janadhvani

Kannada Online News Paper

ಕರೋನವೈರಸ್ ತಡೆಗಟ್ಟಲು ಗಲ್ಫ್ ರಾಷ್ಟ್ರಗಳ ತುರ್ತು ಸಭೆ

ದುಬೈ: ಕರೋನವೈರಸ್ ಕುರಿತ ಆತಂಕವನ್ನು ಚರ್ಚಿಸಲು ಸೌದಿ ಅರೇಬಿಯಾ ತುರ್ತು ಸಭೆ ಕರೆದಿದ್ದು, ಕೊಲ್ಲಿ ದೇಶಗಳ ಆರೋಗ್ಯ ಸಚಿವರು ಭಾಗವಹಿಸಿದ್ದರು.

ಜಿಸಿಸಿ ಜನರಲ್ ಸೆಕ್ರಟ್ಟರಿಯೇಟ್‌ನ ಪ್ರಧಾನ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಆರೋಗ್ಯ ಮತ್ತು ರಕ್ಷಣಾ ಸಚಿವ ಅಬ್ದುರ್ರಹ್ಮಾನ್ ಬಿನ್ ಮುಹಮ್ಮದ್ ಬಿನ್ ನಾಸರ್ ಅಲ್-ಓವೈಸ್ ಭಾಗವಹಿಸಿದ್ದರು. ಕರೋನವೈರಸ್ ಸೋಂಕಿನ ವಿರುದ್ಧ ಯುಎಇ ಕೈಗೊಂಡ ಪರಿಣಾಮಕಾರಿ ಕ್ರಮಗಳನ್ನು ಕೊಲ್ಲಿ ಆರೋಗ್ಯ ಸಚಿವರುಗಳು ಶ್ಲಾಘಿಸಿದರು.

ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದ ಅಂತರ್‌ರಾಷ್ಟ್ರೀಯ ಆರೋಗ್ಯ ನಿಯಮಗಳಿಗೆ ಅನುಸಾರವಾಗಿ ವೈರಸ್ ವಿರುದ್ಧ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವರುಗಳು ಖಚಿತಪಡಿಸಿದ್ದಾರೆ. 2018 ರ ಡಿಸೆಂಬರ್‌ನಲ್ಲಿ ರಿಯಾದ್‌ನಲ್ಲಿ ನಡೆದ 39ನೇ ಶೃಂಗಸಭೆಯಲ್ಲಿ ಅಂಗೀಕರಿಸಲಾದ ಏಕೀಕೃತ ಆರೋಗ್ಯ ವಿಧಾನಗಳನ್ನು ಜಾರಿಗೆ ತರಲು ನಿರ್ಧರಿಸಲಾಯಿತು. ಪ್ರತಿ ದೇಶಗಳಲ್ಲಿ ಪ್ರಸ್ತುತ ಸ್ಥಿತಿಗತಿಗಳು, ಕಾರ್ಯವಿಧಾನಗಳು ಮತ್ತು ರೋಗ ತಡೆಗಟ್ಟುವಿಕೆಯ ಸಿದ್ಧತೆಗಳನ್ನು ಸಭೆಯಲ್ಲಿ ಪರಿಶೀಲಿಸಲಾಯಿತು.

ವಿಮಾನ ನಿಲ್ದಾಣಗಳಿಗೆ ಆಗಮಿಸುವವರ ಪರಿಶೋಧನೆ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು. ಜಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ನೈಫ್ ಬಿನ್ ಫಲಾಹ್ ಅಲ್-ಹಜ್ರಫ್ ಅವರ ಕೋರಿಕೆಯ ಮೇರೆಗೆ ಈ ಸಭೆ ನಡೆಯಿತು.

ಯುಎಇಯಲ್ಲಿ, ಭಾರತೀಯ ವ್ಯಕ್ತಿ ಸೇರಿದಂತೆ ಒಂಬತ್ತು ಜನರಿಗೆ ಕರೋನವೈರಸ್ ಇರುವುದು ಪತ್ತೆಯಾಗಿದೆ. ಅವರ ಪೈಕಿ ಆರೋಗ್ಯ ಸ್ಥಿತಿ ಸುಧಾರಿಸಿದ ಬಳಿಕ ಮೂವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಭಾರತೀಯ ನಾಗರಿಕನ ಸ್ಥಿತಿಯು ತೃಪ್ತಿಕರವಾಗಿದೆ ಎಂದು ಆರೋಗ್ಯ ಮತ್ತು ರಕ್ಷಣಾ ಸಚಿವಾಲಯ ತಿಳಿಸಿದೆ.

error: Content is protected !! Not allowed copy content from janadhvani.com