janadhvani

Kannada Online News Paper

“ನಮಸ್ತೆ ಟ್ರಂಪ್” ಕೇವಲ ಮೂರು ಗಂಟೆಯ ಕಾರ್ಯಕ್ರಮಕ್ಕಾಗಿ ನೂರು ಕೋಟಿ ಖರ್ಚು

ಡಿಯೋರಿಯಾ, ಫೆ 24 :ನಮಸ್ತೆ ಟ್ರಂಪ್ ಎಂಬ ಕೇವಲ ಮೂರು ಗಂಟೆಯ ಕಾರ್ಯಕ್ರಮಕ್ಕಾಗಿ ಒಂದು ನೂರು ಕೋಟಿ ರೂಪಾಯಿಗಳನ್ನು ನೀರಿನಂತೆ ವೆಚ್ಚ ಮಾಡುತ್ತಿರುವುದು ದೇಶದ ಹಿತದೃಷ್ಟಿಯಿಂದ ಒಳ್ಳೇಯದಲ್ಲ ಎಂದು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಂಸದ ರಾಮಶಂಕರ್ ರಾಜ್‌ಭರ್ ಅಸಮಾಧಾನ ಹೊರಹಾಕಿದ್ದಾರೆ.

ಅಮೆರಿಕದ ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲು ಮತ್ತು ಅವರ ಡೈರಿ, ಕೃಷಿ ಮತ್ತು ಔಷಧೀಯ ಉತ್ಪನ್ನಗಳಿಗೆ ಭಾರತೀಯ ಮಾರುಕಟ್ಟೆ ಭದ್ರಪಡಿಸಿಕೊಳ್ಳಲು ಅಮೆರಿಕಾ ಅಧ್ಯಕ್ಷರು ಬಂದಿದ್ದಾರೆಯೇ ಹೊರತು ದೇಶಕ್ಕೆ ಅವರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ದೂರಿದರು.

ಐಶ್‌ಬಾಗ್‌ನಲ್ಲಿ 120 ಕೋಟಿ ರೂ.ಗಳ ರೈಲ್ವೆ ಭೂಮಿಯನ್ನು ಖಾಸಗಿ ಬಿಲ್ಡರ್‌ಗೆ ಕೇವಲ 53 ಕೋಟಿ ರೂಪಾಯಿಗೆ ನೀಡಲಾಗಿದೆ ಎಂದು ಅವರು ಕಿಡಿಕಾರಿದರು.

ನವದೆಹಲಿಯ ಅಶೋಕ್ ವಿಹಾರ್‌ನಲ್ಲಿ 10.76 ಹೆಕ್ಟೇರ್ ರೈಲು ಭೂಮಿಯನ್ನು ಅಗ್ಗದ ದರದಲ್ಲಿ ನೀಡಿ ಸರ್ಕಾರ ದೇಶದ ಜನರಿಗೆ ದ್ರೋಹ, ವಂಚನೆ ಮಾಡಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಗಂಭೀರ ಆರೋಪ ಮಾಡಿದ್ದಾರೆ.

ಎಲ್‌ಐಸಿ ವಿಮೆದಾರರ 30 ಕೋಟಿ ರೂಪಾಯಿ ಆಸ್ತಿ ಮಾರಾಟ ಸೇರಿದಂತೆ ಸರ್ಕಾರ ಹಿಂದೂಸ್ತಾನ್ ಮತ್ತು ಭಾರತ್ ಪೆಟ್ರೋಲಿಯಂ ಹಾಗೂ ರೈಲ್ವೆ ಇಲಾಖೆಗಳನ್ನು ಖಾಸಗಿಕರಣಗೊಳಿಸಲಾಗುತ್ತಿದೆ ಎಂದು ಟೀಕಿಸಿದರು. ಸರ್ಕಾರಿ ಸ್ವಾಮ್ಯದ ಆಸ್ತಿ-ಪಾಸ್ತಿಗಳನ್ನು ಖಾಸಗಿಯವರಿಗೆ ಬೇಕಾದ ಬಾಲ ಬುಡಕ ಉದ್ದಿಮೆದಾರರಿಗೆ ಮನಬಂದಂತೆ ಮಾರಾಟ ಮಾಡಿ ಜನತೆಗೆ ಸರ್ಕಾರ ವಂಚಿಸುತ್ತಿದೆ ಎಂದು ದೂರಿದರು.

ದೇಶವು ತೀವ್ರ ಆರ್ಥಿಕ ಕುಸಿತ, ನಿರುದ್ಯೋಗ, ಹಣದುಬ್ಬರ ಮತ್ತಿತರ ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಇವುಗಳಿಗೆ ಪರಿಹಾರ ಹುಡುಕುವ ಬದಲಿಗೆ ಸರ್ಕಾರ ಬೇಡವಾಗಿರುವ ವಿಚಾರಗಳಿಗೆ ಮಹತ್ವ ಕೊಟ್ಟು ಸರ್ಕಾರಿ ಹಣವನ್ನು ಪೋಲು ಮಾಡುತ್ತಿದೆ ಎಂದು ಪ್ರತಿ ಹಂತದಲ್ಲೂ ಸರ್ಕಾರದ ವರ್ತನೆಯನ್ನು ತರಾಟೆಗೆ ತೆಗೆದುಕೊಂಡರು.

error: Content is protected !! Not allowed copy content from janadhvani.com