janadhvani

Kannada Online News Paper

ಆದರ್ಶವನ್ನು ಅಡವಿಟ್ಟುಕೊಂಡಿರುವ ಐಕ್ಯತೆಯಲ್ಲ! ಇದು ರಾಷ್ಟ್ರ ರಕ್ಷಣೆಗಾಗಿ ಮಾತ್ರ..

ವೈವಿದ್ಯತೆಗಳ ಭಾರತದಲ್ಲಿ ಏಕತೆಯ ಹೋರಾಟ ಯಶಸ್ವಿಯಾಗಲಿ…

✍ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ
(ಉಪಾಧ್ಯಕ್ಷ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)

ರಾಷ್ಟ್ರದಾದ್ಯಂತ ಪ್ರತಿಭಟನೆಗಳು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇದೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ಸಂವಿಧಾನ ವಿರೋಧಿ ಕಾಯ್ದೆಯ ವಿರುದ್ಧ ಮನುಷ್ಯ ಶಕ್ತಿಗಳು ಒಗ್ಗಟ್ಟಾಗಿ ಬೀದಿಯಲ್ಲಿವೆ. ರಾಷ್ಟ್ರವನ್ನು ವಿಭಜಿಸುವ, ದೇಶದ ಜಾತ್ಯತೀತ ಪರಂಪರೆಗೆ ಮಾರಕವಾದ ಈ ಕಾಯ್ದೆಯ ವಿರುದ್ಧ ಜಾತ್ಯತೀತ ಶಕ್ತಿಗಳು ಒಂದಾಗಲೇ ಬೇಕಾದ ಅನಿವಾರ್ಯತೆ ಇದೆ. ಆದ್ದರಿಂದಲೇ ಧರ್ಮ ಜಾತಿ ಪಕ್ಷ ಪಂಥಗಳ ವ್ಯತ್ಯಾಸವಿಲ್ಲದೆ ಎಲ್ಲರೂ ಒಂದೇ ವೇದಿಕೆಯಲ್ಲಿ ಒಂದೇ ಧ್ವನಿಯಲ್ಲಿ ಇದನ್ನು ಖಂಡಿಸುತ್ತಿದ್ದಾರೆ. ಇದು ಕಾಲದ ಅನಿವಾರ್ಯವೂ ಕೂಡ..

ಆದರೆ ಈ ಸಂದರ್ಭವನ್ನೇ ಬಳಸಿಕೊಂಡು ತಮ್ಮ ಪಕ್ಷ, ಸಂಘಟನೆ, ಸಿದ್ದಾಂತಗಳನ್ನು ಬೆಳೆಸಲು ಹೊರಟಿರುವ ಕೆಲವು ಸಮಯ ಸಾಧಕರ ಬಗ್ಗೆಯೂ ನಾವು ಜಾಗರೂಕರಾಗಬೇಕಿದೆ. ಅದು ಯಾವ ಪಕ್ಷವಾಗಲಿ ಸಿದ್ದಾಂತವಾಗಲಿ ವ್ಯಕ್ತಿಗಳಾಗಲಿ ಖಂಡಿತವಾಗಿಯೂ ಇದು ಅಕ್ಷಮ್ಯ! ಇದರಿಂದ ನಮಗೆ ನಮ್ಮ ಗುರಿಯತ್ತ ತಲುಪಲು ತುಂಬಾನೇ ಕಷ್ಟ.

ಮೊನ್ನೆ ಗಂಗಾವತಿಯಲ್ಲಿ ಪ್ರತಿಭಟನಾ ವೇದಿಕೆಯಲ್ಲಿ ಈ ಸಮರದಲ್ಲಿ ಮುಂಚೂಣಿಯಲ್ಲೇ ಇರುವ ಮಹೇಂದ್ರ ಕುಮಾರ್ ಸರ್ ಜೊತೆಯಲ್ಲಿದ್ದರು. ಅವರು ಮಾತನಾಡುತ್ತಾ ಹೇಳಿದರು “ಕೆಲವರು ಈ ಹೋರಾಟದ ದಿಕ್ಕು ತಪ್ಪಿಸುತ್ತಿದ್ದಾರೆ. ಹಲವರು ಅವರ ಪಕ್ಷ ಸಂಘಟನೆ ಅಥವಾ ವೈಯಕ್ತಿಕ ವರ್ಚಸ್ಸು ಹೆಚ್ಚಿಸಲು ಬೇಕಾಗಿ ಮಾತ್ರ ಗಮನಹರಿಸುತ್ತಿದ್ದಾರೆ. ನಮ್ಮ ಈ ಹೋರಾಟವೆಲ್ಲಾ ಇದರಿಂದಾಗಿ ವ್ಯರ್ಥವಾಗುತ್ತಿದೆ.” ಹೌದು ಇದು ರಾಷ್ಟ್ರ ರಕ್ಷಣೆಗಾಗಿರುವ ಹೋರಾಟ ಇದರಲ್ಲಿ ಸ್ವಾರ್ಥಕ್ಕೆ ಒಂದಲ್ಪವೂ ಜಾಗವಿರಕೂಡದು.

