ಶಿಕ್ಷೆಗೆ ಅರ್ಹವೆನಿಸಿದ ರಾಜಕಾರಣಿಗಳಿಗೆ ಟಿಕೆಟ್ ನೀಡದಂತೆ ಚುನಾವಣಾ ಆಯೋಗ ಮನವಿ

ನವದೆಹಲಿ:- ಶಿಕ್ಷೆಗೆ ಅರ್ಹವೆನಿಸಿದ ಹೀನಾಯ ಅಪರಾಧದಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ಆರೋಪಪಟ್ಟಿ ಸಲ್ಲಿಕೆಯಾಗಿ, ವಿಚಾರಣೆ ಎದುರಿಸುತ್ತಿರುವ ರಾಜಕಾರಣಿಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಲು, ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಅನ್ನು ಕೋರಿದೆ.

ಅಪರಾಧಿಗಳಿಂದ ರಾಜಕಾರಣವನ್ನು ಮುಕ್ತಗೊಳಿಸುವ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತವಾಗಿರುವ ಚುನಾವಣಾ ಆಯೋಗ, ಶಿಕ್ಷಾರ್ಹ ಅಪರಾಧದಲ್ಲಿ ಭಾಗಿಯಾಗಿ, ವಿಚಾರಣೆ ಎದುರಿಸುತ್ತಿರುವ ರಾಜಕಾರಣಿಗಳನ್ನು ಕನಿಷ್ಠ 5 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರುವ ಬಗ್ಗೆ ಸೂಕ್ತ ಕಾನೂನು ರಚನೆ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ನ್ನು ಕೋರಿದೆ.

ಹೀಗೆ ನಿಷೇಧ ಹೇರಲು ಈಗಿರುವ ಪ್ರಜಾಪ್ರತಿನಿಧಿ ಕಾಯ್ದೆಗೆ ಸಂಸತ್‌ನಲ್ಲಿ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದಿರುವ ಚುನಾವಣಾ ಆಯೋಗ, ಈ ಹಿಂದೆ 2004ರಲ್ಲಿಯೇ ರಾಜಕಾರಣವನ್ನು ಅಪರಾಧಿ ಹಿನ್ನೆಲೆಯವರಿಂದ ಮುಕ್ತಗೊಳಿಸಲು ಈಗಿನ ಕಾನೂನುಗಳಿಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರಕ್ಕೆ ತಾನು ಸೂಚಿಸಿದ್ದರೂ ಸರ್ಕಾರ ಆ ಸಂಬಂಧ ಕಾರ್ಯ ಪ್ರವೃತ್ತವಾಗಲಿಲ್ಲ ಎಂದೂ ಚುನಾವಣಾ ಆಯೋಗ ಹೇಳಿದೆ.

ಚುನಾವಣಾ ಆಯೋಗ ಕೋರಿರುವಂತೆ ಸಂಸತ್‌ನಲ್ಲಿ ಈಗಿನ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರಕ್ಕೆ ಸೂಚಿಸುವುದು ಸುಪ್ರೀಂಕೋರ್ಟಿಗೂ ಸುಲಭದ ಕೆಲಸವಲ್ಲ. ಇಲ್ಲಿ ಸಂವಿಧಾನಾತ್ಮಕ ಅಂಶಗಳು ತೊಡಕಾಗಲಿವೆ. ಹಾಗೆಯೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ತಿದ್ದುಪಡಿ ತರಲು ಕೇಂದ್ರ ಸರ್ಕಾರಕ್ಕೂ ಸಲ್ಲಿಸಿಲ್ಲ.

ಈಗಿರುವ ಪ್ರಜಾಪ್ರತಿನಿಧಿ ಕಾಯ್ದೆಯಂತೆ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದು, ವಿಚಾರಣಾ ನಂತರ ಅಪರಾಧಿ ಎಂದು ಘೋಷಣೆ ಮಾಡಿ ನ್ಯಾಯಾಲಯ ವಾದದಿಂದ ಎರಡು ವರ್ಷಗಳವರೆಗಿನ ಶಿಕ್ಷೆಗೆ ಗುರಿಯಾದ ರಾಜಕಾರಣಿಗಳನ್ನು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಬಹುದಾಗಿದೆ. ಹೀಗಾಗಿ ಹೀನಾಯ ಅಪರಾಧ ಮಾಡಿದ ಆರೋಪಿಗಳೂ ಶಿಕ್ಷೆಗೆ ಗುರಿಯಾಗುವವರೆವಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಾಗಿರುವುದೇ ರಾಜಕಾರಣದಲ್ಲಿ ಅಪರಾಧಗಳು ವಿಜೃಂಭಿಸಲು ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!