janadhvani

Kannada Online News Paper

ಬಜೆಟ್: ಪ್ರಧಾನಿಯ ಜೀವ ರಕ್ಷಣೆಗಾಗಿ 600 ಕೋಟಿ ಮೀಸಲು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೀವ ರಕ್ಷಣೆಗಾಗಿ 2020–21ನೇ ಆರ್ಥಿಕ ವರ್ಷದಲ್ಲಿ 600 ಕೋಟಿ ಮೀಸಲಿಡಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 540 ಕೋಟಿ ನೀಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೊಬ್ಬರಿಗೆ ಮಾತ್ರ ಪ್ರಸ್ತುತ 3000 ಮಂದಿಯ ಬಲಿಷ್ಠ ತಂಡ ಹೊಂದಿರುವ ಎಸ್‌ಪಿಜಿ (ಸ್ಪೆಷಲ್ ಸೆಕ್ಯುರಿಟಿ ಗ್ರೂಪ್) ರಕ್ಷಣೆ ಇದೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೊಡ್ಡಮಟ್ಟದಲ್ಲಿ ಜೀವ ಬೆದರಿಕೆ ಇರುವುದನ್ನು ಒಪ್ಪಿಕೊಂಡಿದ್ದ ಕೇಂದ್ರ ಸರ್ಕಾರವು ಈ ಹಿಂದೆ ಭದ್ರತಾ ಮಾರ್ಗಸೂಚಿಯನ್ನು ಪರಿಷ್ಕರಿಸಿತ್ತು. ಎಸ್‌ಪಿಜಿ ತಪಾಸಣೆಯ ನಂತರವೇ ಮೋದಿ ಅವರ ಸನಿಹಕ್ಕೆ ಸಚಿವರು ಮತ್ತು ಅಧಿಕಾರಿಗಳನ್ನು ಕಳುಹಿಸಲಾಗುತ್ತಿತ್ತು.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಈ ಹಿಂದೆ ನೀಡಲಾಗಿದ್ದ ಎಸ್‌ಪಿಜಿ ರಕ್ಷಣೆಯನ್ನು ಕಳೆದ ನವೆಂಬರ್‌ನಲ್ಲಿ ಮರುಪರಿಶೀಲನೆಯ ನಂತರ ಹಿಂಪಡೆಯಲಾಗಿತ್ತು. ಈಗ ಗಾಂಧಿ ಕುಟುಂಬಕ್ಕೆ ಕೇಂದ್ರೀಯ ಮೀಸಲು ಪೊಲೀಸರು (ಸಿಆರ್‌ಪಿಫ್) ಝೆಡ್‌ ಪ್ಲಸ್ ಭದ್ರತೆ ನೀಡುತ್ತಿದ್ದಾರೆ.

ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ಎಚ್.ಡಿ.ದೇವೇಗೌಡ ಮತ್ತು ವಿ.ಪಿ.ಸಿಂಗ್ ಅವರಿಗೆ ನೀಡಿದ್ದ ಎಸ್‌ಪಿಜಿ ಭದ್ರತೆಯನ್ನೂ, ಬೆದರಿಕೆಯ ಸ್ಥಿತಿಗತಿ ಪರಿಶೀಲನೆಯ ಕೇಂದ್ರ ಈ ಹಿಂದೆ ಹಿಂಪಡೆದಿತ್ತು.

ತಮ್ಮ ಭದ್ರತೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿಯಿಂದಲೇ 1985ರಲ್ಲಿ ಇಂದಿರಾ ಗಾಂಧಿ ಹತ್ಯೆ ನಡೆದ ನಂತರ ಅತಿ ಗಣ್ಯ ವ್ಯಕ್ತಿಗಳ ಭದ್ರತೆಗೆ ಪ್ರತ್ಯೇಕ ರಕ್ಷಣಾ ತಂಡದ ಅಗತ್ಯ ಮನಗಂಡ ಸರ್ಕಾರ ಎಸ್‌ಪಿಜಿ ಸ್ಥಾಪಿಸಿತ್ತು. 1991ರಲ್ಲಿ ರಾಜೀವ್ ಗಾಂಧಿ ಹತ್ಯೆಯ ನಂತರ ಇಡೀ ಕುಟುಂಬಕ್ಕೆ ಎಸ್‌ಪಿಜಿ ಭದ್ರತೆ ವಿಸ್ತರಿಸಲಾಯಿತು.

1999ರಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಎಸ್‌ಪಿಜಿ ಭದ್ರತೆಯನ್ನು ಕಾಲಕಾಲಕ್ಕೆ ಮರುಪರಿಶೀಲಿಸುವ ಪರಂಪರೆಗೆ ನಾಂದಿ ಹಾಡಿತ್ತು. 2003ರಲ್ಲಿ ಎಸ್‌ಪಿಜಿ ಭದ್ರತೆಯ ಅವಧಿಯನ್ನು 10 ವರ್ಷಕ್ಕೆ ಮಿತಿಗೊಳಿಸುವ ಕಾನೂನೊಂದನ್ನು ವಾಜಪೇಯಿ ಸರ್ಕಾರಿ ಜಾರಿ ಮಾಡಿತು. ನಂತರ ಪ್ರತಿ ವರ್ಷವೂ ಬೆದರಿಕೆಯ ಮಟ್ಟವನ್ನು ಪರಿಶೀಲಿಸಿ, ಭದ್ರತೆಯ ಪ್ರಮಾಣ ನಿರ್ಧರಿಸುವ ವ್ಯವಸ್ಥೆ ಜಾರಿಯಾಯಿತು. ವಾಜಪೇಯಿ ಅವರು ನಿಧನರಾಗುವವರೆಗೂ ಅವರಿಗೆ ಎಸ್‌ಪಿಜಿ ಭದ್ರತೆ ಇತ್ತು.

ಕಳೆದ ವರ್ಷ ಎಸ್‌ಪಿಜಿ ಕಾಯ್ದೆಯನ್ನು ಪುನಃ ಪರಿಷ್ಕರಿಸಲಾಯಿತು. ಅದರಂತೆ ಅಧಿಕಾರದಿಂದ ನಿರ್ಗಮಿಸಿದ 5 ವರ್ಷಗಳವರೆಗೆ ಮಾತ್ರ ಮಾಜಿ ಪ್ರಧಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಎಸ್‌ಪಿಜಿ ಭದ್ರತೆ ಒದಗಿಸುವ ನಿಯಮ ಜಾರಿಯಾಯಿತು.

error: Content is protected !! Not allowed copy content from janadhvani.com