janadhvani

Kannada Online News Paper

ದೆಹಲಿಯಲ್ಲಿ 3ನೇ ಬಾರಿಗೂ (ಎಎಪಿ) ಸರ್ಕಾರ- ಕೇಜ್ರಿವಾಲ್ ವಿಶ್ವಾಸ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಪ್ರಗತಿಯಲ್ಲಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕುಟುಂಬದೊಂದಿಗೆ ಸಿವಿಲ್ ಲೈನ್ಸ್‌ನ ಮತಗಟ್ಟೆಯೊಂದರಲ್ಲಿ ಹಕ್ಕು ಚಲಾಯಿಸಿದರು.ತಮ್ಮ ಪತ್ನಿ ಸುನೀತಾ ಮತ್ತು ಪ್ರಥಮ ಬಾರಿ ಮತ ಚಲಾಯಿಸಲು ಅರ್ಹತೆ ಪಡೆದಿರುವ ಪುತ್ರ ಪುಳಕಿತ್ ಅವರೊಂದಿಗೆ ಹಕ್ಕು ಚಲಾಯಿಸಿದ ನಂತರ ಕೇಜ್ರಿವಾಲ್ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಸರ್ಕಾ‍ರದ ಪ್ರಗತಿ ಪರ ಕಾರ್ಯಗಳನ್ನು ಪರಿಗಣಿಸಿ ಜನರು ಮತ ಚಲಾಯಿಸುತ್ತಾರೆ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ದೆಹಲಿಯಲ್ಲಿ ಮೂರನೇ ಬಾರಿಗೆ ಸರ್ಕಾರ ರಚಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಗಣ್ಯಾತಿಗಣ್ಯರ ಮತದಾನ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯವರು ನಿರ್ಮಲ ಭವನದಲ್ಲಿ ಇಂದು ಮತ ಚಲಾಯಿಸಿದರು. ಕಳೆದ ವಾರವಷ್ಟೇ ಅನಾರೋಗ್ಯದಿಂದ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ತೆರಳಿ ವಿಶ್ರಾಂತಿಯಲ್ಲಿದ್ದ ಸೋನಿಯಾ ಇಂದು ಬೆಳಗ್ಗೆ ತಮ್ಮ ಪುತ್ರಿ ಪ್ರಿಯಾಂಕಾಗಾಂಧಿ ವಾದ್ರಾ ಅವರ ನೆರವಿನೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ಔರಂಗಜೇಬ್ ನಗರದ ಎನ್.ಪಿ. ಸೆಕೆಂಡರಿ ಸ್ಕೂಲ್ ಮತಗಟ್ಟೆಯಲ್ಲಿ ರಾಹುಲ್‍ಗಾಂಧಿ ಮತ ಚಲಾವಣೆ ಮಾಡಿದರು. ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಬಿಜೆಪಿ ನಾಯಕ ರಾಮ್‍ಲಾಲ್ ಸೇರಿದಂತೆ ಅನೇಕ ಗಣ್ಯಾತಿ ಗಣ್ಯರು ಮತ ಚಲಾಯಿಸಿದ್ದಾರೆ. ದೆಹಲಿಯ ಸಿ.ಆರ್.ಪಾರ್ಕ್ ಪ್ರದೇಶದ ಮತಗಟ್ಟೆಯೊಂದರಲ್ಲಿ 111 ವರ್ಷದ ಕಾಳಿತಾರ ಮಂಡಲ್ ಎಂಬ ಶತಾಯುಷಿ ಮಹಿಳೆ ತಮ್ಮ ಮಗ, ಮೊಮ್ಮಕ್ಕಳು ಮತ್ತು ಕುಟುಂಬದ ಸದಸ್ಯರೊಂದಿಗೆ ಧಾವಿಸಿ ಮತ ಚಲಾಯಿಸಿದರು. ಮತದಾನ ಪವಿತ್ರ ಹಕ್ಕು. ಇದನ್ನು ಎಲ್ಲರೂ ಚಲಾಯಿಸಬೇಕು ಇದೇ ಸಂದರ್ಭದಲ್ಲಿ ಶತಾಯುಷಿ ಹೇಳಿದರು.

ಮಹಿಳೆಯರು ತಪ್ಪದೆ ಮತ ಚಲಾಯಿಸಿ:
ದೆಹಲಿ ವಿಧಾನಸಭಾ ಚುನಾವಣೆ ಪ್ರಗತಿಯಲ್ಲಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತ ಚಲಾಯಿಸುವಂತೆ ಆಮ್ ಆದ್ಮಿ ರಾಷ್ಟ್ರೀಯ ಸಂಚಾಲಕ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿಮಾಡಿದ್ದಾರೆ. “ನಿಮ್ಮ ಮನೆಯ ಜವಾಬ್ದಾರಿಯನ್ನು ನೀವು ಹೊತ್ತುಕೊಂಡಂತೆಯೇ, ದೇಶ ಮತ್ತು ದೆಹಲಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಿ. ಎಲ್ಲಾ ಮಹಿಳೆಯರು ಮತ ಚಲಾಯಿಸಲು ಹೋಗಬೇಕು ಮತ್ತು ಅವರ ಮನೆಯ ಪುರುಷರನ್ನು ಸಹ ಕರೆದೊಯ್ಯಬೇಕು” ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

error: Content is protected !! Not allowed copy content from janadhvani.com