆ. ಇದರೊಂದಿಗೆ ಸಾವಿನ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.

ಇಲ್ಲಿನ ಈಶಾನ್ಯ ಭಾಗದಲ್ಲಿ ಇರುವ ಮೌಜ್​ಪುರದಲ್ಲಿ ಇಂದು ಕೂಡ ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟದಲ್ಲಿ ತೊಡಗಿವೆ. ನಿನ್ನೆ ಕಲ್ಲು ತೂರಾಟದ ವೇಳೆ ಪೊಲೀಸ್ ಕಾನ್ಸ್​ಟೇಬಲ್​​​​ ಓರ್ವ ಸಾವನ್ನಪ್ಪಿದ್ದಾರೆ. ಈಗ ಪೊಲೀಸ್ ಕಾನ್ಸ್​ಟೇಬಲ್ ಬೆನ್ನಲ್ಲೇ 12 ಮಂದಿ ನಾಗರಿಕರು ಮೃತಪಟ್ಟಿದ್ದಾರೆ.

ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು. ಯಾವುದೇ ಕಾರಣಕ್ಕೂ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಹಾಗೆಯೇ ಕೈಮೀರುತ್ತಿರುವ ಹಿಂಸಾಚಾರ ತಹಬದಿಗೆ ತರಲು ಕಠಿಣ ಕ್ರಮವನ್ನು ದೆಹಲಿ ಪೊಲೀಸರು ಕೈಗೊಂಡಿದ್ದು, ‘ಕಂಡಲ್ಲಿ ಗುಂಡು’ ಆದೇಶವನ್ನು ಜಾರಿಗೊಳಿಸಲಾಗಿದೆ.

ಬುಧವಾರ ಬೆಳಗ್ಗೆ ಈಶಾನ್ಯ ದೆಹಲಿಯ ಬ್ರಹ್ಮಪುರಿ-ಮುಸ್ತಫಾಬಾದ್ ಪ್ರದೇಶದಲ್ಲಿ ಕಲ್ಲು ತೂರಾಟ ನಡೆಯುತ್ತಿರುವ ವರದಿಯಾಗಿದೆ. ವಿವಿಧ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತುರ್ತು ಸಭೆಗಳನ್ನು ನಡೆಸಿ ಭದ್ರತಾ ಸ್ಥಿತಿಯನ್ನು ಪರಿಶೀಲಿಸಿದ್ಧಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.

ಇನ್ನು, ಬೆಂಕಿ ಹಚ್ಚಿದ ಪ್ರಕರಣದ ಸಂಬಂಧ 11 ಎಫ್ ಐಆರ್ ದಾಖಲಿಸಲಾಗಿದೆ. ಈಶಾನ್ಯ ದೆಹಲಿ ಭಾಗದಲ್ಲಿರುವ ಪ್ರದೇಶಗಳಲ್ಲಿ ಪರಿಸ್ಥಿತಿ ಅವಲೋಕಿಸಲು ಡ್ರೋಣ್ ಬಳಸಲಾಗಿದೆ. ನಾವು ಕೂಡಲೇ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಿದ್ದೇವೆ ಎಂದು ದೆಹಲಿ ಪೊಲೀಸ್​​ ಅಧಿಕಾರಿ ಎಂಎಸ್ ರಾನ್ ಧಾವ್ ತಿಳಿಸಿದ್ದಾರೆ.

ಶಾಹೀನ್ ಬಾಗ್​ನಲ್ಲಿ ನಿರಂತರ ಪ್ರತಿಭಟನೆ ಕಂಡಿದ್ದ ದೆಹಲಿ ಈಗ ಜಾಫ್ರಾಬಾದ್​ನಲ್ಲೂ ಪ್ರತಿಭಟನೆಯ ಬಿಸಿ ಅನುಭವಿಸುತ್ತಿದೆ. ಸೀಲಂಪುರ್​ನಿಂದ ಮೌಜ್​ಪುರ್ ಮತ್ತು ಯಮುನಾ ವಿಹಾರ್​ಗೆ ಸಂಪರ್ಕ ಸಾಧಿಸುವ ಜಾಫ್ರಾಬಾದ್ ಮೆಟ್ರೋ ಸ್ಟೇಷನ್ ಬಳಿಯ ರಸ್ತೆಯೊಂದನ್ನು ಸಿಎಎ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದು ಸೂಕ್ಷ್ಮ ಪರಿಸ್ಥಿತಿಗೆ ಎಡೆ ಮಾಡಿಕೊಟ್ಟಿದೆ.

