janadhvani

Kannada Online News Paper

ಸ್ವಾತಂತ್ರ್ಯ ಹೋರಾಟದ ಬಗ್ಗೆ ಇವನಿಗೇನು ಗೊತ್ತು?- ಅನಂತಕುಮಾರ್ ಹೆಗಡೆ ವಿರುದ್ದ ಸಿದ್ದರಾಮಯ್ಯ ಕಿಡಿ

ಮೈಸೂರು(ಫೆ. 02): ಗೋಡ್ಸೆ ಹಾಗೂ ಸಾವರ್ಕರ್ ಪೂಜೆ ಮಾಡೋರಿಂದ ಇನ್ನೇನು ನಿರೀಕ್ಷೆ ಮಾಡಲು ಆಗುತ್ತದೆ ಕ್ರೂರತ್ವ ಮನೋಭಾವದವರಿಗೆ ಸತ್ಯ ಅಹಿಂಸೆ ಅರ್ಥ ಆಗೋಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ವಿರುದ್ದ ಮಾಜಿ‌ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಮಾಜಿ ಕೇಂದ್ರ ಸಚಿವ ಅನಂತಕುಮಾರ್​ ಹೆಗಡೆ, ಯಾರು ದೇಶಕ್ಕಾಗಿ ಶಸ್ತ್ರ ಹಿಡಿದು ಹೋರಾಟಕ್ಕೆ ಇಳಿದರೋ ಅವರೆಲ್ಲಾ ನೇಣಿನ ಉರುಳಿಗೆ ಕೊರಳೊಡ್ಡಿದರು. ಯಾರು ತಮ್ಮ ಪ್ರಖರ ವಿಚಾರಧಾರೆಗಳನ್ನು ಇಟ್ಟುಕೊಂಡು ದೇಶ ಕಟ್ಟಲು ಯತ್ನಿಸಿದರೋ ಅವರೆಲ್ಲಾ ಕತ್ತಲೆ ಕೋಣೆಯಲ್ಲಿ ತಮ್ಮ ಬದುಕನ್ನು ಸವೆಸಿದರು. ಯಾರು ಬ್ರಿಟಿಷರ ಜೊತೆ ಒಪ್ಪಂದ ಮಾಡಿಕೊಂಡು ಸ್ವಾತಂತ್ರ್ಯ ಹೋರಾಟಗಾರ ಎಂಬ ಸರ್ಟಿಫಿಕೇಟ್​ ತೆಗೆದುಕೊಂಡರೋ ಅವರೆಲ್ಲಾ ಇಂದು ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿದ್ದಾರೆ. ಇದೆಲ್ಲಾ ಈ ದೇಶದ ವಿಡಂಬನೆ ಎಂದು ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟವನ್ನು ಸೋಗಲಾಡಿತನದ ಹೋರಾಟ ಎಂದು ವ್ಯಂಗ್ಯ ಮಾಡಿದ್ದರು.

ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಎಷ್ಟು ವರ್ಷ? ಇವನು ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ್ದನಾ? ಸ್ವಾತಂತ್ರ್ಯ ಹೋರಾಟದ ಬಗ್ಗೆ ಇವನಿಗೇನು ಗೊತ್ತು?