ಅಂದಹಾಗೆ ಮೊನ್ನೆ ಒಬ್ಬರು ಹೇಳಿದರು “ಈಗೆಲ್ಲಾ ಒಂದಾಗಿದೆಯಲ್ವಾ ಉಸ್ತಾದ್?” ಎಂದು. ನಾನು ಹೇಳಿದೆ ಹೌದು ರಾಷ್ಟ್ರ ರಕ್ಷಣೆಗಾಗಿ ಸಾರ್ವಜನಿಕ ವೇದಿಕೆಗಳಲ್ಲಿ ನಾವು ಒಂದಾಗಿ ಕುಳಿತು ಶಕ್ತಿ ಪ್ರದರ್ಶನ ಮಾಡಿದ್ದೇವೆ. ಅಗತ್ಯ ಬಂದರೆ ಇನ್ನೂ ಮಾಡುತ್ತೇವೆ. ಆದರೆ ಆದರ್ಶವನ್ನು ಅಡವಿಟ್ಞುಕೊಂಡು ಐಕ್ಯತೆ ಇಲ್ಲವೇ ಇಲ್ಲ! ಅದರಲ್ಲಿ ಬರಕತ್ತೂ ಇರಲ್ಲ.

ಹೌದು ಅಹ್ಲುಸ್ಸುನ್ನಃ! ಅದು ನಮ್ಮ ಜೀವಾಳ. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಂ ರವರು ಸ್ವಹಾಬಿಗಳಿಗೆ ಕಲಿಸಿಕೊಟ್ಟ ಆದರ್ಶ ಅದು ತಾಬಿಈನ್‌ಗಳ ತಬಉತ್ತಾಬಿಈನ್‌ಗಳ, ಅಇಮ್ಮತುಲ್ ಮುಜ್ತಹಿದೀನ್‌ಗಳ, ಸಚ್ಚರಿತ ಸಾತ್ವಿಕ ಸಜ್ಜನ ಸದ್ಭಕ್ತರ ಮೂಲಕ ಹಾದು ಬಂದು ನಮ್ಮ ಉಲಮಾಗಳ ಮೂಲಕ ನಮ್ಮ ಕೈ ತಲುಪಿರುವ ಕಳಂಕ ರಹಿತ ಪವಿತ್ರ ಪರಂಪರೆಯುಳ್ಳ ನೈಜ್ಯ ಇಸ್ಲಾಮಿನ ಹಾದಿಯ ಹೆಸರಾಗಿದೆ ಅಹ್ಲುಸ್ಸುನ್ನಃ! ಇದಕ್ಕೆ ಒಂದು ಆದರ್ಶವಿದೆ. ಅದನ್ನು ನಮ್ಮ ಉಲಮಾಗಳು ಸ್ಪಷ್ಟವಾಗಿ ನಮಗೆ ಕಲಿಸಿಕೊಟ್ಟಿದ್ದಾರೆ. ಆ ಹಾದಿಯಲ್ಲಲ್ಲದೆ ನೈಜ್ಯ ಸತ್ಯವಿಶ್ವಾಸಿಗೆ ಸಂಚರಿಸಲು ಸಾಧ್ಯವೇ ಇಲ್ಲ.

ಹಬೀಬ್ ಸಲ್ಲಲ್ಲಾಹು ಅಲೈಹಿವಸಲ್ಲಂ ಸಾಮಾನ್ಯರೆಂದೂ ಅವರ ಸ್ವಹಾಬಿಗಳು ಧರ್ಮದಲ್ಲಿ ಕಳಂಕಗಳನ್ನು ಸೇರಿಸಿದವರೆಂದೂ, ಔಲಿಯಾಗಳು ನಕಲಿಯೆಂದೂ ವಿಶ್ವಾಸವಿಟ್ಟು ನಡೆಯುವ ಬಿದಈಯೊಂದಿಗೆ ಯಾವ ಕಾಲಕ್ಕೂ ಎಂತಹಾ ಸನ್ನಿವೇಶದಲ್ಲೂ ಐಕ್ಯತೆ ಅಸಾಧ್ಯ!! ಇದು ಅಹ್ಲುಸ್ಸುನ್ನಃದ ಸ್ಪಷ್ಟ ನಿಲುವಾಗಿದೆ. ಇದು ನನ್ನ ಮಾತ್ರ ಅಭಿಪ್ರಾಯವಲ್ಲ ಇದು ನಮ್ಮ ಎಲ್ಲಾ ಊಲಮಾಗಳ ಅಭಿಪ್ರಾಯವೂ ಕೂಡ.