ರಸ್ತೆಯನ್ನು ಮುತ್ತಿಗೆ ಹಾಕಿದ ನೂರಾರು ಪ್ರತಿಭಟನಾಕಾರರಲ್ಲಿ ಮಹಿಳೆಯರೇ ಹೆಚ್ಚಾಗಿದ್ದರು. ಭದ್ರತೆಯ ದೃಷ್ಟಿಯಿಂದ ಜಾಫ್ರಾಬಾದ್ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಯಿತು. ಹಾಗೆಯೇ, ಮೌಜ್​ಪುರ್-ಬಾಬರ್​ಪುರ್ ಮೆಟ್ರೋ ಸ್ಟೇಷನ್​ನ ದ್ವಾರಗಳನ್ನೂ ಬಂದ್ ಮಾಡಲಾಯಿತು.

“ಈ ಪ್ರತಿಭಟನೆಯು ಸಿಎಎ, ಎನ್​ಆರ್​ಸಿ ವಿರುದ್ಧವಾಗಿದೆ. ಹಾಗೆಯೇ, ದಲಿತರಿಗೆ ಮೀಸಲಾತಿ ಒದಗಿಸುವಂತೆ ಕೂಡ ಆಗ್ರಹಿಸುತ್ತಿದ್ದೇವೆ. ಮಹಿಳೆಯರೇ ಈ ಹೋರಾಟದ ನೇತೃತ್ವ ವಹಿಸಿದ್ದಾರೆ. ಪುರುಷರು ಕೇವಲ ಬೆಂಬಲಕ್ಕೆ ನಿಂತಿದ್ಧಾರೆ. ನಾವು ಪ್ರತಿಭಟನೆಯ ಉದ್ದೇಶದಿಂದಷ್ಟೇ ರಸ್ತೆಯನ್ನು ತಡೆದಿದ್ದೇವೆ. ಸಿಎಎ ಹಿಂಪಡೆಯುವವರೆಗೂ ನಾವು ಈ ಸ್ಥಳದಿಂದ ಕದಲುವುದಿಲ್ಲ” ಎಂದು ಶದಾಬ್ ಎಂಬ ಪ್ರತಿಭಟನಾಕಾರರು ಸ್ಪಷ್ಟಪಡಿಸಿದ್ಧಾರೆ.

ಇನ್ನು, ಕಳೆದ ಎರಡು ತಿಂಗಳಿನಿಂದ ದಿನಂಪ್ರತಿ 24 ಗಂಟೆ ಪ್ರತಿಭಟನೆ ಕಂಡಿದ್ದ ಶಾಹೀನ್ ಬಾಗ್​ನಲ್ಲಿ ಪರಿಸ್ಥಿತಿ ಬಹುತೇಕ ಹಾಗೇ ಮುಂದುವರಿದಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಇಬ್ಬರು ಸಂಧಾನಕಾರರು ಬಂದು ಮಾತನಾಡಿದ ಬಳಿಕ ಪ್ರತಿಭಟನಾಕಾರರು ತಾವು ಕುಳಿತಿದ್ದ ರಸ್ತೆಯ ಪಾರ್ಶ್ವ ಭಾಗವನ್ನು ವಾಹನ ಸಂಚಾರಕ್ಕಾಗಿ ತೆರವು ಮಾಡಿದ್ಧಾರೆ. ಆದರೆ, ಪೊಲೀಸರು ಭದ್ರತಾ ದೃಷ್ಟಿಯಿಂದ ರಸ್ತೆಯಲ್ಲಿ ಬ್ಯಾರಿಕೇಡ್​ಗಳನ್ನು ಹಾಕಿದ್ಧಾರೆ.

error: Content is protected !! Not allowed copy content from janadhvani.com