ನಾನು ಆಗಸ್ಟ್ 3, 1947ರಂದು ಹುಟ್ಟಿದ್ದೇನೆ. ನಾನು ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ್ದೇನೆ. ಹೆಗಡೆ ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನ ಆದವರ ಹೆಸರು ಹೇಳಲಿ ನೋಡೋಣ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಮಹಾತ್ಮ ಗಾಂಧಿ ಎಷ್ಟು ವರ್ಷ ಜೈಲಿನಲ್ಲಿ ಇದ್ದರು ಗೊತ್ತಾ? ಗಾಂಧಿ ಕೊಂದಿದ್ದು ದೇಶದ್ರೋಹಿನಾ ದೇಶಭಕ್ತಿನಾ? ವಲ್ಲಭಾಯಿ ಪಟೇಲ್ ಪ್ರತಿಮೆ ಮಾಡಿದ್ದು ಯಾರು?
ಅದೆ ಪಟೇಲರು ಆರ್‌ಎಸ್ಎಸ್‌ ಬ್ಯಾನ್ ಮಾಡಿದ್ದರು. ಅದು ಇವನಿಗೆ ಗೊತ್ತಾ? ಕ್ರೂರತ್ವ ಮನೋಭಾವದವರಿಗೆ ಸತ್ಯ, ಅಹಿಂಸೆ ಅರ್ಥ ಆಗೋಲ್ಲ. ಜಗತ್ತಿನಲ್ಲಿ ರಕ್ತಪಾತ ಇಲ್ಲದೆ ಸ್ವಾತಂತ್ರ್ಯ ಪಡೆದ ದೇಶ ಭಾರತ. ಇದರ ಇತಿಹಾಸದ ಅನಂತಕುಮಾರ್ ಹೆಗಡೆಗೆ ಏನು ಗೊತ್ತು? ಇತಿಹಾಸ ಗೊತ್ತಿಲ್ಲ ಅಂದ್ರೆ ಅವರ ಹಿರಿಯರಿಂದ ಕೇಳಿ ತಿಳಿದುಕೊಳ್ಳಲಿ ಎಂದು ಸಿದ್ದರಾಮಯ್ಯ ಹೇಳಿದರು.

ಅಕ್ಕಿ ಕೊಡುವುದು ಬಡವರ ಯೋಜನೆ. ಬಡವರ ಪರವಾದ ಯೋಜನೆ‌ ಮುಂದುವರೆಸಲು ಈ ಸರ್ಕಾರಕ್ಕೆ ಇಷ್ಟ ಇಲ್ಲ. ಕಡಿತ ಮಾಡುತ್ತೇವೆ ಅಂತ ಸಚಿವೆ ಶಶಿಕಲಾ ಜೊಲ್ಲೆ ಹೇಳಿಲ್ಲ. ಇದನ್ನ ಸಿಎಂ ಯಡಿಯೂರಪ್ಪ ಹೇಳಿಸಿರೋದು. ದುಡ್ಡ ಉಳಿಸಿ ಏನು ಮಾಡುತ್ತಾರೆ? ಆಪರೇಷನ್ ಕಮಲ‌ ಮಾಡೋಕಾ? ಒಬ್ಬೊಬ್ಬ ಶಾಸಕರನ್ನ ಕರೆದುಕೊಂಡು ಹೋಗಲು 25 ಕೋಟಿ ರೂ ಕೊಟ್ಟಿದ್ದರು. ಚುನಾವಣೆಗೆ 30 ಕೋಟಿ ಕೊಟ್ಟಿದ್ದರು. ಅಷ್ಟೊಂದು ದುಡ್ಡು ಎಲ್ಲಿಂದ ಬಂತು? ಇದನೆಲ್ಲ ನೋಡಿದ ಮೇಲು ನಿರ್ಮಾಲಾ ಸೀತಾರಾಮನ್ ಭ್ರಷ್ಟಾಚಾರ ಮುಕ್ತ ಸರ್ಕಾರ ಕೊಡುತ್ತೇವೆ ಅಂತಾ ಹೇಳ್ತಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯ ಮಾಡಿದರು.ಇದನ್ನೂ ಓದಿ : ಎಲ್​ಐಸಿಯನ್ನೂ ಮಾರುವ ಹಂತಕ್ಕೆ ದೇಶ ಬಂದಿದೆ; ಇದು ನಿರಾಶೆಯ ಬಜೆಟ್: ಸಿದ್ದರಾಮಯ್ಯ

ಸಚಿವ ಸಂಪುಟ ವಿಸ್ತರಣೆ ವಿಳಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷಾಂತರಿ ಶಾಸಕರಿಗೆ ಹಾಗೇ ಆಗಬೇಕು. ನನ್ನ ಪ್ರಕಾರ ಈಗ ಅವರು ಅತಂತ್ರರಾಗಿರೋದು ಸರಿಯಾಗಿಯೇ ಇದೆ. ಪಕ್ಷ ದ್ರೋಹಿಗಳಿಗೆ ಇದೇ ಥರ ಆಗಬೇಕು ಎಂದು ಹೇಳಿದರು.

error: Content is protected !! Not allowed copy content from janadhvani.com