janadhvani

Kannada Online News Paper

3ನೇ ಬಾರಿಗೆ ದೆಹಲಿ ಸಿಎಮ್ ಆಗಿ ಅರವಿಂದ್​ ಕೇಜ್ರಿವಾಲ್​ ಇಂದು ಪ್ರಮಾಣವಚನ

ನವದೆಹಲಿ,ಫೆ.16: ಮೂರನೇ ಬಾರಿಗೆ ದೆಹಲಿ ಸಿಎಮ್ ಆಗಿ ಆಪ್​ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಳೆದ 5 ವರ್ಷಗಳಿಂದ ದೆಹಲಿ ಅಭಿವೃದ್ದಿಗೆ ಶ್ರಮಿಸಿರುವ 50 ಮಂದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಜೊತೆಗೆ ದೆಹಲಿಯ ಬಿಜೆಪಿ ಸಂಸದರು ಮತ್ತು ಶಾಸಕರಿಗೂ ಸಹ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಇನ್ನುಳಿದ ಯಾವ ರಾಜ್ಯದ ಮುಖ್ಯಮಂತ್ರಿಗಳು ಅಥವಾ ರಾಜಕೀಯ ನಾಯಕರಿಗೂ ಆಮ್​ ಆದ್ಮಿ ಪಕ್ಷ ಆಮಂತ್ರಣ ನೀಡಿಲ್ಲ.

ಅಂತರಾಷ್ಟ್ರೀಯ ಟೆನ್ನಿಸ್​ ಆಟಗಾರ ಸುಮಿತ್​ ನಾಗಲ್, ದೆಹಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿ ಮತ್ತು ಜೈ ಭೀಮ್​ ಮುಖ್ಯಮಂತ್ರಿ ಪ್ರತಿಭಾ ವಿಕಾಸ್ ಯೋಜನೆಯ ಫಲಾನುಭವಿ ಐಐಟಿ ವಿಜಯ್ ಕುಮಾರ್, ಮೊಹಲ್ಲಾ ಕ್ಲಿನಿಕ್ ವೈದ್ಯ ಅಲ್ಕಾ, ಬೈಕ್​ ಆ್ಯಂಬುಲೆನ್ಸ್​ ಸೇವೆಯ ಅಧಿಕಾರಿ ಯುಧಿಷ್ಠಿರ್ ರಥೀ ಇನ್ನೂ ಮೊದಲಾದವರನ್ನು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇಂದು ಸಂಜೆ ಸಿಎಂ ಕೇಜ್ರಿವಾಲ್​ ಭೋಜನವನ್ನು ಏರ್ಪಡಿಸಿದ್ದಾರೆ. ಈ ವೇಳೆ ಮಂತ್ರಿಗಳ ಜೊತೆ ದೆಹಲಿ ಅಭಿವೃದ್ಧಿ ಕುರಿತು ಚರ್ಚಿಸಲಿದ್ದಾರೆ.

ರಾಮಲೀಲಾ ಮೈದಾನದಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವೈವಿಧ್ಯಮಯ ಹೂವುಗಳಿಂದ ವೇದಿಕೆಯನ್ನು ಅಲಂಕರಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮೈದಾನದಲ್ಲಿ ಪೊಲೀಸ್​ ಬಿಗಿ ಭದ್ರತೆ ವಹಿಸಲಾಗಿದೆ.ದೆಹಲಿ ಪೊಲೀಸ್, ಸಿಆರ್​ಪಿಎಫ್​​ ಮತ್ತು ಪ್ಯಾರಾ ಮಿಲಿಟರಿಯ 2-3 ಸಾವಿರ ಭದ್ರತಾ ಸಿಬ್ಬಂದಿಯನ್ನು ರಾಮ್​ಲೀಲಾ ಮೈದಾನದ ಸುತ್ತ ನಿಯೋಜಿಸಲಾಗಿದೆ.

error: Content is protected !! Not allowed copy content from janadhvani.com