janadhvani

Kannada Online News Paper

ಜಿದ್ದಾ ಮತ್ತು ಮಕ್ಕಾದಲ್ಲಿ ಅಕ್ರಮ ವಲಸಿಗರನ್ನು ಗುರಿಯಾಗಿಸಿ ತೀವ್ರ ತಪಾಸಣೆ ಮುಂದುವರಿಕೆ

ರಿಯಾದ್: ಸೌದಿ ಅರೇಬಿಯಾದ ಜಿದ್ದಾ ಮತ್ತು ಮಕ್ಕಾದಲ್ಲಿ ವಾಸ, ಉದ್ಯೋಗ ಕಾನೂನು ಉಲ್ಲಂಘನೆಗಾರರ ಪತ್ತೆ ಹಚ್ಚುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಬಂಧನಕ್ಕೊಳಗಾದ 500 ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ಮಕ್ಕಾದ ಗಡೀಪಾರು ಕೇಂದ್ರಕ್ಕೆ ರವಾನಿಸಲಾಗಿದೆ. ಅವರನ್ನು ಆದಷ್ಟು ಬೇಗ ಊರಿಗೆ ತಲುಪಿಸಲಾಗುವುದು ಎಂದು ಭಾರತೀಯ ದೂತಾವಾಸ ಕೇಂದ್ರ ತಿಳಿಸಿದೆ.

ಕಾನೂನು ಉಲ್ಲಂಘಕರಿಲ್ಲದ ದೇಶ ಎನ್ನುವ ಅಭಿಯಾನದ ಭಾಗವಾಗಿ ಸೌದಿ ಅರೇಬಿಯಾದ ವಿವಿಧ ಭಾಗಗಳಲ್ಲಿ ತಪಾಸಣೆ ಮುಂದುವರೆದಿದೆ. ಜಿದ್ದಾ ಮತ್ತು ಮಕ್ಕಾದಲ್ಲಿ ತೀವ್ರ ತಪಾಸಣೆಯನ್ನು ನಡೆಸಲಾಗುತ್ತಿದೆ. ಡಿಸೆಂಬರ್ ಅಂತ್ಯದ ವೇಳೆಗೆ, ಎರಡು ವರ್ಷಗಳಲ್ಲಿ 44 ಲಕ್ಷಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ. ಈ ಅಭಿಯಾನದಲ್ಲಿ ಕಾರ್ಮಿಕ ಮತ್ತು ಸಾಮಾಜಿಕ ವ್ಯವಹಾರಗಳ ಸಚಿವಾಲಯ, ಜವಾಝಾತ್ ವಿಭಾಗ ಸೇರಿದಂತೆ 19 ಸಚಿವಾಲಯಗಳು ಮತ್ತು ಸರಕಾರಿ ಇಲಾಖೆಗಳು ಸೇರಿವೆ.

ತಪಾಸಣೆಯು ವಸತಿ ಮತ್ತು ಉದ್ಯೋಗ ಕಾನೂನು ಉಲ್ಲಂಘಿಸುವವರನ್ನು ಗುರಿಯಾಗಿಸಿರುತ್ತದೆ. ಉಲ್ಲಂಘಿಸುವವರಿಗೆ ಉದ್ಯೋಗ, ಪ್ರಯಾಣ ಮತ್ತು ವಸತಿ ನೆರವು ನೀಡುವುದು ಕೂಡ ಅಪರಾಧವಾಗಿದೆ. ಮಕ್ಕಾ ಶುಮೈಸಿ ತರ್ಹೀಲ್‌ನಲ್ಲಿ ಪ್ರಸ್ತುತ 500 ಕ್ಕೂ ಹೆಚ್ಚು ಭಾರತೀಯರಿದ್ದು, ಅವರ ಪೈಕಿ 150 ಕ್ಕೂ ಹೆಚ್ಚು ಜನರ ಪ್ರಯಾಣದ ದಾಖಲೆಗಳು ಸರಿಯಾಗಿವೆ ಮತ್ತು ಉಳಿದ ಪ್ರಯಾಣಿಕರ ದಾಖಲೆಗಳನ್ನು ಸರಿಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಜಿದ್ದಾದ ಭಾರತೀಯ ದೂತಾವಾಸ ತಿಳಿಸಿದೆ.

ಲೆವಿ ಪಾವತಿಯಿಂದ ತಪ್ಪಿಸಲು ಹೌಸ್ ಡ್ರೈವರ್ ವಿಸಾದಲ್ಲಿ ಬಂದು ಇತರ ಕೆಲಸದಲ್ಲಿ ತೊಡಗಿಸಿಕೊಳ್ಳುವ ಕಾರ್ಮಿಕರನ್ನು ಈಗಾಗಲೇ ಬಂಧಿಸಲಾಗಿದೆ.

error: Content is protected !! Not allowed copy content from janadhvani.com