ತಾಜ್‌ಮಹಲ್‌ : ಭವ್ಯ ಸಮಾಧಿ ವೀಕ್ಷಣೆಗೆ 200 ರೂ.ಟಿಕೆಟ್

ನವದೆಹಲಿ: ಜಗತ್ತಿನ ಪ್ರಸಿದ್ಧ ಪ್ರವಾಸಿ ತಾಣ ತಾಜ್‌ಮಹಲ್‌ನ ಪ್ರವೇಶ ದರ, ಭವ್ಯ ಸಮಾಧಿ ವೀಕ್ಷಣಾ ದರ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಪ್ರವೇಶ ದರ 50 ಹಾಗೂ ಭವ್ಯ ಸಮಾಧಿ ವೀಕ್ಷಣಾ ದರವನ್ನು 200ರೂಗೆ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಇದು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಎಂದು ಭಾರತದ ಪುರಾತತ್ವ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮೊದಲು ಪ್ರವೇಶ ದರ 40 ಇತ್ತು. ಭವ್ಯ ಸಮಾಧಿ ವೀಕ್ಷಣೆಗೆ ಟಿಕೆಟ್‌ ಕೊಳ್ಳುವವರಿಗೆ ಪ್ರತ್ಯೇಕ ಶುಲ್ಕ ಇರಲಿಲ್ಲ.

‘ತಾಜ್‌ಮಹಲ್‌ ಸಂರಕ್ಷಣೆ ಮತ್ತು ಹೆಚ್ಚುತ್ತಿರುವ ಪ್ರವಾಸಿಗರ ನಿರ್ವಹಣೆ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಸಂಸ್ಕೃತಿ ಸಚಿವ ಮಹೇಶ್‌ ಶರ್ಮಾ ತಿಳಿಸಿದ್ದಾರೆ.

ಭಾನುವಾರ ಆಗ್ರಾಕ್ಕೆ ಭೇಟಿ ನೀಡಿದ್ದ ಅವರು ‘ಮುಂದಿನ ಪೀಳಿಗೆಯವರಿಗೂ ತಾಜ್‌ಮಹಲ್‌ ಅನ್ನು ಸಂರಕ್ಷಿಸಲು ಬಾರ್‌ಕೋಡ್‌ ಅಳವಡಿಸಿದ ಟಿಕೆಟ್‌ ವ್ಯವಸ್ಥೆಯನ್ನು ಹೊಸದಾಗಿ ಜಾರಿಗೆ ತರಲಾಗುತ್ತಿದೆ. ಇದರ ಕಾಲಾವಧಿ ಮೂರು ಗಂಟೆಗಳು ಮಾತ್ರ’ ಎಂದು ಹೇಳಿದ್ದಾರೆ.

‘ರಾಷ್ಟ್ರೀಯ ಪರಿಸರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ನೀರಿ) ತಾಜ್‌ಮಹಲ್‌ ಸ್ಥಿತಿಗತಿ ಕುರಿತು ಈಚೆಗೆ ವರದಿ ನೀಡಿದ್ದು, ಪ್ರವಾಸಿಗರ ದಟ್ಟಣೆ ನಿರ್ವಹಣೆ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು’ ಎಂದೂ ಹೇಳಿದರು.

‘ವಿದೇಶೀಯರಿಗೆ ಪ್ರವೇಶ ಶುಲ್ಕ  1,250 ನಿಗದಿಪಡಿಸಲು ನಿರ್ಧರಿಸಲಾಗಿದೆ. ಅವರಿಗಾಗಿ ಪ್ರತ್ಯೇಕ ಸಾಲು, ಶೌಚಾಲಯ ವ್ಯವಸ್ಥೆ ಸೇರಿದಂತೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎಂದು ಶರ್ಮಾ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!