janadhvani

Kannada Online News Paper

NRC: ಅಸ್ಸಾಮಿನ ದಿಗ್ಬಂಧನ ಕೇಂದ್ರದಲ್ಲಿ ಕೊಳೆಯುತ್ತಿರುವ 54 ವರ್ಷದ ಅಸ್ಗರ್ ಅಲಿ

ಕೋಲ್ಕತಾ,ಫೆ.17:ಅಸ್ಸಾಮಿನಲ್ಲಿ ಜಾರಿಗೆ ತರಲಾಗಿದ್ದ, ದೋಷಪೂರಿತ ಎನ್‌ಆರ್‌ಸಿಯಲ್ಲಿ ಹೆಸರಿಲ್ಲದ್ದಕ್ಕಾಗಿ 2017,ಜು.14ರಿಂದಲೂ ಅಸ್ಸಾಮಿನ ಗೋಲಪಾರಾದ ದಿಗ್ಬಂಧನ ಕೇಂದ್ರದಲ್ಲಿ ಕೊಳೆಯುತ್ತಿರುವ ಅಸ್ಗರ್ ಅಲಿ (54) ತನ್ನ ಬಂಧನದ ಅವಧಿಯನ್ನು ಪೂರೈಸಿದ ಬಳಿಕವೂ ಅವರನ್ನು ಬಿಡುಗಡೆಗೊಳಿಸದಿದ್ದರೆ ಉಪವಾಸ ಮುಷ್ಕರವನ್ನು ನಡೆಸುವುದಾಗಿ ಕುಟುಂಬವು ಬೆದರಿಕೆಯೊಡ್ಡಿದೆ.

ಫೆ.15ರಂದು ಸಂಬಂಧಿ ಝಿಶಾನ್ ಅಸ್ಗರ್‌ರನ್ನು ಭೇಟಿಯಾಗಲು ದಿಗ್ಬಂಧನ ಕೇಂದ್ರಕ್ಕೆ ತೆರಳಿದ್ದ. ತಮ್ಮ ಮೂರು ವರ್ಷಗಳ ಬಂಧನದ ಅವಧಿಯನ್ನು ಪೂರ್ಣಗೊಳಿಸಿರುವ ಕೆಲವರನ್ನು ದಾಖಲೆಗಳ ವಿವಾದದಿಂದಾಗಿ ಇನ್ನೂ ಬಿಡುಗಡೆಗೊಳಿಸಿಲ್ಲ ಎಂದು ಈ ಸಂದರ್ಭದಲ್ಲಿ ಅಸ್ಗರ್ ಆತಂಕ ವ್ಯಕ್ತಪಡಿಸಿದ್ದರು.

ಎನ್‌ಆರ್‌ಸಿ ದತ್ತಾಂಶಗಳನ್ನು ತಿರುಚಿದ ಮತ್ತು ಹಣ ದುರುಪಯೋಗ ಆರೋಪದಲ್ಲಿ ಮಾಜಿ ಎನ್‌ಆರ್‌ಸಿ ಸಮನ್ವಯಕಾರ ಪ್ರತೀಕ ಹಜೇಲಾ ವಿರುದ್ಧ ನ್ಯಾಯಾಲಯದಲ್ಲಿ ಐದು ಎಫ್‌ಐಆರ್‌ಗಳು ದಾಖಲಾಗಿರುವ ಸಂದರ್ಭದಲ್ಲಿಯೇ ಈ ಆಪಾದನೆ ಕೇಳಿಬಂದಿದೆ.

‘ಅಸ್ಗರ್ ತೀವ್ರ ಆತಂಕಗೊಂಡಿದ್ದಾರೆ ಮತ್ತು ಅವರ ಮಾನಸಿಕ ಆರೋಗ್ಯವೂ ಸರಿಯಾಗಿಲ್ಲ ಎಂದು ಗೋಲಪಾರಾ ಕೇಂದ್ರದಲ್ಲಿರುವ ಇನ್ನೋರ್ವ ಬಂದಿಯ ಸಂಬಂಧಿ ನನಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಅಸ್ಗರ್ ನನ್ನನ್ನು ಆಲಂಗಿಸಿಕೊಳ್ಳಲು ಬಯಸಿದ್ದರು,ಆದರೆ ಅದಕ್ಕೆ ಅಲ್ಲಿ ಅವಕಾಶವಿರಲಿಲ್ಲ. ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅವರು ತನ್ನನ್ನು ಬಂಧನದಿಂದ ಬಿಡುಗಡೆಗೊಳಿಸುವಂತೆ ನನ್ನನ್ನು ಕೇಳಿಕೊಳ್ಳುತ್ತಿದ್ದರು.

ತನ್ನ ಬಿಡುಗಡೆ ಯಾಗದಿದ್ದರೆ ತನ್ನ ಹೆತ್ತವರು ಮೃತಪಟ್ಟಾಗ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸುವಂತೆ ಅವರು ನನ್ನನ್ನು ಕೋರಿಕೊಂಡಿದ್ದರು. ಬಿಡುಗಡೆಯಾಗುತ್ತದೆ ಮತ್ತು ಆ ಬಗ್ಗೆ ಚಿಂತಿಸಬೇಡಿ ಎಂದು ನಾನು ಭರವಸೆ ನೀಡಿದ್ದೇನೆ. ಅಸ್ಸಾಮಿನ ದಿಗ್ಬಂಧನ ಕೇಂದ್ರದಲ್ಲಿ ಮೂರು ವರ್ಷ ಪೂರೈಸಿದವರನ್ನು ಬಿಡುಗಡೆಗೊಳಿಸುವಂತೆ ಸರ್ವೊಚ್ಚ ನ್ಯಾಯಾಲಯದ ಆದೇಶವೊಂದೇ ಈಗ ನಮ್ಮ ಪಾಲಿನ ಏಕೈಕ ಆಶಾಕಿರಣವಾಗಿದೆ ’ ಎಂದು ಝಿಶಾನ್ ಸುದ್ದಿಗಾರರಿಗೆ ತಿಳಿಸಿದರು.

error: Content is protected !! Not allowed copy content from janadhvani.com