ಇನ್ನು ಅಹ್ಲುಸ್ಸುನ್ನಃದ ಆದರ್ಶದಲ್ಲೇ ತಳವೂರಿನಿಂತಿರುವ ಯಾವುದೇ ಸಂಘಟನೆ ಇರಲಿ ನಮಗೆ ಐಕ್ಯತೆ ಆಗಬಹುದಾಗಿದೆ! ಇದರ ಬಗ್ಗೆ ನಮ್ಮ ಉಲಮಾಗಳು ಚರ್ಚಿಸಿದ್ದಾರೆ. ಅದಕ್ಕೆ ಬೇಕಾಗಿ ಒಂದೊಂದೇ ಹೆಜ್ಜೆ ಮುಂದಡಿಯಿಡುತ್ತಿದ್ದಾರೆ… ಈ ಸುನ್ನೀ ಐಕ್ಯ ಇನ್ನಷ್ಟು ಶೀಘ್ರವಾಗಿ ನಡೆಯಲಿ ಎಂಬುವುದೇ ನಮ್ಮೆಲ್ಲರ ಆಸೆ.

ಕಾರ್ಯಕರ್ತರೇ.. ಎಲ್ಲದಕ್ಕೂ ನಮಗೆ ನೇತೃತ್ವವಿದೆ. ಅದು ಸರಿಸಾಟಿಯಿಲ್ಲದ ನೇತೃತ್ವ! ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಹ್ಲುಸ್ಸುನ್ನಃದ ಆದರ್ಶವನ್ನು ಎತ್ತಿ ಹಿಡಿದ ನೇತೃತ್ವ. ಸಹಸ್ರಾರು ಅನಾಥ ನಿರ್ಗತಿಕರ ಸಂರಕ್ಷಕ, ಲಕ್ಷಾಂತರ ಉಲಮಾಗಳ ಉಸ್ತಾದುಲ್ ಅಸಾತೀದ್, ಪ್ರಧಾನ ಮಂತ್ರಿ ರಾಷ್ಟ್ರಪತಿಗಳಿಂದ ಹಿಡಿದು ರಾಜ್ಯಪಾಲ, ಮುಖ್ಯಮಂತ್ರಿಯವರೆಗೆ ಎಲ್ಲರೊಂದಿಗೆ ಸಮುದಾಯದ ಸಮಸ್ಯೆಗಳನ್ನು ಸಮರ್ಥವಾಗಿ ಮಂಡಿಸಲು ಸಾಮರ್ಥ್ಯವುಳ್ಳ ಸುಲ್ತಾನ್! ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ (ತವ್ವಲಲ್ಲಾಹು ಉಮ್ರಹೂ) ಅವರು ಆಡಿದ ಮಾತುಗಳು ಹಿಂತೆಗೆಯ ಬೇಕಾಗಿ ಬಂದ ಇತಿಹಾಸವಿಲ್ಲ, ಮಾಡಿದ ಸಾಧನೆಗಳು ಹೊಗಳದವರಿಲ್ಲ ಆ ನೇತೃತ್ವದ ಒಟ್ಟಿಗೆ ಸಹಸ್ರಾರು ಅಹ್ಲ್‌ಬೈತಿನ ಶಕ್ತಿಯಿದೆ ಉಲಮಾ ಉಮರಾ ಪಡೆಯ ಯುಕ್ತಿಯಿದೆ, ಸಜ್ಜನ ಸಾತ್ವಿಕರ ಆಶಿರ್ವಾದವಿದೆ!! ಈ ಶಕ್ತಿ ನಮ್ಮ ಜೊತೆಯಲ್ಲಿ ಇರುವಾಗ ಕುಗ್ಗಿ ಜಗ್ಗಿ ತಗ್ಗಿ ಬಗ್ಗಿ ನಡೆಯಬೇಕಾಗಿಲ್ಲ. ಎದೆಯುಬ್ಬಿಸಿ ಮುಂದೆ ಸಾಗಬಹುದು.

ಆ ನೇತೃತ್ವ ಯಾವ ಸಂಘಟನೆ, ಸಿದ್ದಾಂತ, ಪಕ್ಷಗಳೊಂದಿಗೆ ಅಂತರ ಕಾಯ್ದುಕೊಳ್ಳಬೇಕೆಂದು ನಮ್ಮೊಂದಿಗೆ ಹೇಳಿಕೊಟ್ಟಿದೆಯೋ ಅದು ನಾವೆಂದೂ ಪಾಲಿಸಿದ್ದೇವೆ, ಇನ್ನೂ ಪಾಲಿಸುತ್ತೇವೆ. ಆದರ್ಶವನ್ನು ಅಡವಿಟ್ಟು ಐಕ್ಯತೆಯಿಲ್ಲ ಆದರೆ ನಮ್ಮ ರಾಷ್ಟ್ರ ರಕ್ಷಣೆಗಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಎಲ್ಲರೊಂದಿಗೆ ನಾವು ಮುಂಚೂಣಿಯಲ್ಲಿದ್ದೇವೆ… ನಮ್ಮ ಕಾರ್ಯಕರ್ತರು ಯಾವತ್ತೂ ಪ್ರಬುಧ್ಧರು ಹಾಗೂ ಪಕ್ವತೆಯುಳ್ಳವರು!!

error: Content is protected !! Not allowed copy content from janadhvani.com